Site icon Vistara News

Karnataka Elections 2023 : ಸಿದ್ದರಾಮಯ್ಯ ಮುಸ್ಲಿಮರ ನಾಯಕ, ಡಿಕೆಶಿ ಕ್ರಿಮಿನಲ್‌ಗಳ ನೇತಾರ ಎಂದ ಶೋಭಾ ಕರಂದ್ಲಾಜೆ

Shobha karandlaje

#image_title

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಹಿಂದೂ ವಿರೋಧಿ ಮತ್ತು ಮುಸಲ್ಮಾನರ ನಾಯಕ, ಅದೇ ಪಕ್ಷದ ಡಿ.ಕೆ.ಶಿವಕುಮಾರ್ ಕ್ರಿಮಿನಲ್‍ಗಳ, ರಸ್ತೆಯಲ್ಲಿ ಗೋಹತ್ಯೆ ಮಾಡುವವರ ನೇತಾರ ಎಂದು ಕೇಂದ್ರ ಸಚಿವೆ ಮತ್ತು ಬಿಜೆಪಿ ರಾಜ್ಯ ಚುನಾವಣಾ ಸಮಿತಿ (Karnataka Elections 2023) ಸಂಚಾಲಕರಾದ ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಕೈ ಕೊಳಕಾಗಿದೆ. ಕಾಂಗ್ರೆಸ್ ಕೈಗೆ ರಕ್ತ ಅಂಟಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಪರಾಧಿಗಳ ಜೊತೆ ಕೈ ಜೋಡಿಸಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ನನ್ನ ಸಹೋದರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ತಡೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಕೇರಳದ ಕಣ್ಣೂರಿನಲ್ಲಿ ನಡು ರಸ್ತೆಯಲ್ಲಿ ಗೋವುಗಳನ್ನು ಹತ್ಯೆ ಮಾಡಿದ್ದ ಕಾಂಗ್ರೆಸ್ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರಿಜಿನ್ ಚಂದ್ರನ್ ಬಳಿಕ ಗೋವಿನ ರಕ್ತದ ಜೊತೆ ಚೆಲ್ಲಾಟವಾಡಿದ್ದ. ಇಂತವನ ಜೊತೆ ಡಿ.ಕೆ.ಶಿವಕುಮಾರ್ ಓಡಾಡುತ್ತಾರೆ. ರಾಹುಲ್ ಗಾಂಧಿ ಇವನ ಜೊತೆ ಪಾದಯಾತ್ರೆ ಮಾಡುತ್ತಾರೆʼʼ ಎಂದು ಕಿಡಿಕಾರಿದರು.

ʻʻಹಿಂದೂ ಯುವಕರ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡಿದೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್‍ಐ ಕಾರ್ಯಕರ್ತರು ತಪ್ಪಿತಸ್ಥರೆಂದು ಸಾಬೀತಾಗಿ ಜೈಲಿನಲ್ಲಿದ್ದಾರೆ. ಪಿಎಫ್‍ಐ ವಿರುದ್ಧ ಇದ್ದ 175 ಪ್ರಕರಣಗಳನ್ನು ವಾಪಸ್ ಪಡೆಯಬಾರದೆಂದು ಗೃಹ ಇಲಾಖೆಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ 1,700 ಪಿಎಫ್‍ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡಿತುʼʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್‍ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ

ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಕೈ ಕಲುಷಿತಗೊಂಡಿದೆ. ಕಾಂಗ್ರೆಸ್ ಕೈಗೆ ರಕ್ತ ಅಂಟಿದೆ ಎಂದು ಅವರು ಹೇಳಿದರು. ದೇಶದ್ರೋಹಿಗಳು, ಅಪರಾಧಿಗಳ ಜೊತೆ ನಿಂತಿರುವ ಕಾಂಗ್ರೆಸ್ ಅನ್ನು ರಾಜ್ಯದ ಜನ ಒಪ್ಪುವುದಿಲ್ಲ. ಮತ್ತು ಜನತೆ ಅವರ ಮಾತುಗಳಿಗೆ ಮರುಳಾಗುವುದಿಲ್ಲ. ಹಣದ ಅಹಂಕಾರದಿಂದ ಮೆರೆಯುತ್ತಿರುವ ಕಾಂಗ್ರೆಸ್‍ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಶ್ರದ್ಧೆ, ನಮ್ಮ ಭಾವನೆಗಳ ವಿರುದ್ಧ ಇವತ್ತು ಕಾಂಗ್ರೆಸ್ ಪಕ್ಷವು ಮಾತನಾಡುತ್ತಿದೆ. ಎಲ್ಲವನ್ನು ರೋಲ್ ಬ್ಯಾಕ್ ಮಾಡುವುದಾಗಿ ಹೇಳುತ್ತಾರೆ. ಅದಕ್ಕಾಗಿ ರಾಜ್ಯದ ಜನರು ರೋಲ್ ಬ್ಯಾಕ್ ಮಾಡುತ್ತಾರೆ. ರೋಲ್ ಬ್ಯಾಕ್ ಮಾಡುವುದು, ಕಾಂಗ್ರೆಸ್ಸನ್ನು ಮನೆಗೆ ಕಳುಹಿಸುವುದನ್ನು ಮಾಡಲಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿ ಉಳಿದಲ್ಲ. ಅದೇ ರೀತಿಯ ಪರಿಸ್ಥಿತಿ ಕರ್ನಾಟಕದಲ್ಲಿ ಬರಲಿದೆ ಎಂದು ನುಡಿದರು.

ಮಾಧ್ಯಮ ಗೋಷ್ಠಿಯಲ್ಲ್ಲಿ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ ಪ್ರಚಾರಕರ ಪಟ್ಟಿಯಲ್ಲಿ ಇಮ್ರಾನ್ ಪ್ರತಾಪ್ ಗಡಿ; ಶೋಭಾ ಕರಂದ್ಲಾಜೆ ಆಕ್ರೋಶ

Exit mobile version