Site icon Vistara News

Karnataka Elections 2023 : ಸಿದ್ದರಾಮಯ್ಯ ಸ್ಪರ್ಧಾ ಕಣ ವರುಣದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಬಿ.ವೈ ವಿಜಯೇಂದ್ರ

BY Vijayendra and siddaramaiah

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವರುಣ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections 2023) ಸೋಲಿಸುವ ನಿಟ್ಟಿನಲ್ಲಿ ಬಿಜೆಪಿ ಹಲವು ತಂತ್ರಗಳನ್ನು ರೂಪಿಸಿದೆ. ಅದರ ಭಾಗವಾಗಿಯೇ ಪ್ರಬಲ ಲಿಂಗಾಯತ ನಾಯಕರಲ್ಲಿ ಒಬ್ಬರಾದ, ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿ ಸಡ್ಡು ಹೊಡೆದಿದೆ. ಇದರ ಜತೆಗೆ ಇದೀಗ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ವರುಣಕ್ಕೆ ಕಳುಹಿಸಿಕೊಡುವ ಮೂಲಕ ಸಿದ್ದರಾಮಯ್ಯ ಅವರ ಬೆವರಿಳಿಸಲು ಮುಂದಾಗಿದೆ.

ಒಂದು ಕಡೆ ಸಿದ್ದರಾಮಯ್ಯ ಅವರ ವಿರುದ್ಧ ಸೋಮಣ್ಣ, ಇನ್ನೊಂದು ಕಡೆದ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಕಂದಾಯ ಸಚಿವ ಆರ್‌. ಅಶೋಕ್‌ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಅವರಿಬ್ಬರನ್ನು ಕಟ್ಟಿ ಹಾಕಲು ಸನ್ನಾಹ ನಡೆಸಿದೆ. ಅವರು ಬೇರೆ ಕಡೆ ಹೆಚ್ಚು ಪ್ರಚಾರ ಮಾಡಲು ಅವಕಾಶ ಸಿಗಬಾರದು ಎನ್ನುವುದು ಅದರ ಪ್ಲ್ಯಾನ್‌. ಇದರ ಜತೆಗೆ ವರುಣಕ್ಕೆ ವಿಜಯೇಂದ್ರ ಅವರನ್ನು ಕಳುಹಿಸಿಕೊಡುವ ಪ್ಲ್ಯಾನ್‌ ಕೂಡಾ ಜಾರಿಯಲ್ಲಿದೆ.

ನಿಜವೆಂದರೆ, ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಿಜಯೇಂದ್ರ ಅವರನ್ನೇ ಬಿಜೆಪಿ ಕಣಕ್ಕಿಳಿಸಲು ಎಲ್ಲ ಪ್ಲ್ಯಾನ್‌ಗಳು ಸಿದ್ಧವಾಗಿದ್ದವು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಧ್ಯ ಪ್ರವೇಶ ಮಾಡಿ ಮಗನ ರಾಜಕೀಯ ಪ್ರವೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡುವುದು ಬೇಡ ಎಂದು ಒತ್ತಡ ಹೇರಿದ ಪರಿಣಾಮವಾಗಿ ನೇರ ಸ್ಪರ್ಧೆಗೆ ಅವಕಾಶ ತಪ್ಪಿದೆ. ವಿಜಯೇಂದ್ರ ಅವರು 2018ರ ಚುನಾವಣೆಯಲ್ಲಿ ವರುನದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಯುವುದು ಸ್ವಲ್ಪದರದಲ್ಲೇ ತಪ್ಪಿತ್ತು.

ಈ ಬಾರಿ ಬಿಜೆಪಿ ಹೈಕಮಾಂಡ್‌ ನೇರ ಸ್ಪರ್ಧೆ ಬೇಡ ಎಂಬ ಮನವಿಯನ್ನು ಸ್ವೀಕರಿಸಿದೆಯಾದರೂ ಕ್ಷೇತ್ರದಲ್ಲಿ ತಿರುಗಾಟ ಮಾಡಿ ಸೋಮಣ್ಣ ಅವರ ಪರವಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ನಿಜವೆಂದರೆ ವಿಜಯೇಂದ್ರ ಮತ್ತು ವಿ. ಸೋಮಣ್ಣ ಅವರ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲವಾದರೂ ಹೈಕಮಾಂಡ್‌ನ ಸೂಚನೆ ಹಿನ್ನೆಲೆಯಲ್ಲಿ ಸೋಮಣ್ಣ ಬೆನ್ನಿಗೆ ನಿಲ್ಲುವ ಸೂಚನೆಗಳಿವೆ.

ಶುಕ್ರವಾರ (ಏಪ್ರಿಲ್‌ 21) ಅವರು ವರುಣ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಅವರು ವರುಣ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ವರುಣದಲ್ಲಿ ಸಭೆ ನಡೆಸಿದ ಬಳಿಕ ಅವರು ಕೆ.ಆರ್.ಕ್ಷೇತ್ರದಲ್ಲಿ‌ ಪ್ರಚಾರ ನಡೆಸಲಿದ್ದಾರೆ. ಮೈಸೂರು, ಚಾಮರಾಜನಗರ ಭಾಗದಲ್ಲಿ ವಿಜಯೇಂದ್ರ ಅವರು ಕಾರ್ಯಕರ್ತರ ಸಭೆ ಮಾಡಲಿರುವುದನ್ನು ಸಂಸದ ಪ್ರತಾಪ್ ಸಿಂಹ ಖಚಿತಪಡಿಸಿದ್ದಾರೆ.

ವರುಣ ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ದೊಡ್ಡ ಮಟ್ಟದಲ್ಲಿದ್ದು, ಇದನ್ನು ಬಿಜೆಪಿ ಕಡೆಗೆ ಸೆಳೆಯುವ ಪ್ರಯತ್ನವನ್ನು ವಿಜಯೇಂದ್ರ ಮಾಡಲಿದ್ದಾರೆ ಎನ್ನಲಾಗಿದೆ. ಅದರ ಜತೆಗೆ ಎಲ್ಲ ವರ್ಗಗಳನ್ನು ಸೆಳೆಯುವ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

ವರುಣಕ್ಕೆ ವಿಜಯೇಂದ್ರ ಎಂಟ್ರಿಯನ್ನು ಕಾಂಗ್ರೆಸ್‌ ಯಾವ ರೀತಿ ಸ್ವೀಕರಿಸಲಿದೆ, ಸಿದ್ದರಾಮಯ್ಯ ಅವರು ಇದಕ್ಕೆ ಯಾವ ರೀತಿ ಪ್ರತಿತಂತ್ರ ಹೆಣೆಯಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ : Karnataka Election 2023 : ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ. ಸುರೇಶ್‌; ಕಾರಣವೇನು ಗೊತ್ತೇ?

Exit mobile version