Site icon Vistara News

Karnataka Elections : ಟಿಕೆಟ್‌ ಆಕಾಂಕ್ಷಿಗಳ ಪ್ರತಿಭಟನೆ ಭೀತಿ; ಬಿಜೆಪಿ ನಾಯಕರ ಸಭೆ ಪಕ್ಷ ಕಚೇರಿಯಿಂದ ರೆಸಾರ್ಟ್‌ಗೆ ಶಿಫ್ಟ್‌

BJP office

#image_title

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಬೀಗುತ್ತಿದ್ದರೆ ಆಡಳಿತಾರೂಢ ಬಿಜೆಪಿ ಇನ್ನೂ ಒಂದನೇ ಪಟ್ಟಿಗೇ ಹಿಂದೆ ಮುಂದೆ ನೋಡುತ್ತಿದೆ. ಅದನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನೂ (Karnataka Elections) ಇದೀಗ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ.

ಈಗಾಗಲೇ ಪಟ್ಟಿ ಬಿಡುಗಡೆ ಮಾಡಿರುವ, ಇನ್ನು ಬಿಡುಗಡೆ ಮಾಡಬೇಕಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಾಕಷ್ಟು ಆಕ್ರೋಶವನ್ನು ಎದುರಿಸುತ್ತಿದೆ. ಬಿಜೆಪಿಯಲ್ಲೂ ಅದೇ ಪರಿಸ್ಥಿತಿ ಇದೆ. ಅದರ ಜತೆಗೆ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಆಕಾಂಕ್ಷಿಗಳು ತಮ್ಮ ತಮ್ಮ ಮಟ್ಟದಲ್ಲಿ ಸಾಕಷ್ಟು ಲಾಬಿ ಮತ್ತು ಬಹಿರಂಗ ಹೋರಾಟವನ್ನೇ ನಡೆಸುತ್ತಿದ್ದಾರೆ. ಇದೀಗ ಬಿಜೆಪಿ ಕಚೇರಿಯಲ್ಲೇ ಟಿಕೆಟ್‌ ಫೈನಲ್‌ ಮಾಡುವ ಮಾತುಕತೆ ನಡೆಸಿದರೆ ದೊಡ್ಡ ಮಟ್ಟದಲ್ಲಿ ಅಕಾಂಕ್ಷಿಗಳ ಅಭಿಮಾನಿಗಳು ಬಂದು ಗೊಂದಲದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಅಂಶಗಳನ್ನು ಪರಿಗಣಿಸಿದ ಪಕ್ಷದ ನಾಯಕರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಿದ್ದಾರೆ. ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ನಡೆಯಲಿರುವ ಸಭೆಗೆ ಯಾರು ನಿಯೋಜಿತರಾಗಿರುತ್ತಾರೋ ಅವರಿಗೆ ಮಾತ್ರ ಅವಕಾಶವಿರುತ್ತದೆ. ಹೀಗಗಿ ಜಗಳ, ಒತ್ತಡ, ಮಾತಿನ ಚಕಮಕಿಗೆ ಅವಕಾಶವಿರುವುದಿಲ್ಲ ಎಂಬುದು ನಾಯಕರ ಅಭಿಮತ.

ಸಭೆ ನಡುವೆ ಕಚೇರಿ ಮುಂದೆ ಆಕಾಂಕ್ಷಿಗಳ ಪ್ರತಿಭಟನೆ ನಡೆದರೆ ಕಿರಿಕಿಯಾಗುತ್ತದೆ ಎಂಬ ಕಾರಣಕ್ಕಾಗಿ ರೆಸಾರ್ಟ್ ನಲ್ಲಿ ರಹಸ್ಯ ಸಭೆಗೆ ಮುಂದಾಗಿದ್ದಾರೆ ಬಿಜೆಪಿ ನಾಯಕರು.

ಸಭೆಯ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ʻʻಇಂದು ರಾಜ್ಯ ಸಮಿತಿ ಸಭೆ ಇದೆ. ಈಗಾಗಲೇ ಜಿಲ್ಲಾ ಸಮಿತಿ ಎರಡು ದಿನ ಸಭೆ ಆಗಿದೆ. ಇವತ್ತು ನಾಳೆ ಸಭೆ ಮಾಡಿ ಪಟ್ಟಿಯನ್ನ ಕೇಂದ್ರಕ್ಕೆ ಕಳಿಸ್ತೀವಿ. ಏಪ್ರಿಲ್ 8 ಕ್ಕೆ ಕೇಂದ್ರ ಸಮಿತಿ ಪಟ್ಟಿ ಪರಿಶೀಲನೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆʼʼ ಎಂದರು.

ʻʻಹಲವಾರು ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿ‌ ಇದ್ದಾರೆ. 3-4 ತಿಂಗಳ ಬೆಳವಣಿಗೆ ಗಮನಿಸಿದಾಗ ಸಂಪೂರ್ಣ ಬಹುಮತ ನಮಗೆ ಬರುವ ಲಕ್ಷಣಗಳು ಇವೆ. ಕೆಲವು ಕ್ಷೇತ್ರಗಳು ಆಶ್ಚರ್ಯಕರ ಫಲಿತಾಂಶ ಕೊಡುತ್ತವೆ. ನಮ್ಮ ಕಾರ್ಯಕರ್ತರು, ನಾಯಕರು ಆತ್ಮವಿಶ್ವಾಸದಲ್ಲಿ ಇದ್ದಾರೆ. ಟಿಕೆಟ್ ಕೊಡುವಾಗಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‌ನೀಡಲಾಗುತ್ತದೆ. ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ, ರಾಜ್ಯ ಮಟ್ಟದಿಂದ ಮಾಹಿತಿ ಪಡೆದು ಗ್ರೌಂಡ್ ರಿಯಾಲಿಟಿ ಮೇಲೆ ಪಟ್ಟಿ ಮಾಡಲಾಗುತ್ತಿದೆ. ಟಿಕೆಟ್ ಹಂಚಿಕೆ ಸರಳವಾಗಿ ಆಗುತ್ತದೆʼʼ ಎಂದು ಹೇಳಿದರು.

ಈ ನಡುವೆ, ಅಥಣಿ ಕ್ಷೇತ್ರದ ಶಾಸಕ ಮಹೇಶ್‌ ಕುಮಟಳ್ಳಿ ಮತ್ತು ಈ ಬಾರಿಯೂ ಅವರಿಗೇ ಟಿಕೆಟ್‌ ನೀಡಬೇಕು ಎಂದು ಹಠ ಹಿಡಿದಿದಿರುವ ರಮೇಶ್‌ ಜಾರಕಿಹೊಳಿ ಅವರಿಬ್ಬರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಥಣಿ ಕ್ಷೇತ್ರದ ಟಿಕೆಟ್‌ ತನಗೆ ಬಿಡಬೇಕು ಎಂದು ಲಕ್ಷ್ಮಣ ಸವದಿ ಒತ್ತಾಯಿಸುತ್ತಿರುವುದು, ಒಂದೊಮ್ಮೆ ಅಥಣಿ ಟಿಕೆಟನ್ನು ಮಹೇಶ್‌ ಕುಮಟಳ್ಳಿಗೆ ಕೊಡದಿದ್ದರೆ ತಾನೂ ಗೋಕಾಕ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಜಾರಕಿಹೊಳಿ ಹಠ ಹಿಡಿದಿರುವುದು ಪಕ್ಷದಲ್ಲಿ ಗೊಂದಲ ನಿರ್ಮಿಸಿದೆ. ಇತ್ತ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಜಾರಕಿಹೊಳಿ ಮತ್ತು ಸವದಿ ಮಧ್ಯೆ ಸಂಧಾನ ನಡೆದು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Karnataka Election: ಸುಳ್ಳು, ಮತ ಗಳಿಕೆ ಉದ್ದೇಶವಿಲ್ಲ, ಜನರ ಆಶೋತ್ತರಗಳಂತೆ ಬಿಜೆಪಿ ಪ್ರಣಾಳಿಕೆ: ಸಚಿವ ಡಾ. ಕೆ. ಸುಧಾಕರ್‌

Exit mobile version