Site icon Vistara News

Karnataka Elections : ವರುಣ, ಕನಕಪುರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಆದ ನಂತರ ಕಾಂಗ್ರೆಸ್‌ಗೆ ನಡುಕ: ನಳಿನ್‌

Nalin kumar kateel

#image_title

ಬೆಂಗಳೂರು: ವರುಣ ಮತ್ತು ಕನಕಪುರದಲ್ಲಿ ಬಿಜೆಪಿ ಟಿಕೆಟ್‌ ಘೋಷಣೆಯಾದ ಬಳಿಕ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ ಕುಮಾರ್ ಕಟೀಲ್ ಅವರು ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಶನಿವಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠ ಅಭ್ಯರ್ಥಿಗಳನ್ನು ಹಾಕಿದ್ದರಿಂದ ನಾಯಕರು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಹೋಗಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಈಗ ರಾಜ್ಯದ ಬಿಟ್ಟು ತಮ್ಮ ಕ್ಷೇತ್ರದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಸ್ಪರ್ಧಿಸುವ ಕನಕಪುರಕ್ಕೆ ಸಚಿವ ಆರ್‌ ಅಶೋಕ್‌ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣಕ್ಕೆ ವಿ. ಸೋಮಣ್ಣ ಅವರನ್ನು ಅಭ್ಯರ್ಥಿಯಾಗಿ ನಿಯೋಜಿಸಿದೆ.

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಗಜ ಪ್ರಸವ!

ಕಾಂಗ್ರೆಸ್ ಪಕ್ಷ ಡಿಸೆಂಬರ್ ತಿಂಗಳಿನಿಂದ ಅಭ್ಯರ್ಥಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದು, ಕಷ್ಟದಿಂದ ಇವತ್ತು ಕೆಲವು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷದ್ದು 2 ಬಾರಿ ಗಜಪ್ರಸವ ಆಗಿದೆ ಎಂದು ನಳಿನ್‌ ಗೇಲಿ ಮಾಡಿದರು.

ನಮ್ಮದು ಕಾರ್ಯಕರ್ತರನ್ನು ಆಧರಿಸಿದ ಪಕ್ಷ

ʻʻಬಿಜೆಪಿ ಕಾರ್ಯಕರ್ತರ ಆಧರಿತ ಪಾರ್ಟಿ. ಪ್ರಜಾಪ್ರಭುತ್ವದ ಆಧಾರದಲ್ಲಿ ನಮ್ಮ ಸಂಘಟನೆ ಮಾಡುತ್ತಿದ್ದೇವೆ. ಹಾಗಾಗಿ ಬಿಜೆಪಿಯಲ್ಲಿ 3 ವರ್ಷಕ್ಕೆ ಒಮ್ಮೆ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ಆಯ್ಕೆ, ಕಾರ್ಯಕರ್ತರಿಗೆ ಗೌರವ ನೀಡುತ್ತಿದ್ದೇವೆ.
31ರಂದು ಚುನಾವಣಾ ಪ್ರಕ್ರಿಯೆ ನಡೆದಿದೆ. ಶಕ್ತಿಕೇಂದ್ರ ಬೂತ್ ಪ್ರಮುಖರ ಜೊತೆ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. 10 ದಿನಗಳ ಪ್ರಕ್ರಿಯೆಯಲ್ಲಿ 212 ಅಭ್ಯರ್ಥಿಗಳ ಘೋಷಣೆ ಆಗಿದೆ. ಮತಗಟ್ಟೆ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಅಭಿಪ್ರಾಯ ಸಂಗ್ರಹದ ಮೂಲಕ ಅಭ್ಯರ್ಥಿಗಳನ್ನು ಪ್ರಕಟಿಸಿದ್ದೇವೆʼʼ ಎಂದು ತಿಳಿಸಿದರು.

ಬಿಜೆಪಿ ಈ ಬಾರಿ ಸುಮಾರು 60 ಹೊಸ ಮುಖಗಳಿಗೆ ಅವಕಾಶ ನೀಡಿದೆ. ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳ ಪಟ್ಟಿ ಇದಾಗಿದೆ. ಪಕ್ಷಕ್ಕಾಗಿ ದುಡಿದವರು, ರಾಷ್ಟ್ರ ವಿಚಾರಧಾರೆಯಲ್ಲಿ ಗುರುತಿಸಿಕೊಂಡ ಸಾಮಾನ್ಯರಲ್ಲಿ ಸಾಮಾನ್ಯರನ್ನೂ ಗುರುತಿಸಿದ್ದೇವೆ. ಕಡು ಬಡತನದ ಹಿನ್ನೆಲೆ ಇರುವ ಭಾಗೀರಥಿ ಮುರುಳ್ಯ, ಪಕ್ಷದ ಹಿನ್ನೆಲೆಯ ಸಮರ್ಪಣಾ ಮನೋಭಾವದ ಗುರುರಾಜ್, ಈಶ್ವರ ಸಿಂಗ್ ಠಾಕೂರ್ ಅವರಂಥ ಕಾರ್ಯಕರ್ತರಿಗೂ ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ಯುವಕರ ತಂಡ, ವಿದ್ಯಾವಂತರ ತಂಡ, ಸಾಮಾಜಿಕ ಕಾರ್ಯಕರ್ತರ ತಂಡ ನಮ್ಮದು. 9 ವೈದ್ಯರು, 52 ಜನ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವವರು, ಮಹಿಳೆಯರು ಸೇರಿ ಮುಂದಿನ ಕರ್ನಾಟಕದ ಅಭಿವೃದ್ಧಿ ಸಾಕಾರಕ್ಕಾಗಿ ಹೊಸ ತಂಡ ಸಿದ್ಧವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಮೋದಿ ಪರ ಅಲೆ

ಬಿಜೆಪಿ, ಮೋದಿಜಿ ಪರ ಅಲೆ ಕರ್ನಾಟಕದಲ್ಲಿದೆ. ದೇಶದ ಮೋದಿ ನೇತೃತ್ವದ ಸರಕಾರದ ಅಭಿವೃದ್ಧಿ ಕಾರ್ಯ, ಪರಿಶ್ರಮವನ್ನು ಕರ್ನಾಟಕದ ಜನ ಒಪ್ಪಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿಯವರ ಕಾರ್ಯಶೈಲಿ ಡಬಲ್ ಎಂಜಿನ್ ಸರಕಾರದ ಕಾರ್ಯಶೈಲಿಯನ್ನು ಜನತೆ ಮೆಚ್ಚಿದ್ದಾರೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

34 ಜನ ಹಿಂದುಳಿದ ವರ್ಗದವರು, 34 ಜನ ಪರಿಶಿಷ್ಟ ಜಾತಿಯವರು, 17 ಜನ ಪರಿಶಿಷ್ಟ ಪಂಗಡದವರು, 126 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದರು.

ಬೇರೆ ಪಕ್ಷದವರಿಗಾಗಿ ಕಾಯುತ್ತಿರುವ ಜೆಡಿಎಸ್‌ ಕಾಂಗ್ರೆಸ್‌

ಕಾಂಗ್ರೆಸ್‍ನ ಸ್ಥಿತಿ ಚಿಂತಾಜನಕ, ಕಷ್ಟದಾಯಕವಾಗಿದೆ. ಬೇರೆ ಪಕ್ಷದಿಂದ ಬಂದವರಿಗಾಗಿ ಕಾಯುವ ಸ್ಥಿತಿ ಇತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಖರ್ಗೆ ತಂಡಕ್ಕೆ ಸೀಟು ಹಂಚಬೇಕಾದ ದುಸ್ಥಿತಿ ಇತ್ತು. ಕಾಂಗ್ರೆಸ್ಸಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಜೆಡಿಎಸ್ ಹಾಸನ ಪೈಪೋಟಿಯ ಬಳಿಕ ಕೊನೆಗೂ ಅಭ್ಯರ್ಥಿ ಘೋಷಣೆ ಆಗಿದೆ ಎಂದರು.

ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ಕಾಂಗ್ರೆಸ್‍ಗೆ ಭಯ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಜಗಳ ಮುಂದಿನ ದಿನಗಳಲ್ಲಿ ಬೀದಿಕಾಳಗವಾಗಲಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರಿಗೆ ಸೋಲುವ ಆತಂಕ ಹೆಚ್ಚಾಗಿದೆ ಎಂದು ತಿಳಿಸಿದರು.

ಟಿಕೆಟ್ ಸಿಗದವರ ಆಕ್ರೋಶ ಸಹಜ. ಅವರನ್ನು ಬಿಜೆಪಿಗೆ ಜೋಡಿಸುವ ಶಕ್ತಿ ನಮಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷ ಬಿಟ್ಟ ಲಕ್ಷ್ಮಣ ಸವದಿ ಯಾವ ಸ್ಥಿತಿಗೆ ತಲುಪುತ್ತಾರೆ ಎಂದು ಕಾದುನೋಡಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಜಗದೀಶ ಶೆಟ್ಟರ್ ಅವರ ಜೊತೆ ಪ್ರಲ್ಹಾದ ಜೋಷಿಯವರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ : Karnataka Election 2023: ಹಾಲಾಡಿ ಶ್ರೀನಿವಾಸ ಶೆಟ್ಟಿ ಆಶೀರ್ವಾದ ಪಡೆದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ

Exit mobile version