Site icon Vistara News

Karnataka Elections : ತಿಣುಕಿದನು ಫಣಿರಾಯ ಭೂಭಾರದಲಿ ಎಂಬಂತೆ..; ಕಾಂಗ್ರೆಸ್‌ 3ನೇ ಪಟ್ಟಿಗೆ ಬಿ.ಎಲ್‌. ಸಂತೋಷ್‌ ಗೇಲಿ!

BL Santhosh

ಬೆಂಗಳೂರು: ತಿಣುಕಿದನು ಫಣಿರಾಯ ಭೂಭಾರದಲಿ ಎಂಬಂತೆ.. ಇದು ಕಾಂಗ್ರೆಸ್‌ ಪ್ರಕಟಿಸಿದ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಮೂರನೇ ಪಟ್ಟಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಕಮೆಂಟ್‌. ಕಾಂಗ್ರೆಸ್‌ 43 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು (Karnataka Elections) ಶನಿವಾರ ಬಿಡುಗಡೆ ಮಾಡಿದೆ. ಅದಕ್ಕಿಂತ ಹಿಂದೆ ಮೊದಲನೇ ಪಟ್ಟಿಯಲ್ಲಿ 125 ಮತ್ತು 2ನೇ ಪಟ್ಟಿಯಲ್ಲಿ 42 ಮಂದಿ ಅಭ್ಯರ್ಥಿಗಳನ್ನು ಹೆಸರಿಸಿತ್ತು. ಈಗ ಒಟ್ಟು 209 ಟಿಕೆಟ್‌ ಫೈನಲ್‌ ಆಗಿದ್ದು, 15 ಕ್ಷೇತ್ರಗಳು ಬಾಕಿ ಉಳಿದಿವೆ. ಬಿಜೆಪಿ ಎರಡು ಹಂತಗಳಲ್ಲಿ ಪಟ್ಟು 216 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, 8 ಸ್ಥಾನಗಳು ಬಾಕಿ ಇವೆ.

ಶನಿವಾರ ಕಾಂಗ್ರೆಸ್‌ ಪಟ್ಟಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬಿ.ಎಲ್‌. ಸಂತೋಷ್‌ ಅವರು, ʻʻತಿಣುಕಿದನು ಫಣಿರಾಯ ಭೂಭಾರದಲಿ ಎಂಬಂತೆ.. Third list of Congress released amidst serious infighting between DKShi & Siddaramaiah .. !!!ʼʼ ಎಂದು ಬರೆದುಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವಿನ ಗಂಭೀರ ಆಂತರಿಕ ಜಗಳಗಳ ನಡುವೆ ಬಹು ಕಷ್ಟದಿಂದ ಕಾಂಗ್ರೆಸ್‌ನ ಮೂರನೇ ಪಟ್ಟಿ ಬಿಡುಗಡೆಗೊಂಡಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಬಳಕೆಯಾಗಿರುವ ʻತಿಣುಕಿದನು ತಿಣುಕಿದನು ಫಣಿರಾಯ ಭೂಭಾರದಲಿ ಎಂಬಂತೆ..ʼ ಎನ್ನುವುದು ಅಭಿಪ್ರಾಯಭೇದಗಳ ನಡುವೆ, ವೈಯಕ್ತಿಕ ಪ್ರತಿಷ್ಠೆಗಳ ನಡುವೆ ಏನು ಮಾಡಬೇಕು ಎಂದು ಗೊತ್ತಾಗದೆ ತಿಣುಕಾಡಿ ಬಿಡುಗಡೆಗೊಂಡಿದೆ ಎನ್ನುವುದರ ಸಾಹಿತ್ಯಕ ವಿವರಣೆಯಾಗಿದೆ.

ಎಲ್ಲಿಂದ ಬಂತು ಈ ಉಪಮೆ?

ತಿಣುಕಿದನು ಫಣಿರಾಯ ಭೂಭಾರದಲಿ ಎನ್ನುವ ಉಪಮೆಯ ಮೂಲ ಇರುವುದು ಕುಮಾರವ್ಯಾಸನ ಮಾತಿನಲ್ಲಿ.

 “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ.”: ಇದು ಕುಮಾರವ್ಯಾಸನ ಮಾತು. ಪೀಠಿಕಾ ಸಂಧಿಯಲ್ಲೇ ಈ ಸಂಗತಿಯನ್ನು ಹೇಳಿಯೇ ತನ್ನ ಕಾವ್ಯ ರಚನೆಗೆ ಮೊದಲಿಡುತ್ತಾನೆ ಕುಮಾರವ್ಯಾಸ. ರಾಮಾಯಣದ ಕಥೆ ಆಧರಿಸಿ ಎಷ್ಟೆಲ್ಲಾ ಕಾವ್ಯ ರಚನೆಯಾಗಿದೆಯೆಂದರೆ ಅದರ ಭಾರಕ್ಕೆ ಭೂಮಿಯನ್ನೇ ತಲೆಯ ಮೇಲೆ ಹೊತ್ತಿರುವ ಆದಿಶೇಷನೆಂಬ ಮಹಾ ಸರ್ಪವೇ ರಾಮಾಯಣದ ಕವಿಗಳನ್ನು ಹೊರಲಾರದೆ ತಿಣುಕಿದನು ಎಂದು ವರ್ಣಿಸಿದ್ದ. ಅದನ್ನು ಕಾಲ ಕಾಲಕ್ಕೆ ಬೇರೆ ಬೇರೆ ವಿಚಾರಗಳಿಗೆ ಪೂರಕವಾಗಿ ಬಳಕೆ ಮಾಡಲಾಗುತ್ತಿದೆ. ಸಂತೋಷ್‌ ಅವರು ಕಾಂಗ್ರೆಸ್‌ ಟಿಕೆಟ್‌ನ ಭಾರಕ್ಕೆ ಅದನ್ನು ಸಂದರ್ಭೋಚಿತವಾಗಿ ಬೆಸೆದಿದ್ದಾರೆ.

ಮೂಲತಃ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಬಿ.ಎಲ್‌. ಸಂತೋಷ್‌ ಅವರು ಸಾಕಷ್ಟು ಅಧ್ಯಯನ ನಡೆಸುತ್ತಾ ಚೆನ್ನಾಗಿ ಭಾಷಣ ಮಾಡುತ್ತಾರೆ. ಹೀಗಾಗಿ ಇಂಥ ಉಪಮೆಗಳನ್ನು ತುಂಬಾ ಚೆನ್ನಾಗಿ ಬಳಸುತ್ತಾರೆ.

ಬಿ.ಎಲ್‌. ಸಂತೋಷ್‌ ಉಪಮೆಗೆ ಮಿಶ್ರ ಪ್ರತಿಕ್ರಿಯೆ

ಸಂತೋಷ್‌ ಅವರ ಈ ಹೋಲಿಕೆಗೆ ಫೇಸ್‌ ಬುಕ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನೀವು ಹೇಳಿದ್ದು ಹೌದು ಎಂದು ಸಮರ್ಥಿಸಿದ್ದಾರೆ. ಕೆಲವರು ನಿಮಗ್ಯಾಕೆ ಅವರ ಉಸಾಬರಿ, ನಿಮ್ಮದನ್ನು ಮೊದಲು ನೋಡಿಕೊಳ್ಳಿ ಎಂದಿದ್ದಾರೆ.

ಕೆಲವು ಅಭಿಪ್ರಾಯಗಳು ಇಲ್ಲಿವೆ

1. ಪೇಜ್ ಪ್ರಮುಖನಿಂದ ಪ್ರಾರಂಭಗೊಂಡು ಕ್ಷೇತ್ರದ ಅಧ್ಯಕ್ಷರವರೆಗೂ ಹತ್ತಾರು ಸಾವಿರ ಕಾರ್ಯಕರ್ತರಿರುವ #ಮಹದೇವಪುರ_ವಿಧಾನಸಭಾ_ಕ್ಷೇತ್ರದ ಕಾರ್ಯಕರ್ತರ ಆಶಯಗಳ ಮೇಲೆ ಸಮಾಧಿ ಕಟ್ಟಲು ಹೊರಟಿರುವ ಬಿಜೆಪಿ ಕರ್ನಾಟಕದ ಷಡ್ಯಂತವಾದರೂ ಏನು? 224 ಕ್ಷೇತ್ರಗಳ ಪೈಕಿ ಸಂಘಟನೆಯಲ್ಲಿ ಮಂಚೂಣಿಯಲ್ಲಿರುವುದು ನಮ್ಮ ತಪ್ಪೇ…? ಸಂಘಟನೆಯ ಚತುರರಾಗಿರುವ ನಮ್ಮ ಶಾಸಕರಾದ ಅರವಿಂದ ಲಿಂಬಾವಳಿರವರಿಗೆ ಟಿಕೆಟ್ ಕೊಡಲು ಹಿಂದೆ ಮುಂದೆ ನೋಡುತ್ತಿರುವ ಬಿಜೆಪಿ ವರಿಷ್ಠರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಎಲ್ಲಾ ಕಾರ್ಯಕರ್ತರು ಸಜ್ಜಾಗಿದ್ದಾರೆ.

2. What is your reaction to Satyapal malik’s statement about Pulwama is used for electoral benifits?! He was BJP national vice president and J & K governer appointed by BJP. He was the governer at the time of pulwama attack. (ಪುಲ್ವಾಮಾ ದಾಳಿಗೆ ಸಂಬಂಧಿಸಿ ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್‌ ಮಲಿಕ್‌ ಅವರ ಮಾತಿಗೆ ನಿಮ್ಮ ಅಭಿಪ್ರಾಯ ಏನು?)

3. ಕಾಂಗ್ರೆಸ್ ನಲ್ಲಿ CM ಆಕಾಂಕ್ಷಿಗಳ ಪಟ್ಟಿ ಬಿಡುಗಡೆ ಮಾಡಿರುವುದನ್ನು ನೋಡಿದರೆ ಸಿದ್ದುನ team ಬಂಡೆಯ ಬುಡಕ್ಕೆ ಡೈನಾಮಿಟ್ ಇಟ್ಟ ಹಾಗಿದೆ. ಕೋಲಾರದಲ್ಲಿ ಟಿಕೆಟ್ ರದ್ದಾದ ಎಫೆಕ್ಟ್ ಇರಬಹುದೇ.?

4. ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಬಹುದಾಗಿತ್ತು ಅಭ್ಯರ್ಥಿಗಳ ಕಷ್ಟ ಏನು ಅಂತ ನಿಮಗೂ ಗೊತ್ತಾಗಿತ್ತು.
5. ಜೀ ನಿಮ್ಮದೆ ತೂತು ಮಡಿಕೆ ಈ ಸಮಯದಲ್ಲಿ ಕಂಡವರದು ಬೇಕಾ?

ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್‌?

Exit mobile version