Site icon Vistara News

Karnataka Elections 2023 : ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಚರ್ಚೆ; ಡಿ.ಕೆ ಶಿವಕುಮಾರ್‌ರನ್ನು 2ನೇ ಸಾಲಿಗೆ ತಳ್ಳಿದ ಎಂ.ಬಿ ಪಾಟೀಲ್‌!

MB patil

#image_title

ಬೆಂಗಳೂರು: ವಿಧಾನಸಭಾ ಚುನಾವಣೆ ರಂಗೇರುತ್ತಿದ್ದಂತೆಯೇ (Karnataka Elections 2023) ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ತನ್ನ ನಡುವೆ ಇದ್ದ ಸಿಎಂ ಗಾದಿ ಸಮರವನ್ನು ಡಿ.ಕೆ ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಳೆದು ತಂದು ತ್ರಿಕೋನ ಕಣವಾಗಿಸಿದ್ದರು. ಇದೀಗ ಈ ಚರ್ಚೆಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ. ಜತೆಗೆ ಡಿ.ಕೆ.ಶಿವಕುಮಾರ್‌ ಅವರು ಎರಡನೇ ಸಾಲಿನಲ್ಲಷ್ಟೇ ಈ ಅವಕಾಶಕ್ಕೆ ಅರ್ಹರು ಎಂಬ ವಾದವನ್ನು ಹರಿಯಬಿಡಲಾಗಿದೆ.

ಮುಂದಿನ ಸಿಎಂ ಅಭ್ಯರ್ಥಿ ವಿಚಾರವನ್ನ ಮತ್ತೆ ಚರ್ಚೆಗೆ ಎಳೆದು ತಂದವರು ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿರುವ ಎಂ.ಬಿ ಪಾಟೀಲ್ ಅವರು!

ಕಳೆದ ವಾರ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಹುದ್ದೆಯ ಸ್ಪರ್ಧಾ ಕಣಕ್ಕೆ ಎಳೆದುತಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ಸಿಎಂ ಆಗಬೇಕು ಅಂದುಕೊಂಡ್ರೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದರು ಡಿ.ಕೆ. ಶಿವಕುಮಾರ್.‌ ಈ ಮೂಲಕ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಸಿದ್ದರಾಮಯ್ಯ ಅವರಿಗೆ ಠಕ್ಕರ್‌ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿತ್ತು. ಒಂದೊಮ್ಮೆ ತಮ್ಮ ನಡುವೆ ಸ್ಪರ್ಧೆ ತೀವ್ರಗೊಂಡರೆ ಮಲ್ಲಿಕಾರ್ಜುನ ಪಾಲಾಗಬಹುದು ಎನ್ನುವ ಸೂಚನೆ ಒಂದಾದರೆ, ಸ್ಪರ್ಧೆ ವಿಚಾರ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪರವಾಗಿ ಎಳೆದುಕೊಳ್ಳುವ ತಂತ್ರವೂ ಇದಾಗಿರಬಹುದು ಎಂದು ಹೇಳಲಾಗಿತ್ತು.

ಎಂ.ಬಿ. ಪಾಟೀಲ್‌ ಹೇಳಿದ್ದೇನು?

ಈ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ್‌ ಅವರು ಈ ಚರ್ಚೆಗೆ ಇನ್ನಷ್ಟು ಜನರನ್ನು ಎಳೆದು ತಂದು ಶಿವಕುಮಾರ್‌ ಅವರನ್ನು ಪ್ರಧಾನ ಕಣದಿಂದ ಹೊರದಬ್ಬಿ ಎರಡನೇ ಸಾಲಿಗೆ ತಳ್ಳಿದ್ದಾರೆ! ಡಿಕೆ ಶಿವಕುಮಾರ್ ಹೇಳಿಕೆಯನ್ನ ಸಮರ್ಥಿಸುತ್ತಲೇ ಅವರನ್ನೇ ಎರಡನೇ ಸಾಲಿಗೆ ತಳ್ಳಿದ್ದು ವಿಶೇಷವಾಗಿದೆ.

ಡಿ.ಕೆ. ಶಿವಕುಮಾರ್‌ ಹೇಳಿದ್ದು ಸರಿಯಾಗಿದೆ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ನಾವು ಖಂಡಿತವಾಗಿ ಅವರಿಗೆ ಸಿಎಂ ಗಾದಿ ಬಿಟ್ಟುಕೊಡಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಸಿಎಂ ಗಾದಿ ವಿಚಾರ ಬಂದರೆ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯ, ಆರ್‌.ವಿ ದೇಶಪಾಂಡೆ ಇರುತ್ತಾರೆ. ಎರಡನೇ ಸಾಲಿನಲ್ಲಿ ನಾನು, ಡಿ.ಕೆ ಶಿವಕುಮಾರ್, ಜಿ. ಪರಮೇಶ್ವರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್‌, ರಾಮಲಿಂಗ ರೆಡ್ಡಿ ಇದ್ದೇವೆ. ಎಲ್ಲರೂ ಖರ್ಗೆ ಅವರಿಗೆ ಸೀಟು ಬಿಟ್ಟುಕೊಡುವುದಕ್ಕೆ ಪರವಾಗಿದ್ದೇವೆ ಎಂದಿದ್ದರು ಎಂ.ಬಿ ಪಾಟೀಲ್.

ಈ ಹೇಳಿಕೆಯ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದರೆ ಸಿದ್ದರಾಮಯ್ಯ ಸಿಎಂ ಆಗುವ ರೇಸಿನಲ್ಲಿ ಮೊದಲ ಅಭ್ಯರ್ಥಿ ಎನ್ನುವುದನ್ನು ಅವರ ಆತ್ಮೀಯ ಬಳಗದಲ್ಲಿರುವ ಎಂ.ಬಿ. ಪಾಟೀಲ್‌ ಪರೋಕ್ಷವಾಗಿ ಹೇಳಿದಂತಾಗಿದೆ.

ಹೌದು ಎಂದು ಒಪ್ಪಿಕೊಂಡ ಡಿ.ಕೆ. ಶಿವಕುಮಾರ್

ಡಿ.ಕೆ‌ ಶಿವಕುಮಾರ್‌, ನಾವೆಲ್ಲಾ ಎರಡನೇ ಹಂತದ ನಾಯಕರು ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ʻʻನಾನು ಮೊದಲ, ಎರಡನೇ ಹಂತದಲ್ಲಿ ಇರುವ ನಾಯಕನೂ ಅಲ್ಲ. ನಾನೊಬ್ಬ ಪಕ್ಷದ ಕಾರ್ಯಕರ್ತ, ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಅದು ನನ್ನ ಜವಾಬ್ದಾರಿʼʼ ಎಂದಿದ್ದಾರೆ. ಈ ಮೂಲಕ ಎಂ.ಬಿ. ಪಾಟೀಲ್‌ ಹೇಳಿಕೆಗೆ ಠಕ್ಕರ್‌ ನೀಡಿದ್ದಾರೆ.

ಇದನ್ನೂ ಓದಿ : Karnataka Election 2023: 3ನೇ ಪಟ್ಟಿಯಲ್ಲೂ ಇಲ್ಲ ಶಿಗ್ಗಾಂವಿ ಅಭ್ಯರ್ಥಿ; ಸಿಎಂ ಕಟ್ಟಿಹಾಕಲು ಕಾಂಗ್ರೆಸ್‌ ಮಾಸ್ಟರ್‌ಪ್ಲ್ಯಾನ್‌ ಏನು?

Exit mobile version