Site icon Vistara News

Karnataka Elections : ಬಿಜೆಪಿ ಮತ್ತೊಂದು ವಿಕೆಟ್‌ ಪತನ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪಕ್ಷ, ಶಾಸಕತ್ವಕ್ಕೆ ರಾಜೀನಾಮೆ

MP Kumaraswamy

#image_title

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ (Karnataka Elections) ಬಿಜೆಪಿ ಟಿಕೆಟ್‌ ವಂಚಿತ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಮ್ಮ ಶಾಸಕತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಮಿಸ್‌ ಆಗಿದ್ದು ಅವರ ಜಾಗಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಆಪ್ತರಾದ ದೀಪಕ್‌ ದೊಡ್ಡಯ್ಯ ಅವರಿಗೆ ಟಿಕೆಟ್‌ ಸಿಕ್ಕಿದೆ.

ಎಲ್ಲವೂ ಸಿ.ಟಿ. ರವಿ ತಂತ್ರ, ಅವರನ್ನು ಸೋಲಿಸಲು ಕೈಜೋಡಿಸುತ್ತೇನೆ

ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಎಂ.ಪಿ. ಕುಮಾರಸ್ವಾಮಿ ಅವರು, ʻʻನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಅನ್ಯಾಯ ಆಗಿದೆ‌. ಆದ್ದರಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಸಿ.ಟಿ ರವಿ ಹಾಗೂ ನನ್ನ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯ ಇದೆ‌. ಅವರೇ (ಸಿ.ಟಿ ರವಿ) ನನಗೆ ಟಿಕೆಟ್ ತಪ್ಪಿಸಿದ್ದಾರೆ. ಸಿ.ಟಿ ರವಿ ಅವರಿಗೆ ನಾನು ನಾಯಿ‌ ನಿಯತ್ತು ತೋರಿಸಬೇಕಿತ್ತು.. ಅವರು ಹೇಳಿದಂಗೆ ಕೇಳಬೇಕಿತ್ತು. ನಾನು ಕೇಳಿಲ್ಲ.. ಆದ್ದರಿಂದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ನಾನು ಓದಿರುವವನು. ಸಿ.ಟಿ ರವಿ ಯಾರದ್ದೋ‌ ಮಾತು ಕೇಳಿ ಮಾತಾಡುತ್ತಾರೆʼʼ ಎಂದು ಹೇಳಿದರು.

ಎಂ.ಪಿ. ಕುಮಾರಸ್ವಾಮಿ ಅವರು ಮುಂದೆ ಜೆಡಿಎಸ್‌ ಸೇರುತ್ತಾರೆ ಎಂಬ ಸುದ್ದಿ ಹರಡಿದೆ. ಸದ್ಯಕ್ಕೆ ಯಾರೂ ಸಂಪರ್ಕದಲ್ಲಿಲ್ಲ. ಸಂಪರ್ಕಿಸಿದರೆ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದಿರುವ ಕುಮಾರಸ್ವಾಮಿ, ʻಸಿ.ಟಿ ರವಿ ವಿರುದ್ಧ ನಾನು ಕೈ ಜೋಡಿಸುತ್ತೇನೆ‌. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ವಿರುದ್ಧ ಕೆಲಸ ಮಾಡುವವರ ಜೊತೆ ಕೈ ಜೋಡಿಸುತ್ತೇನೆʼʼ ಎಂದಿದ್ದಾರೆ.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿರುವ ಅವರು ಅದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

ಮತದಾರರಿಗೆ ಪತ್ರ

ಈ ನಡುವೆ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ನಾನು ಮಾಡಿದ ಒಳ್ಳೆಯ ಕೆಲಸಗಳು ಹೈಕಮಾಂಡ್‌ಗೆ ತಪ್ಪಾಗಿ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರ ಹೀಗಿದೆ..

ಆತ್ಮೀಯ ಕ್ಷೇತ್ರದ ಮತದಾರ ಬಂಧುಗಳೇ, ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್‌ಗೆ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ ….!!?
ಸರ್ವೇ ಆಧರಿಸಿ ಟಿಕೇಟ್ ನೀಡುವ ಪಕ್ಷ ಪ್ರತಿ ಸರ್ವೆಯಲ್ಲಿ ಮುನ್ನಡೆಯಿದ್ದರೂ ಟಿಕೆಟ್ ನಿರಾಕರಿಸಿದ್ದು ನೋವಿನ ವಿಚಾರ.

ಮಳೆಯಿಂದಾಗಿ ಬೆಳೆ ಕಳೆದುಕೊಂಡ ಕ್ಷೇತ್ರದ ರೈತ ಬಾಂಧವರಿಗೋಸ್ಕರ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿದ್ದು ಹೈಕಮಾಂಡ್‌ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ….!!

ನಿಮಗೆಲ್ಲಾ ತಳಿದಿರುವಂತೆ ಶತ್ರುಗಳಿಗೂ ಕೂಡ ಕೇಡು ಬಯಸದೇ ಎಲ್ಲರನ್ನ ಸದಾ ಗೌರವಿಸುತ್ತಾ ಪ್ರೀತಿಯಿಂದ ಕಾಣುತ್ತಲೇ ಬಂದೆ.. ಪಕ್ಷದ ಕಾರ್ಯಕರ್ತರನ್ನ ಬೆಳೆಸಿದ್ದೇನೆ ಹೊರತು ನನ್ನ ಮನೆಯವರನ್ನಲ್ಲ. ಯೋಚಿಸುವ ಶಕ್ತಿ ನಿಮ್ಮಲ್ಲಿದೆ. ನನಗೆ ಶಕ್ತಿ ತುಂಬುವ ಕೈಗಳು ನೀವು. ಇನ್ನು ಮುಂದೆಯೂ ನಿಮ್ಮೊಂದಿಗೆ ಸದಾ ಜೊತೆಯಲ್ಲಿರುತ್ತೇನೆ ..
ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ.
ಧನ್ಯವಾದಗಳು, ಎಂಪಿ ಕುಮಾರಸ್ವಾಮಿ

ಇದನ್ನೂ ಓದಿ : BJP Karnataka: ಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ ಬಿಜೆಪಿ: ಬೈಂದೂರಿನಿಂದ ಗುರುರಾಜ್‌ ಶೆಟ್ಟಿ ಗಂಟಿಹೊಳೆ

Exit mobile version