Site icon Vistara News

Karnataka Elections : ಲಕ್ಷ್ಮಣ ಸವದಿ ಬಳಿಕ ಮತ್ತೊಬ್ಬ ಬೆಳಗಾವಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್‌ ಗಾಳ; ಕೈಪಾಲಾಗ್ತಾರಾ ಅನಿಲ್‌ ಬೆನಕೆ?

Anil benake Laxman savadi

#image_title

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections) ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿರುವ ಬಂಡಾಯದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಅಥಣಿ ಟಿಕೆಟ್‌ಗೆ ಪಟ್ಟು ಹಿಡಿದು ಸೋತಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಆಗಲೇ ತೆಕ್ಕೆಗೆ ಎಳೆದುಕೊಳ್ಳಲು ಎಲ್ಲ ರೀತಿಯಲ್ಲೂ ಸಜ್ಜಾಗಿರುವ ಕಾಂಗ್ರೆಸ್‌ ಈಗ ಇನ್ನೊಬ್ಬ ಬಂಡುಕೋರನಿಗೆ ಬಲೆ ಬೀಸಿದೆ. ಅವರೇ ಅನಿಲ್‌ ಬೆನಕೆ.

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಅನಿಲ್‌ ಬೆನಕಗೆ ಕಮಲ ಪಕ್ಷ ಟಿಕೆಟ್‌ ನಿರಾಕರಿಸಿದೆ. ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಎಲ್ಲ ದಿಕ್ಕುಗಳಿಂದ ಪ್ರಯತ್ನ ನಡೆಸಲಾಗುತ್ತಿದೆ. ಕಾಂಗ್ರೆಸ್ ಸೇರುವಂತೆ ಅನಿಲ್ ಬೆನಕೆಗೆ ಹಲವು ನಾಯಕರು ಕರೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅನಿಲ್‌ ಬೆನಕೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರ ಜತೆಗೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡಾ ಬೆನಕೆ ಅವರಿಗೆ ಆತ್ಮೀಯರಾಗಿದ್ದಾರೆ. ಈಗ ಈ ಇಬ್ಬರೂ ನಾಯಕರು ಬೆನಕೆಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅನಿಲ್‌ ಬೆನಕೆ ಅವರು ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಸೆಳೆದು ಸೆಳೆದು ಮರಾಠಾ ಸಮುದಾಯ ಓಲೈಕೆಗೆ ಕಾಂಗ್ರೆಸ್ ಪ್ಲ್ಯಾನ್ ಹಾಕಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ‌ ಮರಾಠಾ ಸಮುದಾಯದ ಪ್ರಾಬಲ್ಯವಿರುವುದನ್ನು ಪರಿಗಣಿಸಿ ಕಾಂಗ್ರೆಸ್‌ ಬೆನಕೆ ಅವರ ಮೇಲೆ ನಿರೀಕ್ಷೆ ಇಟ್ಟಿದೆ.

ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್‌ ಮುಂದಾಗಿದೆ ಎನ್ನಲಾಗಿದೆ. ಶಾಸಕ ಅನಿಲ್ ಬೆನಕೆ ಸೆಳೆದು ಬಿಜೆಪಿ ಜೊತೆ ಎಂಇಎಸ್‌ಗೆ ಟಕ್ಕರ್ ಕೊಡಲು ‘ಕೈ’ ತಂತ್ರಗಾರಿಕೆ ಮಾಡಿದೆ.

ಬೆಳಗಾವಿ ಉತ್ತರ ಕ್ಷೇತ್ರದಿಂದ ಬಿಜೆಪಿ ಈ ಬಾರಿ ಲಿಂಗಾಯತ ಸಮುದಾಯದ ಡಾ.ರವಿ ಪಾಟೀಲ್‌ಗೆ ಟಿಕೆಟ್ ನೀಡಿದೆ. ಅನಿಲ್ ಬೆನಕೆಗೆ ಟಿಕೆಟ್ ನೀಡದ್ದಕ್ಕೆ ಮರಾಠಿಗರಲ್ಲಿ ಬೇಸರ ಮೂಡಿಸಿದೆ. ‘ಬಿಜೆಪಿ ಅಭ್ಯರ್ಥಿಗೆ ಮತದಾರರಿಂದ ಬಹಿಷ್ಕಾರ’ ಎಂದು ಮರಾಠಿಯಲ್ಲಿ ಬರಹವೊಂದು ಅಲ್ಲಲ್ಲಿ ಕಾಣಿಸಿಕೊಂಡಿದೆ. ಬೆಳಗಾವಿಯ ವಿವಿಧ ಬಡಾವಣೆಗಳ ಸೂಚನಾ ಫಲಕದಲ್ಲಿ ಮರಾಠಿ ಭಾಷೆಯಲ್ಲಿ ಬರಹ ಹಾಕಲಾಗಿದೆ.

ಹೀಗಾಗಿ ಮರಾಠಾ ಸಮುದಾಯಕ್ಕೆ ಟಿಕೆಟ್ ನೀಡಿ ಮರಾಠಿಗರ ಮನವೊಲಿಕೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡಿರುವ ಅನಿಲ್‌ ಬೆನಕೆ ಅವರು ಶುಕ್ರವಾರ ತಮ್ಮ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಒಂದು ವೇಳೆ ಲಕ್ಷ್ಮಣ ಸವದಿ ಅವರ ಜತೆ ಅನಿಲ್‌ ಬೆನಕೆ ಕೂಡಾ ಕಾಂಗ್ರೆಸ್‌ ಸೇರಿದರೆ ಕೈ ಪಾಳಯಕ್ಕೆ ಬಲ ಬರುವ ಸಾಧ್ಯತೆ ಹೆಚ್ಚಾಗಿದೆ. ಅದನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೂಡಾ ಉತ್ಸುಕತೆ ವಹಿಸಿದ್ದಾರೆ.

ಇದನ್ನೂ ಓದಿ : Karnataka Election 2023: ಕಾಂಗ್ರೆಸ್‌ ಸೇರ್ಪಡೆ ಚರ್ಚೆಗೆ ಸವದಿ ಸಭೆ; ಕೈ ಎತ್ತಿ ಬೆಂಬಲ ಸೂಚಿಸಿದ ಕಾರ್ಯಕರ್ತರು

Exit mobile version