Site icon Vistara News

Karnataka Elections : ಕಾಂಗ್ರೆಸ್‌ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾದ ಬಿಜೆಪಿ

Akhanda

#image_title

ಬೆಂಗಳೂರು: ಲಿಂಗಾಯತ ಅಸ್ತ್ರ (Lingayat astra) ಬಳಸಿ ತನ್ನನ್ನು ಹಣಿಯಲು ಯತ್ನಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾಗಿದೆ ಬಿಜೆಪಿ. ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವು ನಾಯಕರನ್ನು ಮೂಲೆಗುಂಪು ಮಾಡಿದ ಬಿಜೆಪಿ ಲಿಂಗಾಯತರಿಗೆ ಮೋಸ ಮಾಡುತ್ತಿದೆ ಎನ್ನುವ ವ್ಯಾಖ್ಯಾನವನ್ನು ಕಾಂಗ್ರೆಸ್‌ ಹರಿಬಿಟ್ಟಿದೆ. ಇದು ಬಿಜೆಪಿಗೆ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಹೀಗಾಗಿಯೇ ಬುಧವಾರ ಬೆಂಗಳೂರಿನ ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ಮುಖಂಡರ ಮಹತ್ವದ ಸಭೆಯನ್ನು ನಡೆಸಿ ಚರ್ಚೆ ಮಾಡಲಾಯಿತು. ಕಾಂಗ್ರೆಸ್‌ನ ಅಪಪ್ರಚಾರವನ್ನು ಹತ್ತಿಕ್ಕುವ ತಂತ್ರಗಳನ್ನು ಚರ್ಚಿಸಲಾಗಿದೆ.

ಇದರ ನಡುವೆಯೇ ಬಿಜೆಪಿಗೆ ಕಾಂಗ್ರೆಸ್‌ ವಿರುದ್ಧ ಒಂದು ಅಸ್ತ್ರ ಸಿಕ್ಕಿದೆ. ಅದುವೇ ಅಖಂಡ ದಲಿತಾಸ್ತ್ರ!

ಏನಿದು ಅಖಂಡ ದಲಿತಾಸ್ತ್ರ?

ಕಾಂಗ್ರೆಸ್‌ ಈ ಬಾರಿ ತನ್ನ ಅತಿ ದೊಡ್ಡ ಮತ್ತು ಅತಿ ಪ್ರಮುಖ ಅಭ್ಯರ್ಥಿಯನ್ನು ಕಣಕ್ಕೆ ಇಳಿಯಲು ಅವಕಾಶ ಕೊಟ್ಟಿಲ್ಲ. ಅವರೇ ಅಖಂಡ ಶ್ರೀನಿವಾಸ ಮೂರ್ತಿ. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಅಂತರದಿಂದ ಗೆದ್ದ ದಾಖಲೆ ಹೊಂದಿರುವ ಅಖಂಡ ಶ್ರೀನಿವಾಸ ಮೂರ್ತಿ ಬೆಂಗಳೂರಿನ ಪುಲಕೇಶಿ ನಗರದ ಹಾಲಿ ಶಾಸಕ.

ಕಳೆದ ಬಾರಿ ದೊಡ್ಡ ಮಟ್ಟದ ಗಲಭೆ ನಡೆದ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಇವರ ವ್ಯಾಪ್ತಿಗೆ ಬರುತ್ತದೆ. ಅಂದು ಗಲಭೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯೂ ಸುಟ್ಟುಹೋಗಿತ್ತು. ಅಂಥ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ನಡುವೆ ಭಿನ್ನಮತ ಸೃಷ್ಟಿಯಾಗಿ ಅಖಂಡಗೆ ಟಿಕೆಟ್‌ ತಪ್ಪಿದೆ. ಎಲ್ಲ ಹಿರಿಯ ಕಾಂಗ್ರೆಸ್‌ ನಾಯಕರು ಅಖಂಡ ಪರವಾಗಿದ್ದರೂ ಡಿ.ಕೆ. ಶಿವಕುಮಾರ್‌ ಮಾತ್ರ ಗಟ್ಟಿಯಾಗಿ ನಿಂತು ಟಿಕೆಟ್‌ ತಪ್ಪಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲುವಷ್ಟು ಮತಗಳಿವೆ. ಆದರೆ, ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ನೀಡಿದರೆ ಮುಸ್ಲಿಮ್‌ ಮೌಲ್ವಿಗಳು ಮತ ಹಾಕುವುದಿಲ್ಲ ಎಂದು ಸಾಮೂಹಿಕ ತೀರ್ಮಾನ ಮಾಡಿದ್ದಾರೆ ಎನ್ನುವುದು ಡಿಕೆಶಿ ವಾದ.

ಹೀಗಾಗಿ ಅಖಂಡ ಶ್ರೀನಿವಾಸ ಮೂರ್ತಿ ಟಿಕೆಟ್‌ ಕೈತಪ್ಪಿದೆ. ಈ ಅಂಶವನ್ನೇ ಮುಂದಿಟ್ಟುಕೊಂಡು ಬಿಜೆಪಿ ಅದನ್ನು ದಲಿತಾಸ್ತ್ರವಾಗಿ ಬಳಸಲು ಮುಂದಾಗಿದೆ.

ಯಾಕೆಂದರೆ ಅಖಂಡ ಶ್ರೀನಿವಾಸ ಮೂರ್ತಿ ಅವರು ದಲಿತರು. ಬೋವಿ ಜನಾಂಗಕ್ಕೆ ಸೇರಿದವರು. ಕಾಂಗ್ರೆಸ್‌ ದೊಡ್ಡ ಅಂತರದಲ್ಲಿ ಗೆಲ್ಲಬಲ್ಲ ತಾಕತ್ತಿನ ದಲಿತ ನಾಯಕನಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಇಡೀ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎನ್ನುವುದನ್ನು ಪ್ರಚಾರ ಮಾಡಲು ಅದು ಮುಂದಾಗಿದೆ.

ಅಖಂಡ ‌ಬೋವಿ ಜನಾಂಗಕ್ಕೆ ಸೇರಿದ ಕೆಳವರ್ಗದ ಶಾಸಕರು. ಅಂಥವರನ್ನು ಕಾಂಗ್ರೆಸ್‌ ಬೆಳೆಯಲು ಬಿಡುತ್ತಿಲ್ಲ ಎನ್ನುವುದು ಬಿಜೆಪಿಯ ವಾದದ ಹುರುಳು. ತಾನು ಎಸ್‌ಸಿ ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿದ್ದಲ್ಲದೆ ಒಳಮೀಸಲಾತಿಯನ್ನು ಕಲ್ಪಿಸಿದ್ದನ್ನೂ ಅದು ಉಲ್ಲೇಖ ಮಾಡಿ ಪ್ರಚಾರ ಮಾಡಲು ಮುಂದಾಗಿದೆ.

ರಾಜ್ಯದ ಹಲವು ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿ ದಲಿತ ಮತಗಳು ದೊಡ್ಡ ಸಂಖ್ಯೆಯಲ್ಲಿವೆ. ಅದರಲ್ಲೂ ಬೋವಿ ಸಮುದಾಯ ಮತಗಳು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಎಲ್ಲೆಲ್ಲ ಈ ಮತಗಳ ಪ್ರಭಾವ ಜಾಸ್ತಿ ಇದೆಯೋ ಅಲ್ಲೆಲ್ಲ ಇದನ್ನು ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ : ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯ; ಲಿಂಗಾಯತ ಸಿಎಂ ಅಜೆಂಡಾ, ಡ್ಯಾಮೇಜ್‌ ಕಂಟ್ರೋಲ್‌ಗೆ ತಂತ್ರ

Exit mobile version