ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂಟು ಬಾರಿ ಪ್ರತಿನಿಧಿಸಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ಈ ಬಾರಿ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು ಹುರಿಯಾಳುವಾಗಿ ಕಣಕ್ಕಿಳಿಯಲಿದ್ದು, ಅಭ್ಯರ್ಥಿಯ ಅಧಿಕೃತ ಘೋಷಣೆಗೆ ಮೊದಲೇ ದೊಡ್ಡ ಮಟ್ಟದ ಪ್ರಚಾರ (Karnataka Elections) ಆರಂಭಗೊಂಡಿದೆ.
ಸೋಮವಾರ ಶಿಕಾರಿಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಬಿ.ಎಸ್ ಯಡಿಯೂರಪ್ಪ ಅವರೇ ಪ್ರಚಾರಕ್ಕೆ ಚಾಲನೆ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಅವರ ಸಾರಥ್ಯದಲ್ಲಿ ನಡೆದ ಈ ಸಭೆಯಲ್ಲಿ ವಿಜಯೇಂದ್ರ ಅವರು ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎನ್ನುವುದು ಖಚಿತವಾಯಿತು. ಸ್ವತಃ ವಿಜಯೇಂದ್ರ ಅವರೂ ಇದನ್ನು ಘೋಷಣೆ ಮಾಡಿದರು.
ವಿಜಯೇಂದ್ರ ಗೆಲುವಿಗೆ ಬಿಎಸ್‌ವೈ ಕರೆ
ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರು ಪುತ್ರನ ಪರ ಬಿಎಸ್‌ವೈ ಭರ್ಜರಿ ಬ್ಯಾಟಿಂಗ್ ನಡೆಸಿದರು.
ʻʻವಿಜಯೇಂದ್ರ ಎಲ್ಲಿ ಸ್ಪರ್ಧೆ ನಡೆಸಬೇಕು ಎನ್ನುವ ಬಗ್ಗೆ ಕೊನೆಯವರೆಗೂ ಗೊಂದಲ ಇತ್ತು. ನಾನು ತೀರ್ಮಾನ ಮಾಡಿ ವರುಣಕ್ಕೆ ಹೋಗಬೇಕಾಗಿದ್ದ ವಿಜಯೇಂದ್ರ ಅವರನ್ನು ಶಿಕಾರಿಪುರಕ್ಕೆ ಕರೆತಂದಿದ್ದೇನೆʼʻ ಎಂದು ಹೇಳಿದರು.
ʻʻಇಡೀ ರಾಜ್ಯದಲ್ಲಿ ವಿಜಯೇಂದ್ರ ಬೇಕು ಅಂತಾ ಜನರು ಹೇಳುತ್ತಿದ್ದಾರೆ. ವಿಜಯೇಂದ್ರ ಜನಪ್ರಿಯತೆ ತುಂಬಾ ಸಂತಸ ತಂದಿದೆʼʼ ಎಂದು ಯಡಿಯೂರಪ್ಪ ಹೇಳಿದರು.
ಮುಸ್ಲಿಮರು ವಿಜಯೇಂದ್ರ ಮೇಲೆ ವಿಶ್ವಾಸವಿಡಬೇಕು
ʻʻಮುಸ್ಲಿಮರ ಮನವಿ ವಿಚಾರದಲ್ಲಿ ನಾನು ಎಂದೂ ತಾರತಮ್ಯ ಮಾಡಿಲ್ಲ. ಮುಸ್ಲಿಂರಿಗೆ ಅನ್ಯಾಯವಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನಗೆ ಎಲ್ಲರೂ ಒಂದೇ. ಮುಸ್ಲಿಮರು ಕೂಡಾ ವಿಜಯೇಂದ್ರ ಮೇಲೆ ಪ್ರೀತಿ ವಿಶ್ವಾಸ ಇಡಬೇಕುʼʼ ಎಂದು ಹೇಳಿದ ಬಿಎಸ್‌ವೈ, ʻʻವಿಜಯೇಂದ್ರ ಗೆದ್ದರು ಎನ್ನುವ ಸುದ್ದಿ ಬರಬೇಕೇಂದರೆ ಪ್ರತಿಯೊಂದು ಬೂತ್ ನಲ್ಲಿ ಕೆಲಸ ಮಾಡಬೇಕು. 50 ಸಾವಿರ ಮತಗಳ ಅಂತರದಿಂದ ವಿಜಯೇಂದ್ರ ಗೆಲ್ಲಬೇಕು ಎಂದರು.
ಅಪ್ಪನ ಕ್ಷೇತ್ರದಲ್ಲಿ ಸ್ಪರ್ಧೆಯ ಖುಷಿ ಎಂದ ವಿಜಯೇಂದ್ರ
ʻʻಚುನಾವಣೆಯ ಯುದ್ಧ ಘೋಷಣೆ ಆಗಿದೆ. ಇದು ರಾಜ್ಯದ ಇತಿಹಾಸ ಪುಟದ ಸುವರ್ಣ ಅಕ್ಷರದಲ್ಲಿ ಬರೆದು ಇಡುವಂತಹ ಚುನಾವಣೆ ಆಗಲಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಮತ್ತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆʼʼ ಎಂದು ಸಭೆಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಹೇಳಿದರು.
ʻʻಶಿಕಾರಿಪುರ. ಶಿವಮೊಗ್ಗ ಮತ್ತು ರಾಜ್ಯದ ಅಭಿವೃದ್ಧಿಗೆ ಬಿಎಸ್ ವೈ ಕೊಡುಗೆ ದೊಡ್ಡದಿದೆ. ಶಿಕಾರಿಪುರ ತಾಲೂಕು ಮಾದರಿ ಆಗಿದೆʼʼ ಎಂದು ಹೇಳಿದ ಅವರು, ಬಿಎಸ್ ವೈ ಎಂಬ ಆಧುನಿಕ ಭಗೀರಥನಿಂದಾಗಿ ಶಿಕಾರಿಪುರ ರಾಜ್ಯದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಕಂಡಿದೆ. ಅಭಿವೃದ್ಧಿ ರಥ ಮುಂದುವರಿಯಬೇಕು ಎಂಬ ಕಾರಣಕ್ಕಾಗಿ ಬಿಎಸ್ ವೈ ಅವರು ನನ್ನ ಹೆಸರನ್ನು ಶಿಕಾರಿಪುರ ಕ್ಷೇತ್ರಕ್ಕೆ ಘೋಷಣೆ ಮಾಡಿದ್ದಾರೆʼʼ ಎಂದು ಹೇಳಿದರು ವಿಜಯೇಂದ್ರ.
ʻʻನಾನು ಶಾಸಕನಾಗಿ ಆಯ್ಕೆಯಾಗಲು ರಾಜ್ಯದ ಯಾವುದಾದರೂ ಕ್ಷೇತ್ರ ಸ್ಪರ್ಧೆ ಮಾಡಬಹುದಿತ್ತು. ಅದರೆ, ಅಪ್ಪನಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಎಂಬ ಕಾರಣಕ್ಕಾಗಿ ಶಿಕಾರಿಪುರದಿಂದ ಸ್ಪರ್ಧಿಸುತ್ತಿರುವೆ. ಬಿಎಸ್ ವೈ ಅವರಂತೆ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷದ ಸಂಘಟನೆಯ ಸಂಕಲ್ಪ ಮಾಡಿರುವೆʼʼ ಎಂದು ವಿಜಯೇಂದ್ರ ಹೇಳಿದರು.
ʻʻರಂಜಾನ್ ಉಪವಾಸ ಇದ್ದರೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದಿರುವುದು ಖುಷಿಕೊಟ್ಟಿದೆ. ನಾನು ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲʼʼ ಎಂದು ಹೇಳಿದರು. ಇದೇ ವೇಳೆ ವರುಣದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ವಿಜಯೇಂದ್ರ ಪರೋಕ್ಷವಾಗಿ ಹೇಳಿದರು.
ಬಂಜಾರರ ಸಿಟ್ಟು ತಣಿಸಲು ಪಿ. ರಾಜೀವ
ರಾಜ್ಯದಲ್ಲಿ ಪ್ರಕಟಿಸಲಾಗಿರುವ ಒಳಮೀಸಲಾತಿಯಿಂದ ಶಿಕಾರಿಪುರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಂಜಾರರು ಸಿಟ್ಟಿಗೆದ್ದಿದ್ದಾರೆ. ಈ ಸಿಟ್ಟನ್ನು ತಣಿಸುವ ಉದ್ದೇಶದಿಂದ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಅವರನ್ನೂ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು. ಅವರು, ʻʻʻಬಿಎಸ್ ವೈ ರಕ್ತ ಚೆಲ್ಲಿ ನೀರು ಹರಿಸಿದ ಭಗೀರಥʼʼ ಎಂದರು. ರಾಜೀವ ಅವರು ಬಂಜಾರ ಸಮಾಜದ ಶಾಸಕರು, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.
ಗ್ರಾಮ ದೇವತೆಯ ದರ್ಶನ ಪಡೆದ ಯಡಿಯೂರಪ್ಪ
ಶಿಕಾರಿಪುರಕ್ಕೆ ಆಗಮಿಸಿದ ಯಡಿಯೂರಪ್ಪನವರು ಶಿಕಾರಿಪುರ ಗ್ರಾಮ ದೇವತೆಯಾದ ಶ್ರೀ ಹುಚ್ಚರಾಯಸ್ವಾಮಿ ದೇವರ ಆಶೀರ್ವಾದವನ್ನು ಪಡೆದು ಶಿಕಾರಿಪುರದ ರಾಘವೇಂದ್ರ ಮಠಕ್ಕೆ ಆಗಮಿಸಿ ದರ್ಶನ ಪಡೆದರು. ನಂತರ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಕುಡಚಿ ಶಾಸಕ ರಾಜೀವ್, ಮಾಜಿ ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಮುಖಂಡರು ಹಾಜರಿದ್ದರು.
ಇದನ್ನೂ ಓದಿ : B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ