Site icon Vistara News

Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್‌, ಮುನಿರತ್ನ ಕರೆಸಿಕೊಂಡು ಚರ್ಚೆ

Shivarama hebbar car

#image_title

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Elections 2023) ಘೋಷಣೆ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ವಲಸಿಗರ ಸಚಿವರನ್ನು ಕರೆಸಿಕೊಂಡು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಬುಧವಾರ ಬೆಳಗ್ಗೆಯಷ್ಟೇ ಸಿಎಂ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ವಲಸಿಗ ಸಚಿವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು ಮತ್ತು ಅದಕ್ಕೆ ಡಿ.ಕೆ. ಶಿವಕುಮಾರ್‌ ತಿರುಗೇಟು ಕೂಡಾ ನೀಡಿದ್ದರು. ಅದರ ಬೆನ್ನಿಗೇ ಸಚಿವರಾದ ಮುನಿರತ್ನ ಮತ್ತು ಶಿವರಾಮ ಹೆಬ್ಬಾರ್‌ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು.

ವಿಶೇಷವೆಂದರೆ, ಚುನಾವಣೆ ಘೋಷಣೆ ವಿಚಾರ ತಿಳಿಯುತ್ತಿದ್ದಂತೆಯೇ ಸಚಿವರಾದ ಆರ್‌. ಅಶೋಕ್‌, ಮುನಿರತ್ನ ಮತ್ತು ವಿ. ಸೋಮಣ್ಣ ಅವರು ವಿಕಾಸ ಸೌಧಕ್ಕೆ ಧಾವಿಸಿ ಬಂದು ಚುನಾವಣೆ ಘೋಷಣೆಗೆ ಮುನ್ನವೇ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಾಧನೆಗಳ ಕಥೆ ಹೇಳಿದರು. ಅದಾದ ಬಳಿಕ ಈ ಸಚಿವರೆಲ್ಲರೂ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.

ಚುನಾವಣೆ ಘೋಷಣೆ ಮತ್ತು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳ ಮತ್ತು ಹಾವೇರಿ ಜಿಲ್ಲಾ ಪ್ರವಾಸವನ್ನು ರದ್ದು ಮಾಡಿ ತಮ್ಮ ನಿವಾಸದಲ್ಲೇ ಉಳಿದಿದ್ದರು. ಅಲ್ಲಿಗೆ ಭೇಟಿ ನೀಡಿದ ಆರ್‌. ಅಶೋಕ್‌ ಅವರು ಚುನಾವಣೆ ದಿನಾಂಕ ಹಾಗೂ ಚುನಾವಣಾ ಸಿದ್ದತೆ ಬಗ್ಗೆ ಚರ್ಚೆ ನಡೆಸಿದರು.

ಇದಾದ ಬಳಿಕ ಸಚಿವರಾದ ಮುನಿರತ್ನ ಮತ್ತು ವಿ ಸೋಮಣ್ಣ ಅವರು ಸಿಎಂ ಬೊಮ್ಮಾಯಿ ಭೇಟಿ ಮಾಡಲು ಖಾಸಗಿ ಕಾರಿನಲ್ಲಿ ಆಗಮಿಸಿದರು. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಶಿವರಾಮ ಹೆಬ್ಬಾರ್‌ ಅವರು ಕೂಡಾ ಖಾಸಗಿ ಕಾರಿನಲ್ಲೇ ಆಗಮಿಸಿದರು.

ಪಕ್ಷ ಬಿಟ್ಟು ಹೋಗುತ್ತಾರೆ ಎಂದೆಲ್ಲ ಸುದ್ದಿಯಾಗಿದ್ದ ಸಚಿವ ವಿ. ಸೋಮಣ್ಣ, ವಲಸಿಗ ಸಚಿವರಾದ ಮುನಿರತ್ನ ಮತ್ತು ಶಿವರಾಮ ಹೆಬ್ಬಾರ್‌ ಅವರು ಆಗಮಿಸಿದ್ದು ಚರ್ಚೆಗೆ ಕಾರಣವಾಗಿದೆ. ಸಿಎಂ ಬೊಮ್ಮಾಯಿ ಅವರು ಡಿ.ಕೆ. ಶಿವಕುಮಾರ್‌ ಅವರ ಮೇಲೆ ಆಪಾದನೆ ಮಾಡುವ ಜತೆಗೆ ಪಕ್ಷದ ಶಾಸಕರ ಮೇಲೂ ನಿಗಾ ಇಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ವಿಚಾರವನ್ನು ತಿಳಿದುಕೊಳ್ಳುವುದಕ್ಕಾಗಿ ಈ ಮೂವರನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್‌ ಅವರು ವಲಸಿಗ ಸಚಿವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದಾರೆ. ಕ್ಷೇತ್ರ ಖಾಲಿ ಇಟ್ಟು ಒತ್ತಡ ಹೇರುತ್ತಿದ್ದಾರೆ ಎಂದು ಬುಧವಾರ ಬೆಳಗ್ಗೆಯಷ್ಟೇ ಸಿಎಂ ಬೊಮ್ಮಾಯಿ ಕಿಡಿ ಕಾರಿದ್ದರು.

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‌ ಸೇರ್ಪಡೆ ಸುದ್ದಿ ಜೋರಾಗುತ್ತಿರುವ ಹಿನ್ನೆಲೆಯಲ್ಲಿಯೇ ಶಿವರಾಮ ಹೆಬ್ಬಾರ್‌ ಅವರನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಬಿಟ್ಟು ಹೋಗುತ್ತಿರುವವರ ಸಂಭಾವ್ಯ ಪಟ್ಟಿಯಲ್ಲಿ ಶಿವರಾಮ ಹೆಬ್ಬಾರ್‌ ಹೆಸರೂ ಇರುವುದು ಈದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ವಲಸಿಗ ಸಚಿವರ ಜೊತೆ ಸಂಪರ್ಕ ಸಾಧಿಸಿ, ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಇದಕ್ಕಿಂತ ಮೊದಲು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುನಿರತ್ನ ಅವರು, ಡಿ.ಕೆ. ಶಿವಕುಮಾರ್‌ ಗಾಳ ಹಾಕುತ್ತಿರುವುದು ನಿಜ. ಆದರೆ, ನಾವು ಯಾರೂ ಹೋಗಲ್ಲ ಎಂದಿದ್ದರು.

ಇದನ್ನೂ ಓದಿ :Karnataka Elections 2023 : ಡಿಕೆಶಿ ಹಲವು ನಾಯಕರಿಗೆ ಗಾಳ ಹಾಕ್ತಿರೋದು ನಿಜ, ನಾವ್ಯಾರೂ ಹೋಗೊಲ್ಲ ಎಂದ ಸಚಿವ ಮುನಿರತ್ನ

Exit mobile version