ಮಂಡ್ಯ: 1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಇಂಡಿಯನ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ನ್ನು ಅಂತಿಮವಾಗಿ ಕೊಂದು ಹಾಕಿದ್ದರು ಮಂಡ್ಯದ ಉರಿ ಗೌಡ ಮತ್ತು ನಂಜೇಗೌಡ ಎಂಬ ಒಕ್ಕಲಿಗ ಯೋಧರು ಎಂಬ ಬಿಜೆಪಿಯ ಇತ್ತೀಚಿಗಿನ ವಾದಕ್ಕೆ ಸಂಬಂಧಿಸಿ ಕೆಲವೊಂದು ಮಾಹಿತಿಗಳು ಸಿಕ್ಕಿವೆ. ಇದು ಬಿಜೆಪಿಗೆ ಒಂದು ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.
2006ರಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಮಂಡ್ಯ ಜಿಲ್ಲಾ ಏಳನೇ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಯಾದ ಸುವರ್ಣ ಮಂಡ್ಯ ಎಂಬ ಪುಸ್ತಕದಲ್ಲಿ ಉರಿ ಗೌಡ ಮತ್ತು ನಂಜೇಗೌಡರ ಉಲ್ಲೇಖವಿರುವುದು ಕಂಡುಬಂದಿದೆ. ಇದರಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರೂ ಸೇರಿದಂತೆ ಹಲವು ಒಕ್ಕಲಿಗ ವೀರರು ಟಿಪ್ಪು ಸುಲ್ತಾನ್ ವಿರುದ್ಧ ಸಿಡಿದೆದ್ದಿದ್ದರು ಎನ್ನುವುದನ್ನು ಉಲ್ಲೇಖಿಸಲಾಗಿದೆ. ಡಾ. ದೇ ಜವರೇಗೌಡ ಅವರು ಈ ಪುಸ್ತಕವನ್ನು ಸಂಪಾದಿಸಿದವರು.
ಬಿಜೆಪಿ ಮೊದಲ ಬಾರಿಗೆ ಉರಿ ಗೌಡ, ನಂಜೇಗೌಡರ ಹೆಸರು ಹೇಳಿದಾಗ ಇದು ಒಕ್ಕಲಿಗರನ್ನು ಒಲಿಸಿಕೊಳ್ಳುವ ಗಿಮಿಕ್ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ವಾದಿಸಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಎಲ್ಲಿದೆ ದಾಖಲೆ ಎಂದು ಕೇಳಿದ್ದರು. ಈಗ ಬಿಜೆಪಿ ಇತ್ತೀಚಿನ ದಾಖಲೆಯೊಂದನ್ನು ತೋರಿಸುವ ಮೂಲಕ ತನ್ನ ಹೋರಾಟದಲ್ಲಿ ಪ್ರಾಥಮಿಕ ವಿಜಯವನ್ನು ದಾಖಲಿಸಿದಂತಾಗಿದೆ. ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲೇ ಪುಸ್ತಕ ಬಿಡುಗಡೆಯಾಗಿದ್ದು ಅದರ ಹೋರಾಟಕ್ಕೆ ಇನ್ನೊಂದು ಬಲ ಸಿಕ್ಕಿದಂತಾಗಿದೆ.
ಈ ಪುಸ್ತಕವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಓದಬೇಕು ಎಂದು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದ್ದಾರೆ ಮತ್ತು ಇದರನ್ನು ಮರು ಮುದ್ರಣ ಮಾಡಲಾಗುವುದು, ಎಲ್ಲರೂ ಓದುವಂತೆ ವಿನಂತಿಸಲಾಗುವುದು ಎಂದು ಹೇಳಿದ್ದಾರೆ. ಇದರ ಜತೆಗೆ ಮೇ 18ರಂದು ಸಿನಿಮಾವೊಂದು ಕೂಡಾ ಸೆಟ್ಟೇರಲಿದೆ ಎಂದು ಸಚಿವ ಮುನಿರತ್ನ ಘೋಷಿಸಿದ್ದಾರೆ.
ಬುದ್ಧಿವಂತಿಕೆ ಮೆರೆದರೇ ಬ್ರಿಟಿಷರು: ಕ್ರಾಂತಿ ಮಂಜು ಹೇಳೋದೇನು?
ಟಿಪ್ಪುವನ್ನು ಕೊಂದವರು ಉರಿಗೌಡ ನಂಜೇಗೌಡ ಎಂಬ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಾಹಿತಿ ಕ್ರಾಂತಿ ಮಂಜು ಅವರು ಮಂಡ್ಯದಲ್ಲಿ ಹೇಳಿದ್ದಾರೆ.
ʻʻಆ ಇಬ್ಬರು ನಾಯಕರು ಟಿಪ್ಪುವಿನ ವಿರುದ್ದ ಮೈಸೂರು ವಿಮೋಚನೆಗಾಗಿ ಹೋರಾಡಿದವರು. ಟಿಪ್ಪು ಮರಣ ಯಾರಿಂದ ಹೇಗಾಯ್ತು ಅನ್ನೋದನ್ನ ಉಲ್ಲೇಖ ಮಾಡೋದ್ರಲ್ಲಿ ಬ್ರಿಟಿಷರು ಬುದ್ಧಿವಂತಿಕೆ ಮೆರೆದಿದ್ದಾರೆ. ಸಹಾಯಕ ಸೈನ್ಯ ಪದ್ಧತಿ ಆಧಾರದ ಮೇಲೆ ರಾಣಿ ಲಕ್ಷ್ಮಮ್ಮಣ್ಣಿ ಅವರಿಗೆ ಬ್ರಿಟಿಷರು ಟಿಪ್ಪು ವಿರುದ್ದ ಯುದ್ಧ ಮಾಡಲು ಸಹಾಯ ಮಾಡುತ್ತಾರೆ. ಈ ಸಮಯದಲ್ಲಿ ಮಳವಳ್ಳಿಯಿಂದ ಯುದ್ಧ ಆರಂಭ ಮಾಡುವಂತೆ ಇದೇ ನಂಜೇಗೌಡ ಉರಿಗೌಡ ಮೈಸೂರಿನ ರಾಣಿಗೆ ಹೇಳುತ್ತಾರೆ. ಆ ವೇಳೆ ಟಿಪ್ಪು ಸೋತು ಶ್ರೀರಂಗಪಟ್ಟಣಕ್ಕೆ ಓಡಿ ಹೋಗ್ತಾರೆ ಎಂದು ಪುಸ್ತಕವೊಂದನ್ನು ಉಲ್ಲೇಖಿಸಿ ಕ್ರಾಂತಿ ಮಂಜು ಹೇಳಿದ್ದಾರೆ.
ʻʻಶ್ರೀರಂಗಪಟ್ಟಣದಲ್ಲಿ ಟಿಪ್ಪುವನ್ನು ಇದೇ ಉರಿಗೌಡ ನಂಜೇಗೌಡರು ಮಲ್ಲಯುದ್ದ ಮಾಡಿ ಕೊಂದು ಹಾಕಿರ್ತಾರೆ. ಟಿಪ್ಪುವಿನ ಸಾವಿನ ನಂತರ ಬ್ರಿಟಿಷರು ಕೋಟೆ ಪ್ರವಾಸ ಮಾಡುತ್ತಾರೆ. ಒಂದು ವೇಳೆ ಟಿಪ್ಪುವನ್ನು ಬ್ರಿಟಿಷರೇ ಕೊಂದಿದ್ದರೆ ಬಹಳ ದೊಡ್ಡದಾಗಿ ಬರೆದುಕೊಳ್ಳುತ್ತಿದ್ದರುʼʼ ಎನ್ನುವುದು ಕ್ರಾಂತಿ ಮಂಜು ವಾದ.
ಮಂಡ್ಯಕ್ಕೆ ಮಸಿ ಬಳಿಯುವ ಕೆಲಸ ಎಂದ ಜಗದೀಶ್ ಕೊಪ್ಪ
ಈ ನಡುವೆ, ಉರಿ ಗೌಡ-ನಂಜೇಗೌಡರ ಉಲ್ಲೇಖದ ಮೂಲಕ ಐತಿಹಾಸಿಕ ಹಿನ್ನೆಲೆ ಇರುವ ಮಂಡ್ಯಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿದೆ ಎಂದು ಪತ್ರಕರ್ತ ಜಗದೀಶ್ ಕೊಪ್ಪ ಹೇಳಿದ್ದಾರೆ.
ʻʻಕಟ್ಟು ಇತಿಹಾಸ ಕಟ್ಟಿ ಮೂರನೇ ದರ್ಜೆ ರಾಜಕಾರಣ ಮಾಡ್ತಿದ್ದಾರೆ. ಉರಿಗೌಡ-ನಂಜೇಗೌಡ ಟಿಪ್ಪು ಕೊಂದರು ಎಂದಿದ್ದಾರೆ. ಟಿಪ್ಪು ಸತ್ತಿದ್ದು ಹೇಗೆ? ಕತ್ತಿ, ಗುಂಡೇಟಿನಿಂದ ಸತ್ತಿದ್ದ? ಈವರೆಗಿನ 600 ಪುಸ್ತಕದಲ್ಲಿ ಯಾವುದು ಉಲ್ಲೇಖ ಹಾಗಿಲ್ಲ. ಉರಿಗೌಡ ನಂಜೇಗೌಡ ರಿಂದ ಟಿಪ್ಪು ಸತ್ತಿದ್ದು ಎಲ್ಲೂ ದಾಖಲಾಗಿಲ್ಲ. ಯಾವುದೇ ಇತಿಹಾಸದಲ್ಲಿ ಪ್ರಕಟವಾಗದ ಸಂಗತಿ ಇತ್ತೀಚೆಗೆ ಹುಟ್ಟಿದೆ. ಟಿಪ್ಪುವಿನ ಸಾವಿನ ಬಗ್ಗೆ 1830ರಿಂದ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ದಾಖಲೆ ಇಟ್ಟಿದ್ದಾರೆ. ಬ್ರಿಟಿಷರು ಕೂಡ ಬರೆದಿದ್ದಾರೆʼʼ ಎಂದಿದ್ದಾರೆ ಜಗದೀಶ್ ಕೊಪ್ಪ.
ʻʻಟಿಪ್ಪುಗೆ ಫಿರಂಗಿಯ ಗುಂಡು ಬಲಗೈಗೆ ಬಿದ್ದು ಬಳಿಕ ಬ್ರಿಟಿಷ್ ಸೈನಿಕರು ಅಟ್ಯಾಕ್ ಮಾಡಿ ಸಾಯಿಸಿದ್ದಾರೆ ಎನ್ನುವುದು ನಿಜವಾದ ಇತಿಹಾಸ ಎನ್ನುವುದು ಜಗದೀಶ್ ಕೊಪ್ಪ ಅವರ ಅಭಿಮತ.