ಬೆಂಗಳೂರು: ಬಿಜೆಪಿ ಮತ್ತು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಗುರುಮಠಕಲ್‌ನ ಮಾಜಿ ಶಾಸಕ ಬಾಬುರಾವ್ ಚಿಂಚನಸೂರು ಅವರು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷವನ್ನು (Karnataka Elections) ಸೇರಲಿದ್ದಾರೆ. ಇವರೊಂದಿಗೆ 16 ಜನ ಎಡಗೈ ಸಮುದಾಯದ ನಾಯಕರು ಹಾಗೂ ಐವರು ಬಲಗೈ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕ್ರಮ ಆಯೋಜನೆಯಾಗಿದೆ.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್. ಆಂಜನೇಯ ಮೊದಲಾದ ಪರಿಶಿಷ್ಟ ಜಾತಿಯ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇವರ ಜತೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್ ಅವರು ಕೂಡಾ ಇರುತ್ತಾರೆ.
ಬೆಂಗಳೂರಿನಲ್ಲಿ ಅಧಿಕೃತವಾಗಿ ಪಕ್ಷ ಸೇರಿದ ಬಳಿಕ ಬಾಬುರಾವ್ ಚಿಂಚನಸೂರು ಅವರು ಯಾದಗಿರಿಯಲ್ಲಿ ಮಾರ್ಚ್ 25ರಂದು ಬೃಹತ್ ಸಮಾವೇಶ ನಡೆಸಲಿದ್ದಾರೆ. ಅಲ್ಲಿ ಶಕ್ತಿ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬದ್ಧ ವಿರೋಧಿಯಾಗಿದ್ದಲ್ಲದೆ, ಖರ್ಗೆ ಸೋಲಿಗೂ ಕಾರಣವಾಗಿದ್ದ ಚಿಂಚನಸೂರು ಅವರು ಈಗ ಮೈಮನಸ್ಸು ಮರೆತಿದ್ದಾಗಿ ಸಂದೇಶ ರವಾನಿಸಿದ್ದಾರೆ.
ಟಿಕೆಟ್ ಕೊಡದ ಕಾರಣಕ್ಕೆ ಕಾಂಗ್ರೆಸ್‌ಗೆ
2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬು ರಾವ್ ಚಿಂಚನಸೂರು ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ತೀವ್ರ ವಿರೋಧಕ್ಕೆ ಗುರಿಯಾಗಿದ್ದರು. ಈ ನಡುವೆ ಬಿಜೆಪಿ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿತ್ತು.
ಚಿಂಚನಸೂರು ಅವರು ಈ ಬಾರಿಯ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದರು. ಆದರೆ, ಎಂಎಲ್‌ಸಿ ಆಗಿರುವ ಕಾರಣ ಎಂಎಲ್‌ಎ ಟಿಕೆಟ್ ಅನ್ನು ಬಿಜೆಪಿ ವರಿಷ್ಠರು ನಿರಾಕರಿಸಿದ್ದರು. ಇದೀಗ ಕಾಂಗ್ರೆಸ್ ಅವರಿಗೆ ಗುರುಮಠಕಲ್ ಟಿಕೆಟ್ ನೀಡಬೇಕಾಗಿದೆ. ಈ ಒಪ್ಪಂದದ ಬಳಿಕವೇ ಅವರು ಕಾಂಗ್ರೆಸ್‌ಗೆ ಮರಳಿರುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆಯೇ ಬಿಜೆಪಿ ಬಿಡಲು ಚಿಂಚನಸೂರ್ ಅವರು ಯೋಚಿಸಿದ್ದರು. ಫೆ.13 ರಂದು ಚಿಂಚನಸೂರ್ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತುಕತೆ ನಡೆಸಿ ಪಕ್ಷದಲ್ಲೇ ಇರುವಂತೆ ಮನವೊಲಿಸಿದ್ದರು. ಬಳಿಕ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಚಿಂಚನಸೂರ್ ತೊಡೆ ತಟ್ಟಿದ್ದರು. ಇದೀಗ ಮತ್ತೆ ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದು ಖರ್ಗೆ ಕುಟುಂಬದ ಜತೆ ಹೊಂದಾಣಿಕೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : Karnataka Election: ಬಿಜೆಪಿಗೆ ಚಿಂಚನಸೂರ್ ಶಾಕ್, ಕೋಲಿ ಸಮಾಜದ ಮತಗಳು ಕಾಂಗ್ರೆಸ್‌ಗೆ?