Site icon Vistara News

Karnataka Elections: ಕಾಂಗ್ರೆಸ್‌ 2ನೇ ಪಟ್ಟಿಗೆ ಸಿದ್ದು, ಡಿಕೆಶಿ ನಡುವೆ ಮೂಡದ ಒಮ್ಮತ, 30 ಕ್ಷೇತ್ರಗಳಿಗೆ ಸಿಂಗಲ್‌ ಹೆಸರು

Kharge DKS

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಫೈನಲ್‌ ಮಾಡುವಲ್ಲಿ ಕಾಂಗ್ರೆಸ್‌ ಉಳಿದೆರಡು ಪಕ್ಷಗಳಿಗಿಂತ ಮುಂದಿದೆ. 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಬೀಗಿದ್ದ ಪಕ್ಷಕ್ಕೀಗ ಉಳಿದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಷ್ಟವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎರಡನೇ ಪಟ್ಟಿ ಅಂತಿಮ ಮಾಡುವಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ನಡುವೆ ಒಮ್ಮತ ಮೂಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಒಬ್ಬರೇ ಆಕಾಂಕ್ಷಿಗಳಿರುವ ಕ್ಷೇತ್ರಗಳನ್ನು ಫೈನಲ್‌ ಮಾಡಲಾಗಿತ್ತು. ಈಗ ಬಾಕಿ ಇರುವ 100 ಕ್ಷೇತ್ರಗಳಲ್ಲಿ ಹೆಚ್ಚಿನೆಡೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಗಳಿದ್ದಾರೆ. ಅಥವಾ ಅಂತಿಮಗೊಳಿಸುವಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಹಿತಾಸಕ್ತಿಗಳು ಅಡ್ಡಿಯಾಗಿವೆ ಎನ್ನಲಾಗಿದೆ. ಅಷ್ಟಾದರೂ ಸುಮಾರು 30 ಕ್ಷೇತ್ರಗಳಿಗೆ ಒಂದೇ ಹೆಸರು ಫೈನಲ್‌ ಮಾಡುವಲ್ಲಿ ಕಾಂಗ್ರೆಸ್‌ ಸಫಲವಾಗಿದೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಕಳೆದ ಎರಡು ದಿನಗಳಿಂದ ಬೆಳಗ್ಗಿನಿಂದ ಮಧ್ಯರಾತ್ರಿವರೆಗೂ ಸಭೆ ಮಾಡಿದ್ದಾರೆ. ಇಬ್ಬರು ನಾಯಕರನ್ನು ಸೇರಿಸಿ ಮಾತುಕತೆ ನಡೆಸಿದ್ದಾರೆ. ಆದರೆ, ಕೆಲವು ಕ್ಷೇತ್ರಗಳನ್ನು ಫೈನಲ್‌ ಮಾಡಲು ಅವರಿಂದ ಸಾಧ್ಯವಾಗಿಲ್ಲ.

100 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ. ಕೆಲವು ಕಡೆ ಇಬ್ಬರ ಹೆಸರಿದ್ದರೆ ಇನ್ನು ಕೆಲವು ಕಡೆ ಮೂವರ ಹೆಸರಿದೆ. ಎರಡಕ್ಕಿಂತ ಹೆಚ್ಚು ಹೆಸರಿರುವ ಕ್ಷೇತ್ರಗಳ ಟಿಕೆಟ್‌ ಫೈನಲ್‌ ಹೊಣೆಯನ್ನು ಹೈಕಮಾಂಡ್‌ಗೆ ವಹಿಸೋಣ ಎಂಬ ನಿರ್ಧಾರಕ್ಕೆ ರಣದೀಪ್‌ ಸುರ್ಜೇವಾಲ ಬಂದಿದ್ದಾರೆ ಎನ್ನಲಾಗಿದೆ.

ಮುಂದಿನ ವಾರದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಅಲ್ಲಿ ಚರ್ಚೆ ಮಾಡಿ ಎರಡನೇ ಪಟ್ಟಿ ಫೈನಲ್‌ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಎರಡನೇ ಪಟ್ಟಿ ಫೈನಲ್ ಗೆ ಹೈಕಮಾಂಡ್ ಎಂಟ್ರಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಖರ್ಗೆ ಜತೆ ಡಿಕೆ ಶಿವಕುಮಾರ್‌ ಮಾತುಕತೆ

ಈ ನಡುವೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದರು. ಟಿಕೆಟ್‌ ಬಗ್ಗೆಯೇ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಚರ್ಚೆಯ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ದಿಲ್ಲಿಗೆ ತೆರಳಿದರು.

ಇದನ್ನೂ ಓದಿ : Satyameva Jayate : ಏ. 9ರಂದು ಸತ್ಯಮೇವ ಜಯತೇ ಹೋರಾಟಕ್ಕೆ ಕೋಲಾರದಲ್ಲಿ ರಾಹುಲ್‌ ಗಾಂಧಿ ಚಾಲನೆ

Exit mobile version