ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿಗೆ ಗರಿಷ್ಠ 65 ಸೀಟು ಬರಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, 65 ಸೀಟು ಬರುವುದು ಬಿಜೆಪಿಗಲ್ಲ, ಕಾಂಗ್ರೆಸ್‌ಗೆ ಎಂದಿದ್ದಾರೆ. ಅವರು ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಗೆ 65 ಸ್ಥಾನ ಬರುತ್ತದೆ ಎಂದು ತಪ್ಪಾಗಿ ಹೇಳಿದ್ದಾರೆ. ಅವರು ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾನ 65 ಎಂದು ಬಹುಶಃ ಹೇಳುತ್ತಿದ್ದಾರೆ ಎಂದು ಗೇಲಿ ಮಾಡಿದರು.
ಎಲ್ಲಾ 224 ಕ್ಷೇತ್ರಗಳಲ್ಲೂ ಬಿಜೆಪಿ ಚಟುವಟಿಕೆ
ʻʻಬಿಜೆಪಿಯಿಂದ ಚುನಾವಣೆಯ ಮೂರನೇ ಹಂತದ ಪ್ರಚಾರ ನಡೆಯುತ್ತಿದೆ. ಬೂತ್ ವಿಜಯ, ಬೂಟ್ ಮಟ್ಟದ ವಿಜಯ ಸಂಕಲ್ಪ, ಈಗ ವಿಜಯ ಸಂಕಲ್ಪ ರಥಯಾತ್ರೆ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲೆಯಲ್ಲಿ ಮೋರ್ಚಾಗಳ ಸಮ್ಮೇಳನ ಆಗುತ್ತಿದೆ. ನನ್ನ ಪ್ರಕಾರ 224 ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆʼʼ ಎಂದರು ಬೊಮ್ಮಾಯಿ.
ಹಲವಾರು ಆಯಾಮಗಳ ಮೇಲೆ ಟಿಕೆಟ್ ನಿರ್ಧಾರ
ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಹಾಗೇನಿಲ್ಲ, ಹಲವಾರು ಆಯಾಮಗಳಲ್ಲಿ ಸಮೀಕ್ಷೆ ಮಾಡಿ ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಒಂದೇ ಬಾರಿಗೆ ಟಿಕೆಟ್ ತಪ್ಪುತ್ತದೆ ಎಂದು ಹೇಳುವುದು, ಅಥವಾ ಎಲ್ಲರಿಗೂ ಸಿಗಲಿದೆ ಎನ್ನುವುದು ರಾಜಕಾರಣದಲ್ಲಿ ಸರಿಯಲ್ಲʼʼ ಎಂದರು.
ಜನಾರ್ದನ ರೆಡ್ಡಿ ಬಿಜೆಪಿ ಸೇರುವ ವಿಶ್ವಾಸ
ಜನಾರ್ದನ ರೆಡ್ಡಿಯವರು ಬಿಜೆಪಿ ಗೆ ಪುನಃ ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಇನ್ನೂ ತಮ್ಮ ತೀರ್ಮಾನವನ್ನು ಪ್ರಕಟ ಮಾಡಿಲ್ಲ. ಮೂರು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ನಿರ್ಣಯವನ್ನು ಅವರು ತೆಗೆದುಕೊಳ್ಳುತ್ತಾರೆ. ಅವರು ಮತ್ತು ಬಿಜೆಪಿಗೆ ಹಳೆ ಸಂಬಂಧವಿರುವುದು ಸತ್ಯ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ಪಕ್ಷಾಂತರದ ಬಗ್ಗೆ ಊಹಾಪೋಹ
ಕೆಲವು ನಾಯಕರು ಪಕ್ಷಾಂತರ ಮಾಡುವ ಬಗ್ಗೆ ಕೆಲವು ಊಹಾಪೋಹಗಳಿವೆ. ಚುನಾವಣೆ ಸಮಯದಲ್ಲಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗಿಬರುವವರಿದ್ದಾರೆ. ಕಾದು ನೋಡೋಣ ಎಂದರು ಬೊಮ್ಮಾಯಿ.
ಮಾರ್ಚ್ 12ರಂದು ಐಐಟಿ, ಜಯದೇವ ಆಸ್ಪತ್ರೆ ಉದ್ಘಾಟನೆ
ಮಾರ್ಚ್ 12ರಂದು ಪ್ರಧಾನಮಂತ್ರಿಯವರು ಧಾರವಾಡಕ್ಕೆ ಆಗಮಿಸುತ್ತಿದ್ದು, ಐ.ಐ.ಟಿ, ಜಲ್ ಜೀವನ್ ಮಿಷನ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಹಣ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಬಂದರುಗಳಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ, ವಿಶೇಷವಾಗಿ ರಾಜ್ಯ ಹಾಗೂ ಅಂತರರಾಜ್ಯಗಳ ಮೂಲಭೂತ ಸೌಕರ್ಯಗಳಿಗೆ ಬಹಳ ದೊಡ್ಡ ಪ್ರಮಾಣದ ಕೊಡುಗೆಯನ್ನು ಪ್ರಧಾನಿಗಳು ನೀಡಿದ್ದಾರೆ. ಅವೆಲ್ಲವೂ ಲೋಕಾರ್ಪಣೆಯಾಗುತ್ತಿದೆ. ಕಳೆದ 5 ವರ್ಷಗಳ ಸಹಾಯದ ಫಲಶ್ರುತಿ ಇಂದು ದೊರೆಯುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ನಂಬರ್ ಒನ್ ಐಐಟಿ ಮಾಡುವ ಉದ್ದೇಶ
ಹಂತ ಹಂತವಾಗಿ ಐಐಟಿಗೆ ಅನುದಾನ ಒದಗಿಸಲಾಗಿದೆ. ಐಐಟಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು ದೇಶದಲ್ಲಿಯೇ ನಂಬರ್ ಒನ್ ಐಐಟಿ ಮಾಡುವ ಉದ್ದೇಶವಿದೆ. ಧಾರವಾಡ ಸರಸ್ವತಿಯ ನಗರ. ಇಲ್ಲಿ ಐಐಟಿ ಸ್ಥಾಪನೆಯಾಗಿರುವುದು ಕಿರೀಟ ಪ್ರಾಯವಾಗಿದೆ ಎಂದರು.
ಇದನ್ನೂ ಓದಿ : Karnataka Election : ಎಲ್ಲ ಬಿಜೆಪಿ ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ಸಂದೇಶ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ