ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಾರೆ (Karnataka Elections) ಎಂದು ಈಗಲೇ ಘೋಷಿಸಿ ಎಂದು ಪಟ್ಟುಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಿದ ಘಟನೆ ಶನಿವಾರ ನಡೆದಿದೆ. ಈ ನಡುವೆ, ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನು ಸಮಾಧಾನ ಮಾಡಿದರು. ಜತೆಗೆ ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧೆ ಖಚಿತ ಎಂದು ಭರವಸೆ ನೀಡಿದರು.
ಕೋಲಾರದಲ್ಲಿ ಏಪ್ರಿಲ್ 9ರಂದು ನಡೆಯಲಿರುವ ರಾಹುಲ್ ಗಾಂಧಿ ಅವರ ಸತ್ಯಮೇವ ಜಯತೆ ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದ ಸಭೆಗಾಗಿ ಸುರ್ಜೇವಾಲ ಅವರು ಆಗಮಿಸಿದ್ದರು. ನಾನಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಭೆಯಲ್ಲಿದ್ದರು. ಈ ವೇಳೆ ಸುರ್ಜೇವಾಲ ಅವರು ಮಾತನಾಡಲು ಆರಂಭ ಮಾಡುತ್ತಿದ್ದಂತೆಯೇ ಕೈ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿ, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಎಂದು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು. ಮೊದಲು ಘೋಷಣೆ ಮಾಡಿ ಆಮೇಲೆ ಮಾತನಾಡಿ ಎಂದು ಹೇಳಿದರು.
ಶಾಸಕ ನಾರಾಯಣಸ್ವಾಮಿ ಅವರ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರು ತಣ್ಣಗಾಗದೆ ಇದ್ದಾಗ ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ʻʻʻಸುರ್ಜೇವಾಲ ಎಐಸಿಸಿ ಜನರಲ್ ಸೆಕ್ರೆಟರಿ ಇದ್ದಾರೆ. ಅವರು ಮಾತನಾಡಲು ನಾವು ಬಿಡಬೇಕು. ಅವರು ಮಾತನಾಡಲಿ, ನಾನೇ ತೀರ್ಮಾನ ಮಾಡಿಲ್ಲʼʼ ಎಂದು ಗದರಿದರು. ಸಿದ್ದು ಮಾತಿಗೆ ಕಾರ್ಯಕರ್ತರು ತಣ್ಣಗಾದರು.
ನಿಜವೆಂದರೆ ಶಾಸಕ ನಾರಾಯಣ ಸ್ವಾಮಿ ಅವರು ಕೂಡಾ ಒಂದು ಹಂತದಲ್ಲಿ ತುಂಬಾ ಉದ್ಧಟತನ ಮಾಡಿದಂತೆ ಕಂಡುಬಂತು. ʻʻಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಮಾತಾಡಿʼʼ ಎಂದು ಹಚ್ಚಿ ಕೊಟ್ಟಿದ್ದೇ ಶಾಸಕ ನಾರಾಯಣ ಸ್ವಾಮಿ ಎನ್ನಲಾಗಿದೆ. ಭಾಷಣ ಮುಗಿದ ಮೇಲೆ ಕೈ ಹಿಡಿದು ಎಳೆದು ಸ್ಪರ್ಧೆ ಬಗ್ಗೆ ಹೇಳಿ ಎಂದು ಹೇಳಿದ ನಾರಾಯಣಸ್ವಾಮಿ ವರ್ತನೆಗೆ ಸುರ್ಜೇವಾಲ ಗರಂ ಆದರು.
ನಾನು ರೆಡಿ ಎಂದ ಸಿದ್ದರಾಮಯ್ಯ
ಬಳಿಕ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ʻʻನಾನು ಮಾನಸಿಕವಾಗಿ ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಹಾಗೇ ಮಾಡ್ತೇನೆʼʼ ಎಂದರು.
ʻʻನಾನು ಎರಡು ಕಡೆ ನಿಲ್ಲುತ್ತೇನೆ. ವರುಣ ನನ್ನ ನೇಟಿವ್ ಪ್ಲೇಸ್. ಕೊನೆಯ ಚುನಾವಣೆ ಆಗಿರುವುದರಿಂದ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಎರಡು ಕಡೆ ಅವಕಾಶ ಕೊಟ್ರೆ ನಿಲ್ಲುತ್ತೇನೆʼʼ ಎಂದು ಹೇಳಿದ ಅವರು ಸುಮಾರು 25 ಕಡೆಯಿಂದ ಬೇಡಿಕೆ ಇದೆ ಎಂದರು.
ಸಿದ್ದರಾಮಯ್ಯ ಅವರು ಈಗಾಗಲೇ ವರುಣದಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ಕೊಟ್ಟಿದೆ. ಅದರೆ, ಕೋಲಾರದಲ್ಲಿರುವ ಒತ್ತಡ ಮತ್ತು ಸಿದ್ದರಾಮಯ್ಯ ಅವರ ಆಸೆಯಂತೆ ಪಕ್ಷ ಎರಡನೇ ಪಟ್ಟಿಯಲ್ಲಿ ಎರಡನೇ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರು ಎರಡನೇ ಕ್ಷೇತ್ರದ ಸ್ಪರ್ಧೆ ಬಗ್ಗೆಯೂ ಈಗಾಗಲೇ ಮಾತನಾಡಿದ್ದಾರೆ. ವರುಣದಲ್ಲಿನ ಪ್ರಚಾರದ ಸಂಪೂರ್ಣ ಹೊಣೆಯನ್ನು ಈಗಾಗಲೇ ಪುತ್ರ ಯತೀಂದ್ರ ಅವರಿಗೆ ವಹಿಸಿದ್ದಾರೆ.
ಇದನ್ನೂ ಓದಿ : Karnataka Election 2023: ವರುಣದಲ್ಲಿ ಯತೀಂದ್ರ ಆ್ಯಕ್ಟಿವ್; ಹೋಬಳಿ ಮಟ್ಟದಲ್ಲಿ ರಣತಂತ್ರ, ಸಿಕ್ಕಿದೆ ಲಿಂಗಾಯತರ ಬೆಂಬಲ