ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರಿನ ರಾಜಕೀಯ ಚಿತ್ರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದು, ತುಳುವರ ಹೊಸ ವರ್ಷ ಬಿಸು ಪರ್ಬ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. 2008ರ ಬಳಿಕ ಮತ್ತೊಮ್ಮೆ ಬಿಜೆಪಿಯ ಪ್ರಯೋಗ ಶಾಲೆ ಬಿಜೆಪಿಯಲ್ಲಿ ಬಂಡಾಯದ ಕೂಗು ಕೇಳಿ ಬಂದಿದೆ.
ಪುತ್ತೂರಿನಲ್ಲಿ ಈ ಬಾರಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲು ಹಿರಿಯ ನಾಯಕಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಮಠಂದೂರು ಅವರಿಗೆ ಟಿಕೆಟ್ ತಪ್ಪುವುದು ಹಿಂದೆಯೇ ಬಹುತೇಕ ಖಾತ್ರಿಯಾಗಿತ್ತು. ಹೀಗಾಗಿ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಲ್ಲಿ ಪ್ರಮುಖರು ಹಿಂದು ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅರುಣ್ ಪುತ್ತಿಲ ಅವರು. ಪಕ್ಷ ತನಗೆ ಮಣೆ ಹಾಕಿಲ್ಲ, ಹಿಂದು ಮತದಾರರನ್ನು ಅವಗಣಿಸಿದೆ ಎನ್ನುವ ಮೂಲಕ ಅವರು ಸ್ವಾಭಿಮಾನದ ಕೂಗು ಎಬ್ಬಿಸಿದ್ದಾರೆ.
ಈ ಸ್ವಾಭಿಮಾನದ ಕೂಗು ಪುತ್ತೂರಿಗೆ ಹೊಸದೇನೂ ಅಲ್ಲ. 2008ರಲ್ಲಿ ಇದೇ ರೀತಿ ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ಬಳಸಿದ ಮಾನದಂಡವನ್ನು ಪ್ರಶ್ನಿಸಿ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನೇತೃತ್ವದಲ್ಲಿ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಸ್ವಾಭಿಮಾನಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಇದೀಗ ಪ್ರಭಾವಿ ಹಿಂದೂ ಮುಖಂಡ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಬ್ಬರದ ಪ್ರಚಾರ ನಡೆಸಿದ ನಮೋ ಬ್ರಿಗೇಡ್ ನ ಪುತ್ತೂರು ಘಟಕದ ಸಂಚಾಲಕ, 2016ರಲ್ಲಿ ಪುತ್ತೂರಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದ ವಿಶ್ವ ಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ನಾಯಕತ್ವ ವಹಿಸಿದ, ಪುತ್ತೂರು ಬಜರಂಗದಳದ ಮಾಜಿ ಸಂಚಾಲಕ, ಶ್ರೀ ರಾಮ ಸೇನೆಯ ಮಾಜಿ ಜಿಲ್ಲಾಧ್ಯಕ್ಷ, ಅರ್ ಎಸ್ ಎಸ್ ಕಾರ್ಯಕರ್ತ, ಧರ್ಮಸ್ಥಳದ ವತಿಯಿಂದ ಪುತ್ತೂರಿನಲ್ಲಿ ನಡೆದ ಭಜನಾ ಸಂಕೀರ್ತನದ ನೇತೃತ್ವ ವಹಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು 2023ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಮಾ.15 ರಂದು ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಸುಭದ್ರ ಸಭಾಂಗಣದಲ್ಲಿ ನಡೆದ ಪ್ರಮುಖರ ತುರ್ತು ಸಭೆಯ ಬಳಿಕ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವರ ರಥೋತ್ಸವದಂದು ( ಏ. 17) ಬೆಳಗ್ಗೆ ದೇವಸ್ಥಾನದಲ್ಲಿ ದೇವರ ದರ್ಶನ ಬಲಿ ನಡೆದು, ಬಟ್ಟಲು ಕಾಣಿಕೆ ಸೇವೆ ಮುಗಿದ ಬಳಿಕ ಗಂಧ ಪ್ರಸಾದ ಸ್ವೀಕರಿಸಿ ಬೆಂಬಲಿಗರ ಜತೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಲಿದ್ದಾರೆ.
ಮನೀಶ್ ಕುಲಾಲ್, ಪ್ರವೀಣ್ ಶೆಟ್ಟಿ, ಅನಿಲ್ ಕರ್ನೊಜಿ, ಪುಷ್ಪಾ, ಅವಿನಾಶ್ ಪುಜಾರಿ, ಪ್ರಸನ್ನ ಭೀಮ ಭಟ್ ಪ್ರಸನ್ನ ಮಾಡ್ತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪುತ್ತಿಲ ಬಂಡಾಯದಿಂದ ಬಿಜೆಪಿಗೆ ಹೊಡೆತ ಬೀಳುತ್ತದಾ?
2008ರಲ್ಲಿ ಶಕುಂತಲಾ ಶೆಟ್ಟಿ ಅವರು ಗೆಲ್ಲಲಿಲ್ಲವಾದರೂ ಬಿಜೆಪಿಗೆ ಭಾರಿ ಆತಂಕವನ್ನು ತಂದಿಟ್ಟಿದ್ದರು. ಅಂತಿಮವಾಗಿ ಬಿಜೆಪಿಯ ಮಲ್ಲಿಕಾ ಪ್ರಸಾದ್ ಕೇವಲ ಒಂದು ಸಾವಿರ ಮತಗಳಿಂದ ಜಯ ಸಾಧಿಸಿದ್ದರು.
ಮುಂದೆ ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್ ಸೇರಿ 2013ರಲ್ಲಿ ಬಿಜೆಪಿಯನ್ನು ಸೋಲಿಸಿದ್ದರು. 2018ರಲ್ಲೂ ಅವರೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆ, ಸಂಜೀವ ಮಠಂದೂರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ ಕೂಡಾ ಅಭ್ಯರ್ಥಿಯನ್ನು ಬದಲಿಸಿದೆ. ಹಿಂದೆ ಸಂಘ ಪರಿವಾರದಲ್ಲಿದ್ದು, ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿ ಆಗುತ್ತಿದ್ದಂತೆಯೇ ಕೆಲವು ತಿಂಗಳ ಹಿಂದೆಯೇ ಕಾಂಗ್ರೆಸ್ ಸೇರಿ ಸಿದ್ಧತೆ ನಡೆಸಿದ್ದರು. ಹೀಗಾಗಿ ಅರುಣ್ ಪುತ್ತಿಲ ಅವರ ಸಣ್ಣ ಬಂಡಾಯವೂ ಬಿಜೆಪಿಗೆ ತಲೆ ನೋವು ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ : Karnataka Elections : ಸುಳ್ಯ ಅಸೆಂಬ್ಲಿ ಕಣದಲ್ಲಿ ಈ ಬಾರಿ ಇಬ್ಬರು ಮಹಿಳೆಯರು; ಪುತ್ತೂರು ಬಿಜೆಪಿ ಅಭ್ಯರ್ಥಿ ಕೂಡಾ ಸುಳ್ಯದವರೆ!