ಕೊಪ್ಪಳ: ಗಂಗಾವತಿಯ ಕ್ಷೇತ್ರದಲ್ಲಿ ಹಿಂದುಗಳಿಗೆ ಅತ್ಯಂತ ಪವಿತ್ರವಾದ ಅಂಜನಾದ್ರಿ ಬೆಟ್ಟವಿದೆ. ಅದನ್ನು ಅಭಿವೃದ್ಧಿಪಡಿಸುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಪಕ್ಷ ಹಿಂದುಗಳಿಗೆ ಟಿಕೆಟ್ ಕೊಡಬೇಕಿತ್ತು: ಹೀಗೊಂದು ವಾದವನ್ನು ಮಂಡಿಸಿದ್ದಾರೆ ಗಂಗಾವತಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ್.
ಅವರು ಇಲ್ಲಿ ಧಾರ್ಮಿಕ ವಿಚಾರಗಳನ್ನು ಎತ್ತಿದ್ದು ಯಾಕೆಂದರೆ ಕಾಂಗ್ರೆಸ್ ಇಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಿದೆ. ಅದನ್ನು ಖಂಡಿಸುವ ವೇಳೆ ಅವರು ಹಿಂದು ಮುಸ್ಲಿಂ ಅಂಶವನ್ನು ಪ್ರಸ್ತಾಪಿಸಿ ಅಂಜನಾದ್ರಿಗೆ ಕನೆಕ್ಟ್ ಮಾಡಿದ್ದಾರೆ!
ಶುಕ್ರವಾರ ಮಾತನಾಡಿದ ಅವರು, ʻʻಈಗಲೂ ಸಹ ಇಕ್ಬಾಲ್ ಅನ್ಸಾರಿ ಅವರ ಬದಲು ಯಾರಾದರೂ ಹಿಂದುಗಳಿಗೆ ಟಿಕೆಟ್ ನೀಡಲಿʼʼ ಎಂದು ಹೇಳಿದರು.
ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಹೆಚ್.ಆರ್. ಶ್ರೀನಾಥ ಅವರು, ʻʻಬಿಜೆಪಿಯವರು ಅಂಜನಾದ್ರಿ ಅಭಿವೃದ್ಧಿ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಹಿಂದುಗಳ ಕ್ಷೇತ್ರವಾಗಿದೆ. ಇಲ್ಲಿ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಿದ್ದರಿಂದ ಹಿಂದುಗಳ ವೋಟು ಬರಲಿಕ್ಕಿಲ್ಲ. ಈ ಹಿಂದೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಒಡೆದಿರುವುದು ಸೇರಿ ವಿವಿಧ ಕಾರಣಕ್ಕೆ ಇಕ್ಬಾಲ್ ಅನ್ಸಾರಿಗೆ ವಿರೋಧವಿದೆʼʼ ಎಂದು ನೆನಪಿಸಿದರು.
ʻʻಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಕೊಡಿಸಿದ್ದಾರೆ. 1991ರಲ್ಲಿ ಅವರು ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದಾಗ ನಾವೆಲ್ಲ ಕೆಲಸ ಮಾಡಿದ್ದೇವೆ. ನಾನೇ ಮುಂದಾಗಿ ನಿಂತು ಹಿಂದುಳಿದವರ ಮತಗಳನ್ನು ಹಾಕಿಸಿದ್ದೆ. ಈಗ ಯಾವ ಕಾರಣಕ್ಕೆ ಟಿಕೆಟ್ ತಪ್ಪಿಸಿದರೋ ಗೊತ್ತಿಲ್ಲ. ಈ ಎಲ್ಲದಕ್ಕೂ ಕಾರಣ ಸಿದ್ದರಾಮಯ್ಯ. ನಾನು ಏಪ್ರಿಲ್ 19ರವರೆಗೂ ಕಾಯುತ್ತೇನೆ. ಇಷ್ಟರಲ್ಲಿಯೇ ಬೆಂಬಲಿಗರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇನೆʼʼ ಎಂದಿದ್ದಾರೆ.
ʻʻನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಗಂಗಾವತಿ ಹೊರತುಪಡಿಸಿ ಬೇರೆ ಬೇರೆ ಕಡೆ ಪ್ರಚಾರ ಮಾಡುತ್ತೇನೆʼʼ ಎಂದ ಅವರು, ʻʻಇಕ್ಬಾಲ್ ಅನ್ಸಾರಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ನಾನೇ ಅವರ ಹೆಸರು ಪ್ರಸ್ತಾಪಿಸುತ್ತಿದ್ದೆ. ನನಗೆ ಅಥವಾ ಮಲ್ಲಿಕಾರ್ಜುನ ನಾಗಪ್ಪ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಕೇಳಿದ್ದೆವುʼʼ ಎಂದು ವಿವರಿಸಿದರು. ಕಾಂಗ್ರೆಸ್‌ನ ಈ ಧೋರಣೆ ನೋಡಿದರೆ ಗೆಲ್ಲುವುದು ಕಷ್ಟ ಎನ್ನುವುದು ಶ್ರೀನಾಥ್ ಅಭಿಮತ.
ಎಚ್.ಆರ್. ಶ್ರೀನಾಥ್ ಅವರು ಮಾಜಿ ಎಂಎಲ್‌ಸಿ ಆಗಿದ್ದು, ಈ ಹಿಂದೆ ಜೆಡಿಎಸ್‌ನಲ್ಲಿದ್ದು ಬಳಿಕ ಕಾಂಗ್ರೆಸ್‌ಗೆ ಬಂದವರು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರ ಮುನವಳ್ಳಿ ಅವರು 67 ಸಾವಿರ ಮತ ಪಡೆದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ 59 ಸಾವಿರ ಮತ ಪಡೆದಿದ್ದರು. ಈ ಬಾರಿ ಗೆಲುವಿನ ವಾತಾವರಣವಿದೆ ಎನ್ನುವುದು ಇಕ್ಬಾಲ್ ಅನ್ಸಾರಿ ಅಭಿಮತ. ವಿರೋಧಿಗಳು ಮಾತ್ರ ಬಿಜೆಪಿನೇ ಗೆಲ್ಲುವುದು ಅಂತಾರೆ.
ಇದನ್ನೂ ಓದಿ : Karnataka Elections : ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರ್ಪಡೆ?