Site icon Vistara News

Karnataka Elections 2023 : ಬಿಎಸ್‌ವೈ ಕರೆಗೆ ಕರಗಿದ ರಘುಪತಿ ಭಟ್‌; ಯಶ್ಪಾಲ್ ಸುವರ್ಣ 60 ಸಾವಿರ ಮತದಲ್ಲಿ ಗೆಲ್ತಾರೆ ಅಂದ್ರು

Udupi Raghupati Bhat

#image_title

ಉಡುಪಿ: ಉಡುಪಿ ವಿಧಾನಸಭಾ (Karnataka Elections) ಕ್ಷೇತ್ರದ ಬಿಜೆಪಿ ಟಿಕೆಟ್‌ ನಿರಾಕರಣೆಯ ಹಿನ್ನೆಲೆಯಲ್ಲಿ ಭಾರಿ ಆಘಾತಕ್ಕೊಳಗಾಗಿ ಭಾವನಾತ್ಮಕವಾಗಿ ಮಾತನಾಡಿದ್ದ ಹಾಲಿ ಶಾಸಕ ರಘುಪತಿ ಭಟ್‌ (Udupi Raghupati Bhat) ಅವರ ಬೇಸರವೀಗ ಶಮನಗೊಂಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾಡಿದ ಕರೆಗೆ, ಆಡಿದ ಮಾತು ಮತ್ತು ನೀಡಿದ ಭರವಸೆಗೆ ಅವರು ಕರಗಿದ್ದಾರೆ. ತಾವೇ ಅಭ್ಯರ್ಥಿ ಎಂಬಂತೆ ಕಣದಲ್ಲಿ ಪ್ರಚಾರ ನಡೆಸಿ ಯಶ್‌ಪಾಲ್‌ ಸುವರ್ಣ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ.

ಟಿಕೆಟ್‌ ನಿರಾಕರಣೆಗೆ ಒಳಗಾದ ಮರುದಿನ ಭಾರಿ ಬೇಸರದಿಂದ ಮಾತನಾಡಿದ್ದ ಅವರು ಯಾಕೆ ನನಗೆ ಟಿಕೆಟ್‌ ಇಲ್ಲ ಎನ್ನುವುದನ್ನು ಹೇಳಬೇಕು ಎಂದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ತನ್ನನ್ನು ಬ್ರಾಹ್ಮಣ ಎಂಬ ಕಾರಣಕ್ಕೆ ಟಿಕೆಟ್‌ ನಿರಾಕರಿಸಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದರು.

ಇದೀಗ ಬೇಸರ ಶಮನಗೊಂಡು ಲವಲವಿಕೆಯಿಂದ ಮಾತನಾಡಿರುವ ಅವರು, ʻʻನಿನ್ನೆ ನಾನು ಭಾವನಾತ್ಮಕವಾಗಿ ಮಾತನಾಡಿದ್ದೆ. ಬೇಸರದಿಂದ ಮಾತನಾಡಿದ್ದೆ. ಅಪ್ಪ ಅಮ್ಮ ಬೈದಾಗ ಬೇಸರ ಆಗುತ್ತದೆ, ಅಮ್ಮನಿಗೆ ವಾಪಸ್ ಬೈತೇವೆ. ನಂತರ ಅವರ ಜತೆಗೆ ಪ್ರೀತಿಯಿಂದ ಇರುತ್ತೇವೆ. ಅದೇ ರೀತಿ ನನ್ನ ಮತ್ತು ಪಕ್ಷದ್ದು ತಾಯಿ ಮಕ್ಕಳ ಸಂಬಂಧʼʼ ಎಂದು ಹೇಳಿದರು.

ʻʻನನ್ನ ಅಭಿಮಾನಿಗಳು, ಬಿಜೆಪಿ ಅಭಿಮಾನಿಗಳಲ್ಲಿ ವಿನಂತಿ ಏನೆಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಮಾಡುವುದು ಬೇಡ, ಅದನ್ನು ನಿಲ್ಲಿಸೋಣ. ಇನ್ನು ಮುಂದೆ ಯಶ್ಪಾಲ್‌ ಸುವರ್ಣರನ್ನು ಗೆಲ್ಲಿಸುವ ಸಂದೇಶ ಕಳುಹಿಸೋಣ. ನೂರಕ್ಕೆ ನೂರು ಉಡುಪಿ ವಿಧಾನಸಭಾ ಕ್ಷೇತ್ರ ಗೆಲ್ಲುತ್ತೇವೆʼʼ ಎಂದರು.

ಬದಲಾಗಿದ್ದು ಹೇಗೆ?

ʻಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನನಗೆ ಕರೆ ಮಾಡಿದ್ದರು. ಸಿಎಂ ಬೊಮ್ಮಾಯಿ ಅವರು ಮಾತನಾಡಿ ಸರಿಪಡಿಸುವ ವಿಷಯ ಏನೂ ಇಲ್ಲ. ಯಾವುದೇ ಟ್ರಬಲ್ ಇಲ್ಲ ಟ್ರಬಲ್ ಶೂಟರ್ ಕೂಡ ಇಲ್ಲ. ಪಕ್ಷ ಕೊಟ್ಟ ಅಭ್ಯರ್ಥಿಯ ಜೊತೆ ಕೆಲಸ ಮಾಡುವ ಎರಡನೇ ಅವಕಾಶ ಸಿಕ್ಕಿದೆ. ನಾನು ಅಭ್ಯರ್ಥಿಯಾದರೆ ಎಷ್ಟು ಸ್ಪೀಡ್ ನಲ್ಲಿ ಕೆಲಸ ಮಾಡುತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆʼʼ ಎಂದು ರಘುಪತಿ ಭಟ್‌ ಹೇಳಿದರು.

ʻʻಯಡಿಯೂರಪ್ಪ ಅವರು ಕರೆಮಾಡುವ ಮುಂಚೆ ನಾನು ಕೆಲಸ ಆರಂಭಿಸಿದ್ದೆ. ನೀನು ಒಳ್ಳೆ ಕಾರ್ಯಕರ್ತ, ನಿನಗೆ ಒಳ್ಳೆ ಭವಿಷ್ಯ ಇದೆ ಎಂದು ಭರವಸೆ ನೀಡಿದ್ದಾರೆ. ಬಿ.ಎಲ್ ಸಂತೋಷ್ ಅವರು ಕೂಡಾ ಟ್ವೀಟ್ ಮೂಲಕ ನನ್ನ ನಡೆಯನ್ನು ಪ್ರಶಂಸಿಸಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯʼʼ ಎಂದರು ರಘುಪತಿ ಭಟ್‌.

ʻʻಪಕ್ಷ ನನಗೆ ಮೂರು ಬಾರಿ ಶಾಸಕನಾಗುವ ಅವಕಾಶ ಕೊಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದವ ಮೂರು ಬಾರಿ ಶಾಸಕನಾಗಿದ್ದು ದೊಡ್ಡ ವಿಷಯ. ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲʼʼ ಎಂದರು.

ಯಶ್ಪಾಲ್‌ ಸುವರ್ಣ ಗೆಲ್ಲಿಸುವುದೇ ಗುರಿ

ʻʻನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ. 60,000 ಮತಗಳ ಅಂತರದಲ್ಲಿ ಯಶ್ಪಾಲ್‌ ಸುವರ್ಣ ಗೆಲ್ಲುತ್ತಾರೆ. ಇವತ್ತಿನಿಂದ ಸಂಘಟನಾತ್ಮಕ‌ ಕಾರ್ಯ ಚಟುವಟಿಕೆ ಪ್ರಾರಂಭ. ಯಶಪಾಲ್ ಜೊತೆಯಲ್ಲಿ ನಾನು ಚುನಾವಣೆಯ ದಿನದ ವರೆಗೂ ಪ್ರಚಾರ ಕಾರ್ಯ ನಡೆಸುತ್ತೇನೆ. ಎಲ್ಲರೂ ಕೂಡ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಎಲ್ಲಾ ಗೊಂದಲಗಳನ್ನು ಮರೆತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆʼʼ ಎಂದು ರಘುಪತಿ ಭಟ್‌ ಹೇಳಿದರು.

ಇದೇ ವೇಳೆ ಅಭ್ಯರ್ಥಿ ಯಶ್ಪಾಲ್‌ ಸುವರ್ಣ ಅವರು ಮಾತನಾಡಿ, ನಮ್ಮ ಒಗ್ಗಟ್ಟನ್ನು ಜನರ ಮುಂದೆ ಪ್ರದರ್ಶಿಸಿದ್ದೇವೆ. ರಘುಪತಿ ಭಟ್ ಸಂಘದ ಶಿಕ್ಷಣ ಪಡೆದವರು. ರಘುಪತಿ ಭಟ್ ಅವರು ಮಾಡಿದ ಅಭಿವೃದ್ಧಿ ಕಾರ್ಯವನ್ನು ಜನರ ಮುಂದೆ ತೋರಿಸಿ ಪ್ರಚಾರ ಮಾಡುತ್ತೇನೆʼʼ ಎಂದು ಹೇಳಿದರು.

ಇದನ್ನೂ ಓದಿ : Karnataka Elections : ಬ್ರಾಹ್ಮಣನೆಂದು ನನಗೆ ಟಿಕೆಟ್‌ ತಪ್ಪಿಸಿದರು; ಕಣ್ಣೀರು ಹಾಕಿದ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್‌

Exit mobile version