ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಕಾಂಗ್ರೆಸ್ ಬಿಡುಗಡೆ ಮಾಡಿದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಚಿತ್ರದುರ್ಗ, ಕಲಘಟಗಿ, ಕಡೂರು, ಕಿತ್ತೂರು, ಸವದತ್ತಿ, ಗೋಕಾಕ್, ಗಂಗಾವತಿ ಸೇರಿದಂತೆ ಸುಮಾರು 10 ಕಡೆಗಳಲ್ಲಿ ಬಂಡಾಯ ಮತ್ತು ಒಳಪೆಟ್ಟಿನ ಆತಂಕ ಎದುರಾಗಿದೆ.
124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಬಂಡಾಯದ ಛಾಯೆ ಕಾಣಿಸಿರಲಿಲ್ಲ. ಆದರೆ, ಕೇವಲ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಭಾರಿ ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆ ಕಾಣಿಸುತ್ತಿದೆ.
ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ನಿರೀಕ್ಷಿಸಿದ್ದ ಹಲವರು ತಮ್ಮ ಹೆಸರು ಘೋಷಣೆಯಾಗದೆ ಬೇರೆಯವರಿಗೆ ಟಿಕೆಟ್ ಸಿಕ್ಕಿದ್ದರಿಂದ ಕೊತಕೊತ ಕುದಿಯುತ್ತಿದ್ದಾರೆ. ಕೆಲವು ಕಡೆ ನೇರವಾಗಿ ಬಂಡಾಯದ ಬಾವುಟ ಹಾರಿಸಿದ್ದರೆ ಇನ್ನು ಕೆಲವು ಕಡೆ ಸೈಲೆಂಟ್ ಆಗಿ ಪಾಠ ಕಲಿಸಲು ಮುಂದಾಗಿದ್ದಾರೆ. ಕೆಲವರು ಬೇರೆ ಪಕ್ಷದ ಬಾಗಿಲು ಬಡಿಯಲು ಮುಂದಾಗಿದ್ದಾರೆ. ಇದೆಲ್ಲವನ್ನು ಅರಿತೇ ಕಾಂಗ್ರೆಸ್ ನಾಯಕರು ಹಂತಹಂತವಾಗಿ ಟಿಕೆಟ್ ಘೋಷಣೆ ಮಾಡುತ್ತಿದ್ದಾರೆ. ಕೊನೆಯ ಹಂತ ನಾಮಪತ್ರ ಸಲ್ಲಿಕೆಯ ಆಸುಪಾಸು ನಡೆಯುವ ಸಾಧ್ಯತೆ ಇದೆ. ಯಾಕೆಂದರೆ ಒಂದೊಮ್ಮೆ ಟಿಕೆಟ್ ಸಿಗದೆ ಹೋದರೂ ಬೇರೆ ಪಕ್ಷದಿಂದಲೂ ಸ್ಪರ್ಧಿಸಲು ಅವಕಾಶ ಸಿಗಬಾರದು ಎಂಬ ಕಾರಣಕ್ಕೆ.
ದೊಡ್ಡ ಹೊಡೆತಗಳು ಎಲ್ಲೆಲ್ಲಿ?
ಕಾಂಗ್ರೆಸ್‌ಗೆ ಎರಡನೇ ಪಟ್ಟಿಯಲ್ಲಿ ಅತಿ ದೊಡ್ಡ ಹೊಡೆತ ಬಿದ್ದಿರುವುದು ಕಡೂರು, ಚಿತ್ರದುರ್ಗ ಮತ್ತು ಹಾನಗಲ್‌ನಲ್ಲಿ. ಕಡೂರಿನಲ್ಲಿ ಜೆಡಿಎಸ್‌ನಿಂದ ಬಂದಿದ್ದ ವೈಎಸ್‌ವಿ ದತ್ತ ಅವರು ಟಿಕೆಟ್ ವಂಚಿತರಾಗಿದ್ದು ಅವರ ಅಭಿಮಾನಿಗಳು ಬುಸುಗುಡುತ್ತಿದ್ದಾರೆ. ದತ್ತ ಅವರು ಭಾನುವಾರ ಸಭೆಯೊಂದನ್ನು ನಡೆಸಿ ಯಾವ ಪಕ್ಷದಿಂದ ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ತೀರ್ಮಾನ ಮಾಡಲಿದ್ದಾರೆ.
ಚಿತ್ರದುರ್ಗದಲ್ಲಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನೀಡಿರುವುದರಿಂದ ತೀವ್ರ ಆಕಾಂಕ್ಷಿಯಾಗಿದ್ದ ರಘು ಆಚಾರ್ ಕೆರಳಿ ಕೆಂಡವಾಗಿದ್ದಾರೆ. ಅವರು ಈಗಾಗಲೇ ಜೆಡಿಎಸ್ ಸೇರುವ ಮಾತುಕತೆ ನಡೆದಿದ್ದು, ಏಪ್ರಿಲ್ 14ರಂದು ನಡೆಯುವ ಸಮಾವೇಶದಲ್ಲಿ ತೆನೆ ಹೊರಲಿದ್ದಾರೆ. ಏಪ್ರಿಲ್ 17ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿದ್ದ, ಮುರುಘಾ ಮಠ ಪ್ರಕರಣದ ಆರೋಪಿ ಎಸ್.ಕೆ. ಬಸವರಾಜನ್ ಕೂಡಾ ಬಂಡಾಯ ಸಾರಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ಸಿಕ್ಕಿದೆ. ತನಗೇ ಟಿಕೆಟ್ ಕೊಡಬೇಕು ಎಂದು ಹಠ ಹಿಡಿದಿದ್ದ ಮನೋಹರ ತಹಸೀಲ್ದಾರ್ ಅವರು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಶಕ್ತಿ ಪ್ರದರ್ಶನ ನಡೆಸಿದ ಸವದತ್ತಿಯ ಸೌರಭ್ ಚೋಪ್ರಾ
ಸವದತ್ತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಸೌರಬ್ ಛೋಪ್ರಾ ಅವರು ಪ್ರತಿಭಟನೆ ನೆಪದಲ್ಲಿ ಬೆಂಬಲಿಗರ ಶಕ್ತಿ ಪ್ರದರ್ಶನ ನಡೆಸಿದರು. ಸೌರಬ್ ಬದಲು ವಿಶ್ವಾಸ ವೈದ್ಯಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಸವದತ್ತಿಯ ಎಪಿಎಂಸಿಯಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ‍್ಯಾಲಿ ನಡಸಿದ ಬೆಂಬಲಿಗರು ಟಯರ್ ಸುಟ್ಟು ಪ್ರತಿಭಟಿಸಿದರು. ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಬೆಂಬಲಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಭಿಮಾನಿಗಳು ಸೌರಭ್ ಅವರನ್ನು ಹೆಗಲ ಮೇಲೆ ಹೊತ್ತು ಸೌರಬ್‌ನನ್ನು ಸಭಾ ವೇದಿಕೆಗೆ ಕರೆ ತಂದಿದ್ದು ವಿಶೇಷವಾಗಿತ್ತು. ಸೌರಬ್ ಛೋಪ್ರಾ ಅವರು ತಂದೆಯ ಭಾವಚಿತ್ರ ಹಿಡಿದು ವೇದಿಕೆ ಕಡೆಗೆ ಬಂದರು. ಜತೆಗೆ ಸಭೆಗೂ ಮುನ್ನ ಬೆಂಬಲಿಗರ ಸಮ್ಮುಖದಲ್ಲಿ ತಾಯಿ ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಭಾವುಕ ದೃಶ್ಯಕ್ಕೆ ಮರುಗಿದ ಅಭಿಮಾನಿಗಳು ತಾಯಿ-ಮಗನನ್ನು ಸಂತೈಸಿದರು.
ಇನ್ನೂ ಹಲವು ಕಡೆ ಬಂಡಾಯ
ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಆರ್.ಎಚ್. ಶ್ರೀನಾಥ್ ಅವರು ಬಂಡಾಯವೆದ್ದಿದ್ದರೆ, ಕಿತ್ತೂರು ಕ್ಷೇತ್ರದಲ್ಲಿ ಡಿ.ಬಿ. ಇನಾಂದಾರ್ ಅವರಿಗೆ ಟಿಕೆಟ್ ನೀಡದೆ ಇರುವುದನ್ನು ಪ್ರತಿಭಟಿಸಿ ಇಡೀ ಕುಟುಂಬವೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ.
ಇದನ್ನೂ ಓದಿ : Karnataka Elections : ಕೈ ತಪ್ಪಿದ ಟಿಕೆಟ್; ಮುಂದಿನ ತೀರ್ಮಾನಕ್ಕೆ ವೈಎಸ್‌ವಿ ದತ್ತ ನಾಳೆ ಸಭೆ; ಜೆಡಿಎಸ್ ಮರು ಸೇರ್ಪಡೆ ಡೌಟ್