Site icon Vistara News

Karnataka Elections : ಲಿಂಗಾಯತ ಡ್ಯಾಮೇಜ್‌ ಕಂಟ್ರೋಲ್‌ಗಾಗಿ ಅಖಾಡಕ್ಕಿಳಿದ ಬಿಎಸ್‌ವೈ, ಮಠಾಧೀಶರನ್ನು ಭೇಟಿ ಮಾಡಿದ ನಡ್ಡಾ

Nadda meets mooru saavira mutt swameeji

#image_title

ಬೆಂಗಳೂರು: ರಾಜ್ಯದಲ್ಲಿ ಕೆಲವೊಂದು ವಿದ್ಯಮಾನಗಳಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಬಿಜೆಪಿಯ ಲಿಂಗಾಯತ ಮತಬ್ಯಾಂಕ್‌ಗೆ ಹೊಡೆತ ಬೀಳುವ ಅಪಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾಪಕ್ಷದ ನಾಯಕರು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಒಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿಯಲ್ಲಿ ಲಿಂಗಾಯತ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆ ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಲಿಂಗಾಯತ ಮುಖಂಡರನ್ನು ಕರೆಸಿಕೊಂಡು ಚರ್ಚೆ ನಡೆಸಿದರು.

ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪುತ್ರ ಬಿ.ವೈ. ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಸಂಜೆಯೇ ಬೆಂಗಳೂರಿಗೆ ವಾಪಸ್‌ ಆಗಿ ತಮ್ಮ ಕಾವೇರಿ ನಿವಾಸದಲ್ಲಿ ಲಿಂಗಾಯತ ಮುಖಂಡರ ಸಭೆಯನ್ನು ನಡೆಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಸಿ.ಸಿ‌ ಪಾಟೀಲ್, ಬಿ.ಸಿ. ಪಾಟೀಲ್‌, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ.ಎಸ್ ಬಸವರಾಜ್, ಪ್ರಭಾಕರ್ ಕೋರೆ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ.

ಜತೆಗೆ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್, ಮಹಾಂತೇಶ್ ಕವಟಗಿಮಠ, ಅರವಿಂದ್ ಬೆಲ್ಲದ್, ಎಂ.ಪಿ. ರೇಣುಕಾಚಾರ್ಯ, ಎ.ಎಸ್ ಪಾಟೀಲ್ ನಡಹಳ್ಳಿ, ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ನವೀನ್, ಸತೀಶ್, ಪಿ.ಹೆಚ್ ಪೂಜಾರು ಸೇರಿದಂತೆ ಒಟ್ಟು 41 ಜನರ ಲಿಂಗಾಯತ ಸಮುದಾಯ ನಾಯಕರ ನೇತೃತ್ವದಲ್ಲಿ ಸಭೆ ನಡೆದಿದೆ.

ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಿರುವುದು, ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನಿರಾಕರಿಸಿರುವುದು ಸೇರಿದಂತೆ ಹಲವು ವಿದ್ಯಮಾನಗಳು ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವುದರ ಸೂಚನೆ ಎಂದು ಕಾಂಗ್ರೆಸ್‌ ಪ್ರಚಾರ ನಡೆಸುತ್ತಿದೆ. ಜತೆಗೆ ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬೀಗುತ್ತಿದೆ.

ಈ ರೀತಿಯ ಹೊಡೆತಗಳ ಸಾಧ್ಯತೆಯನ್ನು ಗಮನಿಸಿಯೇ ಯಡಿಯೂರಪ್ಪ ಅವರು ತನ್ನನ್ನು ಬಲವಂತವಾಗಿ ಹುದ್ದೆಯಿಂದ ಇಳಿಸಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಆದಿಯಾಗಿ ಹಲವು ನಾಯಕರು ಬಿಜೆಪಿಯಿಂದ ಮುಂದೆಯೂ ಲಿಂಗಾಯತ ನಾಯಕರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೂ ಲಿಂಗಾಯತ ಸಮುದಾಯದಲ್ಲಿ ಸಣ್ಣ ಮಟ್ಟಿನ ಅಪನಂಬಿಕೆ ಮುಂದುವರಿದಿರುವುದನ್ನು ಹೈಕಮಾಂಡ್‌ ಮನಗಂಡಿದೆ.

ಇದೇ ಕಾರಣಕ್ಕಾಗಿ ಬಿ.ಎಸ್.‌ ಯಡಿಯೂರಪ್ಪ ಅವರದೇ ನೇತೃತ್ವದಲ್ಲಿ ನಾಯಕರ ಸಭೆ ನಡೆಸಿ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲು ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.

ಮೂರುಸಾವಿರ ಮಠಕ್ಕೆ ಜೆ.ಪಿ.ನಡ್ಡಾ ಅವರ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬುಧವಾರ ಮೂರುಸಾವಿರ ಮಠಕ್ಕೆ ಭೇಟಿ ನೀಡಿ, ಮಠದ ಸ್ವಾಮೀಜಿಗಳಾದ ಶ್ರೀ ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸುವತ್ತ ಪ್ರಧಾನಮಂತ್ರಿ ನರೇಂದ್ರಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೂ ಅಭಿನಂದನೆಗಳು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದು ಉತ್ತಮ ನಾಯಕತ್ವದಲ್ಲಿ ನಮ್ಮ ಹಿಂದೂ ಧರ್ಮ, ಸಂಸ್ಕೃತಿಯನ್ನು ಶತಮಾನಗಳಷ್ಟು ಮುಂದೆ ಕೊಂಡೊಯ್ಯುವ ಕೆಲಸ ನಡೆಯಬೇಕಿದೆ. ಹಿಂದೂ ಪರಂಪರೆಯೊಂದಿಗೆ ರಾಷ್ಟ್ರ ಪ್ರಗತಿ ಕಾರ್ಯಕ್ಕೆ ಮಠದ ವತಿಯಿಂದ ಶುಭಕಾಮನೆಗಳು ಎಂದು ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ಭೇಟಿಯೂ ಕೂಡಾ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಪಡೆಯುವ ಪ್ರಯತ್ನ ಎಂದು ಹೇಳಲಾಗಿದೆ.

ಇದನ್ನೂ ಓದಿ : Karnataka Election: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಲಿಂಗಾಯತರ ಮೇಲೆ ಪ್ರೀತಿ: ಸಿಎಂ ಬೊಮ್ಮಾಯಿ

Exit mobile version