Site icon Vistara News

Karnataka Elections announced : ಕೊಪ್ಪಳ, ಹಾವೇರಿ ಜಿಲ್ಲಾ ಪ್ರವಾಸ ರದ್ದು ಮಾಡಿದ ಸಿಎಂ ಬೊಮ್ಮಾಯಿ

CM Bommai

#image_title

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಲು (Karnataka Elections announced) ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಕರೆದಿರುವ ಬೆನ್ನಿಗೇ ರಾಜ್ಯ ಅಧಿಕೃತ ಚುನಾವಣಾ ಮೋಡ್‌ಗೆ ತೆರಳಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮೆಲ್ಲ ಜಿಲ್ಲಾ ಪ್ರವಾಸಗಳನ್ನು ರದ್ದುಪಡಿಸಿ ಮನೆಯಲ್ಲೇ ಉಳಿದಿದ್ದಾರೆ.

ಬೆಳಗ್ಗೆ 11.30ಕ್ಕೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಡೆಯಲಿದೆ. ಅದು ಚುನಾವಣೆಯ ಅಧಿಸೂಚನೆ ಪ್ರಕಟಿಸಿದ ಕ್ಷಣದಿಂದಲೇ ನೀತಿ ಸಂಹಿತೆಗಳು ಜಾರಿಗೆ ಬರಲಿವೆ. ಎಲ್ಲಾ ಮಂತ್ರಿಗಳು ಮಾಜಿಗಳಾಗಲಿದ್ದು ಮುಖ್ಯಮಂತ್ರಿಗಳು ಉಸ್ತುವಾರಿ ಮುಖ್ಯಮಂತ್ರಿ, ಜೋಪಾಸನಾ ಮುಖ್ಯಮಂತ್ರಿಗಳಾಗಲಿದ್ದಾರೆ.

ಬೆಳಗ್ಗೆ 11.30ರ ನಂತರ ಯಾವುದೇ ಹೊಸ ಯೋಜನೆ ಘೋಷಣೆ ಮತ್ತು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವಂತಿಲ್ಲ ಎಂಬ ನಿಯಮವಿದೆ. ಚುನಾವಣೆ ಘೋಷಣೆಯಾದ ಬಳಿಕ ಸಿಎಂ ಸೇರಿದಂತೆ ಯಾರೂ ಅಧಿಕೃತ ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. 2018ರಲ್ಲಿ ಚುನಾವಣೆ ಘೋಷಣೆಯಾದಾಗ ಆಗಿನ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿದ್ದರು. ಅವರು ಡಾ.ಕೆ. ಸುಧಾಕರ್‌ ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಹೋಗಿದ್ದರು. ಆಗ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ವಾಪಸ್‌ ಆಗಿದ್ದರು. ಅದಕ್ಕಿಂತ ಮೊದಲು ಹಲವು ಬಾರಿ ಈ ರೀತಿಯ ಘಟನೆಗಳು ನಡೆದಿದ್ದವು.

ಬುಧವಾರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳ ಮತ್ತು ಹಾವೇರಿ ಜಿಲ್ಲಾ ಪ್ರವಾಸ ಹಾಕಿಕೊಂಡಿದ್ದರು. ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನಡೆಬೇಕಾಗಿತ್ತು. ಚುನಾವಣೆ ಘೋಷಣೆಯ ವಿಚಾರ ಹೊರಬಂದ ಬಳಿಕವೂ ಸಚಿವ ಹಾಲಪ್ಪ ಅಚಾರ್‌ ಅವರು ತಮ್ಮ ಜಿಲ್ಲೆಗೆ ಬರುವಂತೆ ಸಿಎಂ ಅವರ ಮೇಲೆ ಒತ್ತಡ ಹೇರಿದ್ದರು.

ಬೊಮ್ಮಾಯಿ ಅವರು ಸರ್ಕಾರಿ ಕಾರಿನಲ್ಲಿ ಹೋಗಿ ಖಾಸಗಿ ಕಾರಿನಲ್ಲಿ ಮರಳಿಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಅವರ ಸರ್ಕಾರಿ ಕಾರನ್ನು ಹೊರಗೆ ತೆಗೆದು ಸಿದ್ಧಪಡಿಸಿಯೂ ಇಡಲಾಗಿತ್ತು. ಆದರೆ, ಸಿಎಂ ಮಾತ್ರ ಅಲ್ಲಿಗೆ ಹೋಗಲು ಮನಸು ಮಾಡಿಲ್ಲ.

ತಮ್ಮ ಅಧಿಕೃತ ಜಿಲ್ಲಾ ಪ್ರವಾಸ ರದ್ದು ಮಾಡಿದ ಸಿಎಂ ಹಾಲಪ್ಪ ಆಚಾರ್‌ ಅವರ ಜತೆಗೂ ಮಾತನಾಡಿದ್ದಾರೆ. ಅಲ್ಲಿ ತಲುಪುವುದು ತಡವಾಗಬಹುದು. ತಡವಾಗಿ ಉದ್ಘಾಟನೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಆಗಬಹುದು. ಇದು ವಿರೋಧ ಪಕ್ಷಗಳಿಗೂ ಆಹಾರವಾಗಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೊಪ್ಪಳ, ಹಾವೇರಿ ಪ್ರವಾಸ ರದ್ದು ಮಾಡಿ ಮನೆಯಲ್ಲಿ ಇರಲು ತೀರ್ಮಾನಿಸಿರುವ ಸಿಎಂ ಅಲ್ಲೇ ಹಿರಿಯ ಸಚಿವರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಚುನಾವಣೆ ಘೋಷಣೆ ಕುರಿತ ಪತ್ರಿಕಾಗೋಷ್ಠಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಅವರು, ಇದು ನಿರೀಕ್ಷಿತ ಎಂದರು. ಕಳೆದ ಬಾರಿ ಮಾರ್ಚ್‌ 27ರಂದು ಚುನಾವಣೆ ಘೋಷಣೆಯಾಗಿತ್ತು. ಹೀಗಾಗಿ ಅದರ ಆಸುಪಾಸಿನಲ್ಲೇ ನಡೆಯುವ ನಿರೀಕ್ಷೆ ಇತ್ತು ಎಂದರು. ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ ಅನ್ನೋದನ್ನು ಕಾದುನೋಡಿ ಎಂದರು ಸಿಎಂ.

ಇದನ್ನೂ ಓದಿ Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ

Exit mobile version