ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) 224 ಕ್ಷೇತ್ರಗಳ ಪೈಕಿ ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇನ್ನು ಉಳಿದಿರುವುದು ಹನ್ನೆರಡು ಕ್ಷೇತ್ರಗಳೇ ಆದರೂ ಮೂರನೇ ಪಟ್ಟಿಯೇ ಭಾರಿ ಕುತೂಹಲವನ್ನು ಕೆರಳಿಸಿದೆ.
189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 8 ಶಾಸಕರು, 23 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಐವರು ಶಾಸಕರಿಗೆ ಕೊಕ್ ನೀಡಿದ ಬಿಜೆಪಿ ಈಗ ಉಳಿದಿರುವ 12 ಅಭ್ಯರ್ಥಿಗಳ ಪಟ್ಟಿಯಲ್ಲಿ ಎಷ್ಟು ಜನರಿಗೆ ಕೊಕ್ ನೀಡುತ್ತದೆ ಎನ್ನುವ ಕುತೂಹಲ ಜೋರಾಗಿದೆ.
ಈಗ ಬಾಕಿ ಉಳಿದಿರುವ 12 ಕ್ಷೇತ್ರಗಳಲ್ಲಿ ಆರು ಮಂದಿ ಬಿಜೆಪಿ ಶಾಸಕರಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ ಮೊದಲಾದ ಘಟಾನುಘಟಿಗಳಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ.ಎಸ್ ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅಲ್ಲಿ ಅವರ ಪುತ್ರ ಕಾಂತೇಶ್‌ಗೆ ಟಿಕೆಟ್ ಸಿಗುತ್ತಾ? ಮಹದೇವಪುರದಲ್ಲಿ ಅರವಿಂದ ಲಿಂಬಾವಳಿ ಚೇಂಜ್ ಆಗ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
ಇದರ ನಡುವೆ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಅಂಶವೆಂದರೆ, ಧಾರವಾಡ ಸೆಂಟ್ರಲ್ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರು ತಾನು ನಿಶ್ಚಿತವಾಗಿ ಕಣಕ್ಕಿಳಿಯುವುದಾಗಿ ಹೇಳಿರುವುದು. ಅವರ ಬೇಡಿಕೆಗೆ ಹೈಕಮಾಂಡ್ ಏನನ್ನುತ್ತದೆ? ಅವಕಾಶ ಕೊಡುತ್ತದಾ? ಕೊಡದಿದ್ದರೆ ಶೆಟ್ಟರ್ ಮುಂದಿನ ಹೆಜ್ಜೆ ಏನು ಎನ್ನುವುದು ಭಾರಿ ಚರ್ಚೆಯಲ್ಲಿದೆ.
ಸೇಡಂನಲ್ಲಿ ಶಾಸಕರಾಗಿರುವ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ರೋಣದ ಕಳಕಪ್ಪ ಬಂಡಿಗೆ ಮತ್ತೆ ಟಿಕೆಟ್ ಸಿಗುತ್ತಾ? ಈಗಾಗಲೇ ವರುಣ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸೂಚನೆ ಪಡೆದಿರುವ ವಿ. ಸೋಮಣ್ಣ ಅವರು ಪ್ರತಿನಿಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರ ಯಾರ ಪಾಲಾಗಲಿದೆ ಎನ್ನುವ ಆಸಕ್ತಿ ಎಲ್ಲರಿಗಿದೆ.
ಕೊನೆಯ ಪಟ್ಟಿಯಲ್ಲಿ ಫೈನಲ್ ಆಗಬೇಕಾದ ಕ್ಷೇತ್ರಗಳು ಮತ್ತು ಈಗಿರುವ ಶಾಸಕರು
1.ನಾಗಠಾಣ – ಜೆಡಿಎಸ್ ಶಾಸಕ ದೇವೇಂದ್ರ ಚೌಹಾನ್
2. ಸೇಡಂ – ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ – ಬಿಜೆಪಿ
3. ಮಾನ್ವಿ – ರಾಜಾ ವೆಂಕಟಪ್ಪ ನಾಯಕ್- ಜೆಡಿಎಸ್
4.ಕೊಪ್ಪಳ- ರಾಘವೇಂದ್ರ ಬಸವರಾಜ್ ಹಿಟ್ನಾಳ್ – ಕಾಂಗ್ರೆಸ್
5.ರೋಣ – ಕಳಕಪ್ಪ ಬಂಡಿ -ಬಿಜೆಪಿ
6. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್- ಬಿಜೆಪಿ
7. ಹಗರಿಬೊಮ್ಮನಹಳ್ಳಿ- ಕಾಂಗ್ರೆಸ್ ಭೀಮಾನಾಯಕ್
8. ಶಿವಮೊಗ್ಗ ನಗರ – ಈಶ್ವರಪ್ಪ – ಬಿಜೆಪಿ
9. ಹೆಬ್ಬಾಳ – ಕಾಂಗ್ರೆಸ್
10.ಗೋವಿಂದ ರಾಜ ನಗರ – ಸೋಮಣ್ಣ, ಬಿಜೆಪಿ
11.ಕೃಷ್ಣ ರಾಜ – ಸಾ ರಾ ಮಹೇಶ್, ಜೆಡಿಎಸ್
12. ಮಹದೇವಪುರ – ಅರವಿಂದ್ ಲಿಂಬಾವಳಿ – ಬಿಜೆಪಿ
ಒಂದು ಮತ್ತು ಎರಡನೇ ಪಟ್ಟಿಯಲ್ಲಿ ಟಿಕೆಟ್ ಕಳೆದುಕೊಂಡ ಬಿಜೆಪಿ ಶಾಸಕರು ಇವರು
1. ಬೆಳಗಾವಿ ಉತ್ತರ: ಶಾಸಕ ಅನಿಲ್ ಬೆನಕೆಗೆ ಮಿಸ್: ಡಾ. ರವಿ ಪಾಟೀಲ್‌ಗೆ ಟಿಕೆಟ್
2. ರಾಮದುರ್ಗ: ಮಹಾದೇವಪ್ಪ ಯಾದವಾಡಗೆ ಮಿಸ್; ಚಿಕ್ಕರೇವಣ್ಣಗೆ ಟಿಕೆಟ್
3. ಹೊಸದುರ್ಗ: ಗೂಳಿಹಟ್ಟಿ ಶೇಖರ್‌ಗೆ ಟಿಕೆಟ್ ಮಿಸ್ – ಎಸ್ ಲಿಂಗಮೂರ್ತಿಗೆ ಅವಕಾಶ
4. ಕುಂದಾಪುರ: ಶ್ರೀನಿವಾಸ ಶೆಟ್ಟಿ ಸ್ವಯಂ ನಿವೃತ್ತಿ-ಕಿರಣ್ ಕುಮಾರ್ ಕೋಡ್ಗಿಗೆ ಅವಕಾಶ
5. ಉಡುಪಿ: ಶಾಸಕ ರಘುಪತಿ ಭಟ್‌ಗೆ ಟಿಕೆಟ್ ಮಿಸ್- ಯಶ್ಪಾಲ್ ಸುವರ್ಣಗೆ ಚಾನ್ಸ್
6. ಕಾಪು: ಲಾಲಾಜಿ ಮೆಂಡನ್‌ಗೆ ಟಿಕೆಟ್ ಮಿಸ್; ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅವಕಾಶ
7. ಪುತ್ತೂರು: ಸಂಜೀವ ಮಠಂದೂರುಗೆ ಟಿಕೆಟಿಲ್ಲ: ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್
8. ಸುಳ್ಯ: ಸಚಿವ ಅಂಗಾರ ಅವರಿಗಿಲ್ಲ ಟಿಕೆಟ್: ಭಾಗೀರಥಿ ಮುರುಳ್ಯ ಅವರಿಗೆ ಚಾನ್ಸ್
9. ಬೈಂದೂರಿನಿಂದ ಸುಕುಮಾರ ಶೆಟ್ಟಿ ಬದಲು ಗುರುರಾಜ್ ಗಂಟಿಹೊಳೆ
10. ಮೂಡಿಗೆರೆ ಎಂಪಿ ಕುಮಾರಸ್ವಾಮಿ ಬದಲು ದೀಪಕ್ ದೊಡ್ಡಯ್ಯ
11. ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ ಬದಲು ಶಿವಕುಮಾರ್
12. ಕಲಘಟಗಿ ಸಿಎಂ ನಿಂಬಣ್ಣನವರ್ ಬದಲು ನಾಗರಾಜ ಛಬ್ಬಿ
13. ಹಾವೇರಿ ನೆಹರೂ ಓಲೆಕಾರ್ ಬದಲು ಗವಿಸಿದ್ಧಪ್ಪ ದ್ಯಾವಣ್ಣವರ್
14. ದಾವಣಗೆರೆ ಉತ್ತರ ಎಸ್.ಎ ರವೀಂದ್ರ ನಾಥ್ ಬದಲು ಲೋಕಿಕೆರೆ ನಾಗರಾಜ್ (ಮೊದಲೇ ನಿವೃತ್ತಿ ಪಡೆದಿದ್ದರು)
15. ಮಾಯಕೊಂಡ ಎನ್ ಲಿಂಗಣ್ಣ ಬದಲು ಬಸವರಾಜ್ ನಾಯ್ಕ್ ಬದಲು
ತಕ್ಷಣ ಪ್ರಚಾರಕ್ಕೆ ಅಣಿಯಾಗಲು ಬಿಜೆಪಿ ಸೂಚನೆ
ಈ ನಡುವೆ, ತಕ್ಷಣದಿಂದಲೇ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಟಿಕೆಟ್ ಪಡೆದ ಅಭ್ಯರ್ಥಿಗಳಿಗೆ ಹೈಕಮಾಂಡ್ ಸೂಚನೆ ನೀಡಿದೆ.
ʻʻನಿಮ್ಮ ಗೆಲ್ಲುವಿಗೆ ಬೇಕಾದ ರಣತಂತ್ರ ರೂಪಿಸಿ, ದಿನದ 24 ಗಂಟೆ ಅಲಟ್೯ ಇದ್ದು ಕ್ಷೇತ್ರಲ್ಲಿ ಕೆಲಸ ಮಾಡಿ, ಪಕ್ಷದ ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಬೇಕು, ಕ್ಷೇತ್ರದ ಪ್ರಮುಖ ನಾಯಕರು ಕಾರ್ಯಕರ್ತರ ವಿಶ್ವಾಸದಿಂದ ಇದ್ದು ಕೆಲಸ ಮಾಡಿ, ಪ್ರತಿ ದಿನ ಪತ್ರಿ ಬೂತ್ ನಲ್ಲೂ ಏನಾಗುತ್ತಿದೆ ಎಂಬ ಮಾಹಿತಿ ಪಡೆಯಿರಿʼʼ ಎಂದು ಹೈಕಮಾಂಡ್ ಮಾರ್ಗದರ್ಶನ ನೀಡಿದೆ.
ʻʻಅನ್ಯ ಪಕ್ಷದ ಚುನಾವಣಾ ಚಟುವಟಿಕೆಗಳ ಮೇಲೆ ನಿಗಾ ಇಡಿ, ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ನಿಮ್ಮ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬರ್ತಾರೆ, ಅದಕ್ಕೆ ಬೇಕಾದ ಪ್ಲ್ಯಾನ್ ಮಾಡಿ, ಚುನಾವಣಾ ಪ್ರಚಾರದ ವೇಳೆ ಯಾವುದೇ ವಿವಾದಾತ್ಮಕ ಹೇಳಿಕೆ ಕೊಡಬೇಡಿʼʼ ಎನ್ನುವ ಸೂಚನೆಗಳನ್ನು ನೀಡಲಾಗಿದೆ.
ಇದನ್ನೂ ಓದಿ : Goolihatti Shekhar: ಹೆಚ್ಚಾಗುತ್ತಿದೆ ಬಂಡಾಯ, ಬಿಜೆಪಿಗೆ ಗೂಳಿಹಟ್ಟಿ ಶೇಖರ್ ವಿದಾಯ