Site icon Vistara News

Karnataka Elections : ಈಶ್ವರಪ್ಪನವ್ರೇ ಬಿಜೆಪಿ ತಾಳಿ ಬಿಚ್ಚಿಟ್ಟು ಬರ್ತೀನಿ, ತಾಕತ್ತಿದ್ದರೆ ಎದುರಿಸಿ: ಆಯನೂರು ಸವಾಲು

Ayanuru-Manjunath

ಶಿವಮೊಗ್ಗ: ಶಿವಮೊಗ್ಗ ಬಿಜೆಪಿಯೊಳಗಿನ ಭಿನ್ನಮತ ಈಗ ಬಟಾಬಯಲಾಗಿದೆ. ಒಂದು ಕಾಲದಲ್ಲಿ ಆಪ್ತರಾಗಿದ್ದು, ಈಗ ಶುದ್ಧ ಹಾವು-ಮುಂಗುಸಿಗಳಂತೆ ಆಡುತ್ತಿರುವ ಆಯನೂರು ಮಂಜುನಾಥ್‌ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ರಾಜಕೀಯ ವೈಷಮ್ಯ ತಾರಕಕ್ಕೇರಿ ಇದೀಗ ಅದು ಚುನಾವಣಾ ಕಣ ಪ್ರವೇಶಕ್ಕೆ ಹಾದಿ ಮಾಡಿಕೊಟ್ಟಿದೆ.

ಬಿಜೆಪಿ ಹಿರಿಯ ನಾಯಕ ಆಯನೂರು ಮಂಜುನಾಥ್‌ ಅವರು ಇದೀಗ ಶಿವಮೊಗ್ಗ ನಗರ ಶಾಸಕ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿದ್ದು, ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಣಕ್ಕಿಳಿಯುವುದಾಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ತಂದೇನಾದ್ರೂ ಬರಲಿ, ಮಗನಾದ್ರೂ ಬರಲಿ, ಮೂರನೇ ಸ್ಥಾನಕ್ಕೆ ತಳ್ಳಿಯೇ ಸಿದ್ಧ ಎಂದು ಪಂಥಾಹ್ವಾನ ನೀಡಿದ್ದಾರೆ. ತಮ್ಮ ಆಕ್ರೋಶವನ್ನು ಶಾಂತ ಶಬ್ದಗಳಿಂದಲೇ ಹೊರಹಾಕುತ್ತಾ ಈಶ್ವರಪ್ಪ ಅವರನ್ನು ಬಗೆ ಬಗೆಯಲ್ಲಿ ಬಗೆದು ಹಾಕಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್‌ ಅವರು ಈ ಬಾರಿ ಈಶ್ವರಪ್ಪ ಬದಲು ತಮಗೆ ಬಿಜೆಪಿ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಒಂದು ವೇಳೆ ಈಶ್ವರಪ್ಪನವರಿಗೆ ನೀಡದೇ ಹೋದರೂ ಮಗ ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ಸುದ್ದಿ ಇದೆ. ಇದು ಆಯನೂರು ಮಂಜುನಾಥ್‌ ಅವರಿಗೆ ಬಿಜೆಪಿಯಲ್ಲಿ ಸ್ಪರ್ಧೆಯ ಅವಕಾಶದ ಬಾಗಿಲು ಮುಚ್ಚಿದಂತಾಗಿದೆ. ಹೀಗಾಗಿ ಕೆರಳಿ ಕೆಂಡವಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಕಾಂಗ್ರೆಸ್‌ ಬಾಗಿಲು ತಟ್ಟಿದ್ದಾರಾದರೂ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಜೆಡಿಎಸ್‌ಗೆ ಹೋಗುತ್ತಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅಂತೂ ಈಗ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಣಕ್ಕಿಳಿಯುವುದು ಖಚಿತ. ಆಗ ಬಿಜೆಪಿಯಿಂದ ಅವರನ್ನು ಹೊರಹಾಕುವ ಸಾಧ್ಯತೆಗಳು ದಟ್ಟವಾಗಿದೆ.

ಈಶ್ವರಪ್ಪ ಸವಾಲು ಸ್ವೀಕರಿಸಿದ್ದೇನೆ

ʻʻಚುನಾವಣೆಯಲ್ಲಿ ಕಣಕ್ಕೆ ಇಳಿಬೇಕೆಂಬ ಸದಿಚ್ಛೆಯಿಂದ ನನ್ನ ನಿಲುವು, ಭಾವನೆ ಈಗಾಗಲೇ ಪ್ರಕಟ ಮಾಡಿದ್ದೇನೆ. ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ. ನನಗೆ ಟಿಕೆಟ್ ಸಿಗುವ ಲಕ್ಷಣ ಕಂಡುಬರುತ್ತಿಲ್ಲ. ಮೊನ್ನೆ ಈಶ್ವರಪ್ಪ ನೀಡಿರುವ ಹೇಳಿಕೆ ಗಂಭೀರವಾಗಿ ಪರಿಗಣಿಸಿದ್ದೇನೆ. ಅವರ ನಾಲಿಗೆ ಹಿಡಿತದಲ್ಲಿಲ್ಲ. ನನ್ನ ಬಗ್ಗೆ ಏಕವಚನ ಪ್ರಯೋಗ ಮಾಡಿದ್ದಾರೆ. ಅವನು ಯಾವ ಲೆಕ್ಕ ಎನ್ನುವ ಅವರ ಸವಾಲು ಸ್ವೀಕರಿಸಿದ್ದೇನೆ. ನನ್ನ ಹಿತೈಷಿಗಳ ಜೊತೆ ಚರ್ಚಿಸಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದೇನೆʼʼ ಎಂದು ಮಂಜುನಾಥ್‌ ಹೇಳಿದರು.

ʻʻಈಶ್ವರಪ್ಪ ಅವರೊಬ್ಬ ಪ್ರಭಾವಿ ರಾಜಕಾರಣಿ. ಆದರೆ, ಅವರ ಪ್ರಭಾವ ಎಷ್ಟರಮಟ್ಟಿಗೆ ಅಂದ್ರೆ ಶಿವಮೊಗ್ಗ ಬಿಟ್ಟು ಬೇರೆ ಕಡೆ ನಿಂತು ಗೆಲ್ಲುವುದಿಲ್ಲʼʼ ಎಂದು ಲೇವಡಿ ಮಾಡಿದ ಮಂಜುನಾಥ್‌, ʻʻರಾಜಕೀಯ ಲೆಕ್ಕ ಕೊಡ್ತೇನೆ. ನಿಮ್ಮ ಗೋಡೌನ್ ನಲ್ಲಿರುವ ಕೌಂಟಿಂಗ್ ಮಷಿನ್ ಹೊರತನ್ನಿ ಎಂದರು.

ನೀವು ಶಾಸಕ ಸ್ಥಾನದ ಆಕಾಂಕ್ಷಿಯಲ್ಲ, ಮಂತ್ರಿ ಮಾತ್ರ!

ʻʻಈಶ್ವರಪ್ಪನವರೇ ನೀವು ಈ ಬಾರಿ ನಿಮ್ಮ ಮಗನಿಗೆ ಟಿಕೆಟ್‌ ಕೇಳಿದ್ದೀರಿ. ನಿಮ್ಮ ಮಗನಿಗೇ ಟಿಕೆಟ್ ಕೊಟ್ಟು ನಿಲ್ಲಿಸಿ. ನಾನಂತೂ ನಿಲ್ಲುವುದು ಖಚಿತ. ಮಾತ್ರವಲ್ಲ ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳುತ್ತೇನೆʼʼ ಎಂದರು.

ಕಳೆದ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮಂತ್ರಿ ಖಾತೆ ನೀಡದಿದ್ದರೆ ಅಧಿವೇಶನಕ್ಕೆ ಬರುವುದಿಲ್ಲ ಎಂದು ಹಠ ಹಿಡಿದಿದ್ದ ಈಶ್ವರಪ್ಪನವರನ್ನು ಚೆನ್ನಾಗಿ ಕೆಣಕಿದ ಆಯನೂರು ಮಂಜುನಾಥ್‌, ʻʻನೀವು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎನ್ನುವುದು ನನಗೆ ಗೊತ್ತು. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು. ಆದರೆ, ನಮ್ಮಲ್ಲಿ ನೇರವಾಗಿ ಮಂತ್ರಿಯಾಗುವ ಅವಕಾಶ ಇಲ್ಲದೆ ಹೋಯ್ತು! ಈಶ್ವರಪ್ಪನವರೇ ನಿಮಗೆ ಅಧಿಕಾರದ ಹಪಾಹಪಿಯಿದೆ. ಮಂತ್ರಿ ಸ್ಥಾನ ಕೊಡದಿದ್ದರೆ ವಿಧಾನಸೌಧಕ್ಕೆ ಬರೋದಿಲ್ಲ ಅಂದೋರು ನೀವು. ಪ್ರಜಾಪ್ರಭುತ್ವ ಕ್ಕೆ ಅಪಚಾರ ಮಾಡಿದವರುʼʼ ಎಂದು ಹೇಳಿದರು

ನೀವು ನೇಣು ಹಾಕಿಕೊಂಡಿರಾ ಈಶ್ವರಪ್ಪನವರೇ..

ʻʻಬಿ.ಎಸ್‌. ಯಡಿಯೂರಪ್ಪ ರಿಗೆ ಎಷ್ಟು ಬೇಕೋ ಅಷ್ಟು ಅಪಮಾನ ಮಾಡಿದ್ದೀರಿ. ಅವರು ಸಿಎಂ ಆಗಿ ಶಿವಮೊಗ್ಗಕ್ಕೆ ಬಂದಾಗ ಸಚಿವರಾಗಿ ನೀವು ಸ್ವಾಗತಿಸಿದ್ದೀರಾ? ಹೋಗುವಾಗ ಗೌರವದಿಂದ ಬೀಳ್ಕೊಟ್ಟಿದ್ದೀರಾ?ʼʼ ಎಂದು ಹಳೆ ವಿಷಯಗಳನ್ನೆಲ್ಲ ಕೆಣಕಿದ್ದಾರೆ.

ʻʻಯಡಿಯೂರಪ್ಪ ಕಷ್ಟದಲ್ಲಿದ್ದಾಗ ಸ್ಪಂದಿಸಲಿಲ್ಲ. ಯಡಿಯೂರಪ್ಪ ಬಂಧನ ಆದಾಗ ನೀವು ಏನು ಹೇಳಿದಿರಿ? ನಾನಾಗಿದ್ದರೆ ನೇಣು ಹಾಕಿಕೊಳ್ತಿದ್ದೆ ಅಂದ್ರಿ. ಕೊನೆಗೆ ನಿಮ್ಮ ಮೇಲೆಯೇ ಆರೋಪ ಬಂದಾಗ ನೇಣು ಬೇಡ, ಹಗ್ಗನಾದ್ರೂ ತಂದಿಟ್ರಾ? ನಿಮ್ಮ ಬದಲಿಗೆ ಅಮಾಯಕ ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ರಿʼ ಎಂದು ಗುತ್ತಿಗೆದಾರರಿಗೆ ಹಣ ಪಾವತಿಸಲು ಲಂಚ ನೀಡಬೇಕು ಎಂಬ ಆರೋಪವನ್ನು ನೆನಪಿಸಿದರು.

ʻʻʻನಾನು 24 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ನನ್ನ 24 ವರ್ಷಗಳ ಅವಧಿಯಲ್ಲಿ ಯಾವುದೇ ಆಪಾದನೆ ಬಂದಿಲ್ಲ. ಯಾರಿಗೂ ದ್ರೋಹ ಮಾಡಿಲ್ಲ. ಆದರೆ, ನೀವು ಸಿಎಂ ಬಿಎಸ್‌ವೈ ವಿರುದ್ಧವೇ ರಾಜ್ಯಪಾಲರಿಗೆ ಮನವಿ ಕೊಟ್ರಿʼʼ ಎಂದು ನೆನಪಿಸಿದರು ಮಂಜುನಾಥ್‌.

ಯಾರಿಗೂ ಅಧಿಕಾರ ಕೊಟ್ಟಿಲ್ಲ ನೀವು

ʻʻನೀವು ಯಾರಿಗೂ ಅಧಿಕಾರ ಬಿಟ್ಟುಕೊಡಲಿಲ್ಲ. ನಿಮ್ಮ ಕುಟುಂಬದ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಬೇಕಾದವರಿಗೆ ಅಧಿಕಾರ ಕೊಟ್ರಿ. ಕಾರ್ಪೊರೇಟರ್‌ ಗೆದ್ರೂ ಅಧಿಕಾರ ಇಲ್ಲ. ಶತ್ರುವಿನ ಕೋಟೆಯೊಳಗೆ ನನ್ನ ಕುದುರೆ, ಸೈನಿಕರಿರಬೇಕು ಎನ್ನುವುದು ನಿಮ್ಮ ನಿಲುವುʼʼ ಎಂದರು.

ಶಿವಮೊಗ್ಗಕ್ಕೆ ಅಷ್ಟೊಂದು ಸೀರೆ ಎಲ್ಲಿಂದ ಬಂತು?

ಶಿವಮೊಗ್ಗದಲ್ಲಿ ಇತ್ತೀಚೆಗೆ 4.5 ಕೋಟಿ ರೂ. ಮೌಲ್ಯದ ಸೀರೆ ಜಪ್ತಿ ಆಯ್ತು. ಯಾರದ್ದು ಆ ಸೀರೆ? ಶಿವಮೊಗ್ಗದಲ್ಲಿ ಒಬ್ಬರನ್ನು ಬಿಟ್ಟು ಬೇರೆ ಯಾವ ಆಕಾಂಕ್ಷಿಗಳಲ್ಲೂ ಅಷ್ಟು ಹಣವಿರಲಿಕ್ಕಿಲ್ಲ ಎಂದು ಹೇಳಿದ ಅವರು, ʻʻನಿಮ್ಮ ಎಂದಿನ ಶೈಲಿ ಈ ಬಾರಿ ನಡೆಯೋಕೆ ಬಿಡಲ್ಲʼʼ ಎಂದು ಸವಾಲು ಹಾಕಿದರು.

ʻʻಶಿವಮೊಗ್ಗದಲ್ಲಿ ಅಭಿವೃದ್ಧಿ ಮಾಡಿದ್ದು ಸಂಸದರಾಗಿರುವ ಬಿ ವೈ ರಾಘವೇಂದ್ರ. ನೀವು ಏನು ಮಾಡಿದ್ದೀರಿ? ಕ್ಷೇತ್ರದ ಜನತೆ ಬಗ್ಗೆ ನೀವು ಅಸೆಂಬ್ಲಿ ಯಲ್ಲಿ ಮಾತಾಡಿಲ್ಲʼʼ ಎಂದು ಹೇಳಿದ ಮಂಜುನಾಥ್‌, ʻʻನೀವು ನನ್ನನ್ನು ಕೆಣಕಬಾರದಿತ್ತು. ನಿಮ್ಮ ಸವಾಲು ನಾನು ಸ್ವೀಕರಿಸಿದ್ದೇನೆ. ನೀವು ಸ್ವೀಕರಿಸುತ್ತಿರೋ, ಪುಕ್ಕಲುತನದಿಂದ ಹಿಂದಕ್ಕೆ ಸರಿತೀರೋ, ನಾನಂತೂ ನಾನು ಎಮ್ಮೆಲ್ಸಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಸ್ಪರ್ಧಿಸ್ತೇನೆ. ತೊಡೆ ತಟ್ಟಿದ್ದೇನೆ, ಕಾಚಾ ಕಟ್ಟಿದ್ದೇನೆʼʼ ಎಂದು ನುಡಿದರು.

ಸದ್ಯವೇ ಯಾವುದಾದರೂ ದೇವಸ್ಥಾನ ಮಲಿನ ಆಗಬಹುದು!

ಕೆ.ಎಸ್‌. ಈಶ್ವರಪ್ಪ ಅವರನ್ನು ಹೇಗೆಲ್ಲ ತರಾಟೆಗೆ ತೆಗೆದುಕೊಂಡರೆಂದರೆ ರಾಜಕಾರಣಿಗಳು ಮಾಡುವ ಚುನಾವಣಾ ಕಾರ್ಯತಂತ್ರಗಳನ್ನೆಲ್ಲ ಬಯಲಿಗಿಟ್ಟರು.

ʻʻನೀವು ಯಾವುದೇ ಪ್ರಚೋದನೆ ಮಾಡದೆ, ಶಿವಮೊಗ್ಗಲ್ಲಿ ಯಾವುದೇ ಗಲಭೆಯಿಲ್ಲದೆ ಸ್ಪರ್ಧೆಗೆ ಬನ್ನಿʼʼ ಎಂದ ಅವರು, ʻʻಜನರು ಕೂಡಾ ತಾಳ್ಮೆಯಿಂದ ಇರಿ. ಯಾಕೆಂದರೆ ನನಗೆ ಅವರ ಸ್ವಭಾವ ಗೊತ್ತಿದೆ. ನೋಡ್ತಾ ಇರಿ. ಸದ್ಯದಲ್ಲೇ ಯಾವುದಾದರೂ ದೇವಸ್ಥಾನ ಮಲಿನ ಆಗಬಹುದು. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಪೊಲೀಸರೂ ಮೈಮರೆಯಬೇಡಿ. ಚುನಾವಣೆ ಮೊದಲು ಒಂದೆರಡು ಘಟನೆ ನಡೆಯುವ ಸಾಧ್ಯತೆ ಇದೆʼʼ ಎಂದರು ಆಯನೂರು.

ಕ್ಷಮೆ ಕೇಳಿದರೆ ಬಿಟ್ಟು ಬಿಡ್ತೇನೆ

ʻʻಈವರೆಗಿನ ನನ್ನ ಗೆಲುವುಗಳಿಗೆ ನಾನು ಚಿರ ಋಣಿ ಆಗಿರ್ತೇನೆ. ಪಕ್ಕಕ್ಕೆ, ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. ನನ್ನ ನಡೆಯನ್ನು ಸ್ವಾಭಿಮಾನಿ ಕಾರ್ಯಕರ್ತರು ಅರ್ಥ ಮಾಡಿಕೊಳ್ತಾರೆ ಎಂದು ಭಾವಿಸುತ್ತೇನೆ. ಈ ಒಂದು ಚೈನ್ ಕಟ್ ಮಾಡದಿದ್ದರೆ ಪಕ್ಷ ವಿನಾಶಕ್ಕೆ ತಲುಪುತ್ತದೆʼʼ ಎಂದು ಹೇಳಿದ ಅವರು, ʻʻಈಶ್ವರಪ್ಪನವರೇ ಅವನ್ಯಾವ ಲೆಕ್ಕ ಅಂತ ನನಗೆ ಹೇಳಿದ್ರಿ. ನೀವು ಕ್ಷಮೆ ಕೇಳಿದ್ರೆ ನಿಮ್ಮನ್ನು ಬಿಟ್ಟುಬಿಡುತ್ತೇನೆ. ನನಗೆ ಪಕ್ಷ ಟಿಕೆಟ್‌ ಕೊಡುತ್ತದೆ ಎಂಬ ನಂಬಿಕೆ ಇತ್ತು. ಆದರೆ ಆ ನಂಬಿಕೆ ಈಗಿಲ್ಲʼʼ ಎಂದರು.

ಯಾವ ಲಂಗೋಟಿಯೋ ಗೊತ್ತಿಲ್ಲ, ಸ್ವಂತದ್ದೊಂದು ಇದ್ದೇ ಇದೆ!

ಆಯನೂರು ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಪ್ರಶ್ನೆಗೆ ಜಟ್ಟಿ ಕಾಳಗ ಮತ್ತು ಲಂಗೋಟಿಯ ಕಥೆ ಮೂಲಕ ಉತ್ತರ ಕೊಟ್ಟರು!

ʻʻನಾನು ಪೈಲ್ವಾನ್ ಬಂದಿದ್ದೇನೆ, ಲಂಗೋಟಿ ಬೇಡ ನನಗೆ. ಶಿವಮೊಗ್ಗ ಗರಡಿಯಿಂದ‌ ಬರ್ತಿದ್ದೇನೆ. ಕಾಂಗ್ರೆಸ್ ಲಂಗೋಟಿ ಕೊಡ್ತಾರೊ, ಜೆಡಿಎಸ್ ಕೊಡ್ತಾರೊ ಗೊತ್ತಿಲ್ಲ. ಸ್ವಂತ ಲಂಗೋಟಿ ಅಂತ ಇರುತ್ತೆ ತಾನೆ?ʼʼ ಎಂದು ಕೊನೆಗೆ ಪಕ್ಷೇತರನಾಗಿಯಾದರೂ ಸ್ಪರ್ಧಿಸುವುದು ಖಚಿತ ಎಂದರು. ʻʻನನ್ನ ಕುತ್ತಿಗೆಯಲ್ಲಿ ಬಿಜೆಪಿ ತಾಳಿ ಇದೆ. ಅದನ್ನು ಬಿಚ್ಚಿ ಹೊಸ ತಾಳಿ ಬಗ್ಗೆ ಯೋಚಿಸ್ತೇನೆʼʼ ಎಂದರು.

ʻʻಬಿಜೆಪಿ ಮನವೊಲಿಸುತ್ತದೆ ಎಂದು ನಾನು ಕಾಯುವುದಿಲ್ಲ. ಕಾಯುವ ಕಾಲ ಮುಗಿದಿದೆ. ಮನವೊಲಿಸುವುದೇ ಹೌದಾಗಿದ್ದರೆ ನಾನು ಹೋಟೆಲ್ ವರೆಗೆ ಬರುವ ಅಗತ್ಯ ಇರಲಿಲ್ಲ. ಮೂರ್ನಾಲ್ಕು ದಿನಗಳಲ್ಲಿ ರಾಜೀನಾಮೆ ಕೊಡುತ್ತೇನೆʼʼ ಎಂದು ಹೇಳಿದರು ಆಯನೂರು.

ʻʻಶಿವಮೊಗ್ಗದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದಾಗ ಕೆಡವಿದಾಗ ಶಾಂತಿಗಾಗಿ ಸದ್ದಿಲ್ಲದೆ ಪ್ರಯತ್ನ ಮಾಡಿದ್ದೇನೆ/ ಕಾರ್ಮಿಕ ಮುಖಂಡನಾಗಿ ಕಾಳಜಿಯಿದೆ. ಅಶಾಂತಿಯಾದರೆ ದೊಡ್ಡ ಪೆಟ್ಟು ಕಾರ್ಮಿಕರಿಗೇ ಬೀಳುವುದು. ಆಟೊ ಚಾಲಕರು ನನಗೆ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆ ಕುರಿತು ಅವರೇ ಕರಪತ್ರ ಹಂಚುತ್ತಿದ್ದಾರೆʼʼ ಎಂದು ತನಗೂ ಜನಬೆಂಬಲ ಇರುವುದನ್ನು ವಿವರಿಸಿದರು.

ಇದನ್ನೂ ಓದಿ : Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್‌ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ

Exit mobile version