ಹಾವೇರಿ: ಒಂದು ಕಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಿಗ್ಗಾಂವಿ ಮತ ಕ್ಷೇತ್ರದಲ್ಲಿ (Karnataka Elections 2023) ಸೋಲಿಸಲೆಂದು ಕಾಂಗ್ರೆಸ್ ತಂತ್ರಗಳನ್ನು ಹೆಣೆಯುತ್ತಿದ್ದರೆ ಇತ್ತ ಅವರ ಪತ್ನಿ ಚನ್ನಮ್ಮ ಬಸವರಾಜ ಬೊಮ್ಮಾಯಿ ಅವರು ಪತಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಗ ರಾಜ್ಯಾದ್ಯಂತ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಬೇಕಾದ ಹೆಚ್ಚುವರಿ ಹೊಣೆಗಾರಿಕೆ ಮಾತ್ರವಲ್ಲ ಮುಖ್ಯ ಹೊಣೆಗಾರಿಕೆಯನ್ನೇ ಹೊಂದಿದ್ದಾರೆ. ಅವರು ಕ್ಷೇತ್ರದಿಂದ ದೂರವಿದ್ದರೂ ಅವರ ಪತ್ನಿ ಮಾತ್ರ ಶಿಗ್ಗಾಂವಿಯಲ್ಲೇ ಬೀಡು ಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಚನ್ನಮ್ಮ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಅಲ್ಲಿನ ನಗರ ಭಾಗದ ಮನೆಗಳು ಮಾತ್ರವಲ್ಲದೆ, ಅಂಗಡಿ ಮುಂಗಟ್ಟುಗಳಿಗೆ ಹೋಗಿಯೂ ಪ್ರಚಾರ ಮಾಡುತ್ತಿದ್ದಾರೆ. ಕೆಲವು ಕಡೆ ಒಂದೇ ಮನೆಯಲ್ಲಿ ಜನರನ್ನು ಸೇರಿಸಿ ಸಣ್ಣ ಸಭೆಗಳನ್ನು ಮಾಡುತ್ತಿದ್ದಾರೆ.
ಚನ್ನಮ್ಮ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಸವೂರು, ಮಾವೂರು, ಚಳ್ಯಾಳ ಮೊದಲಾದ ಗ್ರಾಮಗಳನ್ನು ಸುತ್ತಿದ್ದಾರೆ. ಪ್ರಮುಖವಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಪ್ರಚಾರ ಮಾಡುತ್ತಿರುವ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಮಾಡಿರುವ ಕೆಲಸಗಳನ್ನು ವಿವರಿಸುತ್ತಾ ಮತ ಕೇಳುತ್ತಿದ್ದಾರೆ. ಈ ಬಾರಿ ಬಿಜೆಪಿ ಮಹಿಳೆಯರಿಗಾಗಿ ಘೋಷಿಸಿರುವ ಕಾರ್ಯಕ್ರಮಗಳನ್ನು ಮತದಾರರಿಗೆ ವಿವರಿಸುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಪತ್ನಿ ಚನ್ನಮ್ಮ ಅವರು ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ ಮದುವೆಯಾದ ಆರಂಭದಲ್ಲಿ ಶಿಗ್ಗಾಂವಿಯ ಮನೆಯಲ್ಲೇ ಇದ್ದರು. ಹೀಗಾಗಿ ಹಳ್ಳಿ ಬದುಕಿನ ಬಗ್ಗೆಯೂ ಅವರು ತಿಳಿದಿದ್ದರು. ಮಹಿಳಾ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು.
ಆದರೆ, ಚನ್ನಮ್ಮ ಅವರಿಗೆ ಪತಿಯ ರಾಜಕೀಯ ಜೀವನ, ಮಂತ್ರಿಗಿರಿಯ ಬಗ್ಗೆ ಅಷ್ಟೇನೂ ಕುತೂಹಲಗಳು ಇರಲಿಲ್ಲ. ರಾಜಕೀಯದ ಮನೆಯಲ್ಲೇ ಬೆಳೆದುಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ವಿಷಯಗಳು ತಿಳಿದಿದ್ದರೂ ಗಂಡನ ಜತೆ ಅದರ ಚರ್ಚೆಗಳನ್ನು ಮಾಡುತ್ತಿರಲಿಲ್ಲ. ಎರಡು ವರ್ಷದ ಹಿಂದೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಪಟ್ಟಕ್ಕೇರುವ ವಿಚಾರವೂ ದೊಡ್ಡ ಮಟ್ಟದಲ್ಲಿ ಮನೆಯಲ್ಲಿ ಚರ್ಚೆಯಾಗಿರಲಿಲ್ಲ ಎಂದು ಅವರೇ ಹೇಳಿಕೊಂಡಿದ್ದರು.
ಆದರೆ, ಈ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಪತಿಯ ಕಾರ್ಯಭಾರವನ್ನು, ಪ್ರಚಾರದ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ತಾವೇ ಕಣಕ್ಕೆ ಧುಮುಕಿದ್ದಾರೆ. ಅವರ ಮಗಳು ಮತ್ತು ಮಗ ಕೂಡಾ ಅಪ್ಪನ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ : Karnataka Election 2023: ಶಿಗ್ಗಾಂವಿಯಲ್ಲಿ ಕೇಸರಿ ಮೇನಿಯಾ; ಕಿಚ್ಚನ ಅಬ್ಬರದ ನಡುವೆ ಭಾವುಕರಾದ ಬೊಮ್ಮಾಯಿ