ಚಿಕ್ಕಮಗಳೂರು: ಇತ್ತೀಚೆಗಷ್ಟೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ (YSV Datta) ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ, ಅವರ ಬೆಂಬಲಿಗರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಚುನಾವಣಾ ಕಣದಿಂದ ಹಿಂದೆ ಸರಿಯದ ದತ್ತ ಅವರು, ಪಕ್ಷೇತರ ಇಲ್ಲವೇ ಆಮ್ ಆದ್ಮಿ ಪಾರ್ಟಿ ಮೂಲಕ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಈಗ ಪಕ್ಷೇತರರಾಗಿ ಕಣಕ್ಕೆ ಇಳಿಯಲು ನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬೆಂಬಲಿಗರ ಬಳಿ ಟವೆಲ್ ಒಡ್ಡಿ ಭಿಕ್ಷೆ ಬೇಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಮತ್ತೊಂದು ಬಂಡಾಯ ಬಿಸಿ ತಟ್ಟಿದೆ.
ತಮ್ಮ ಮುಂದಿನ ಸ್ಪರ್ಧೆ ಬಗ್ಗೆ ಭಾನುವಾರ (ಏ. 9) ಸ್ವಾಭಿಮಾನದ ಸಭೆ ಕರೆದಿದ್ದ ದತ್ತ ಅವರು, ಕಾಂಗ್ರೆಸ್‌ನಿಂದ ತಮಗಾದ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಮುಂದಿನ ನಿರ್ಧಾರ ಏನಾಗಬೇಕು ಎಂದು ಕಾರ್ಯಕರ್ತರ ಬಳಿ ಕೇಳಿದ್ದಾರೆ. ಎಲ್ಲರೂ ಸಹ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತಕ್ಕ ಪಾಠ ಕಲಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಪಕ್ಷೇತರ ಸ್ಪರ್ಧೆಗೆ ನಿರ್ಧಾರ
ಈಗಾಗಲೇ ಜೆಡಿಎಸ್‌ನಿಂದ ಹೊರಗೆ ಬಂದಿರುವುದರಿಂದ ಆ ಪಕ್ಷದಲ್ಲಿ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಪುನಃ ಆ ಪಕ್ಷಕ್ಕೆ ಹೋಗಲು ಆಗುವುದಿಲ್ಲ. ಕಾಂಗ್ರೆಸ್‌ನಲ್ಲಿಯೂ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವ ಯಾವುದೇ ಚಾನ್ಸ್ ಇಲ್ಲ. ಇನ್ನು ಉಳಿದಿರುವುದು ಆಮ್ ಆದ್ಮಿ ಪಕ್ಷ ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಗಿದೆ. ಕೊನೆಗೆ ತಾವು ಪಕ್ಷೇತರವಾಗಿಯೇ ಸ್ಪರ್ಧೆ ಮಾಡುವುದಾಗಿ ಬೆಂಬಲಿಗರ ಒತ್ತಾಯದ ನಡುವೆ ದತ್ತಾ ಘೋಷಣೆ ಮಾಡಿದರು. ಅಲ್ಲದೆ, ತಮಗೆ ಚುನಾವಣೆಯಲ್ಲಿ ಹಣ ಖರ್ಚು ಮಾಡುವ ಶಕ್ತಿ ಇಲ್ಲ ಎಂದು ಹೇಳಿದ ದತ್ತ, ಯಾವಾಗಲೂ ತಾವು ಹೆಗಲ ಮೇಲೆ ಹಾಕಿಕೊಳ್ಳುವ ಟವೆಲ್ ಅನ್ನು ಬೆಂಬಲಿಗರ ಮುಂದೆ ಹಿಡಿದು ಭಿಕ್ಷೆ ಬೇಡಿದ್ದಾರೆ.
ನೀವು ಕೊಡುವ ಹಣದಿಂದಲೇ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ನೀವೆಲ್ಲರೂ ನಿಮ್ಮ ಕೈಲಾಗುವ ಸಹಾಯ ಮಾಡಿ ಎಂದು ದತ್ತ ಟವೆಲ್ ಹಿಡಿದು ಬೇಡಿಕೊಂಡಿದ್ದಾರೆ. ಹೀಗಾಗಿ ಕೆಲವು ಬೆಂಬಲಿಗರು, 500 ರೂಪಾಯಿಯಿಂದ ಸಾವಿರಾರು ರೂಪಾಯಿಯನ್ನು ಅವರಿಗೆ ದಾನದ ರೂಪದಲ್ಲಿ ನೀಡಿದರೆ, ಮತ್ತೆ ಕೆಲವು ಅಭಿಮಾನಿಗಳು 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ಹಾಗೂ 2 ಲಕ್ಷ ರೂಪಾಯಿಯ ಚೆಕ್ ಅನ್ನು ಸಹ ನೀಡಿದ್ದಾರೆ.
ಮತ್ತಷ್ಟು ಹಣ ಕೊಡ್ತೀವಿ
ಇದೇ ವೇಳೆ ದತ್ತ ಬೆಂಬಲಕ್ಕೆ ನಿಂತಿರುವ ಅಭಿಮಾನಿಗಳು, ಈಗ ಕೊಟ್ಟಿರುವ ಹಣವನ್ನು ನೀವು ಚುನಾವಣೆಗಾಗಿ ಖರ್ಚು ಮಾಡಿ. ನಾವು ಮತ್ತಷ್ಟು ಹಣವನ್ನು ಕೊಡುತ್ತೇವೆ. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಲ್ಲಿ ನೀವೇ ಗೆಲ್ಲಬೇಕು ಎಂದು ಅಭಿಮಾನಿಗಳು ಬೆನ್ನಿಗೆ ನಿಂತಿದ್ದಾರೆ.
ಇದನ್ನೂ ಓದಿ: Modi in Karnataka: ದೇಶದಲ್ಲೀಗ 3,167 ಹುಲಿ; ಹತ್ತು ವರ್ಷದಲ್ಲಿ ಡಬಲ್: IBCAಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಟವೆಲ್ ನನ್ನ ಗುರುತು, ನಿಮ್ಮ ಮನೆಗೆ ಬರುತ್ತೇನೆ- ದತ್ತ
ಬೆಂಬಲಿಗರಿಂದ ಸಮಾಧಾನ ಪಡೆದ ದತ್ತ ಅವರು, ಸಭೆ ಮುಗಿಯುತ್ತಿದ್ದಂತೆ ರೆಬೆಲ್ ಆದ ರೀತಿ ಕಂಡರು. ಯಾವುದೇ ಕಾರಣಕ್ಕೂ ತಾವು ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಲ್ಲೆ, ಟವೆಲ್ ಹಿಡಿದು ಅಭಿಮಾನಿಗಳ ಹತ್ತಿರ ಸಾಗಿದರು. “ಟವೆಲ್ ನನ್ನ ಗುರುತು, ನಿಮ್ಮ ಮನೆಗೆ ಟವೆಲ್ ಹಿಡಿದುಕೊಂಡೇ ಬರುತ್ತೇನೆ. ನನಗೆ ಧನ ಸಹಾಯ ಮಾಡಿ ಎಂದು ಹೇಳುವ ಮೂಲಕ ಸಾಂಕೇತಿಕವಾಗಿ ಸಭೆ ಸೇರಿದ್ದ ಅಭಿಮಾನಿಗಳ ಬಳಿ ಟವೆಲ್ ಹಿಡಿದು ಭಿಕ್ಷೆ ಬೇಡಿದರು.