Site icon Vistara News

Karnataka Elections : ಕಾಂಗ್ರೆಸ್‌ನವರು ಶೆಟ್ಟರ್‌ರನ್ನು ಬಳಸಿಕೊಂಡು ಹೊರಗೆ ಎಸೀತಾರೆ; ಸಿಎಂ ಬೊಮ್ಮಾಯಿ ಲೇವಡಿ

Bommai

ಬೆಂಗಳೂರು: ಕಾಂಗ್ರೆಸ್‌ನವರು ಜಗದೀಶ್‌ ಶೆಟ್ಟರ್‌ ಅವರನ್ನು ಬಳಸಿಕೊಂಡು ಎಸೀತಾರೆ.. ನೋಡ್ತಾ ಇರಿ: ಇದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ವಿದ್ಯಮಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಪ್ರತಿಕ್ರಿಯೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಶೆಟ್ಟರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪ್ರಮುಖ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅವರನ್ನು ಬಳಸಿಕೊಂಡು ಹೊರಗೆ ಹಾಕುತ್ತಾರೆ ಎಂದು ಭವಿಷ್ಯ ನುಡಿದರು.

ʻʻಕಾಂಗ್ರೆಸ್‌ ಅನೇಕ ಹಿರಿಯ ನಾಯಕರನ್ನು ಬಳಸಿಕೊಂಡು ಹೊರಗೆ ಹಾಕಿದೆ. ವಿರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸು ಅವರನ್ನೇ ಹೊರಹಾಕಿದ ಇತಿಹಾಸ ಪಕ್ಷಕ್ಕಿದೆ. ಅಂತಹ ಪಕ್ಷಕ್ಕೆ ಈಗ ಜಗದೀಶ್‌ ಶೆಟ್ಟರ್‌ ಹೋಗಿದ್ದಾರೆ. ಜಗದೀಶ ಶೆಟ್ಟರ್ ಅವರನ್ನೂ ಹೀಗೇ ಬಳಸಿಕೊಂಡು ಹೊರಗೆ ಹಾಕ್ತಾರೆʼʼ ಎಂದು ಹೇಳಿದರು ಸಿಎಂ ಬೊಮ್ಮಾಯಿ.

ಶೆಟ್ಟರ್‌ ವೋಟ್‌ ಬ್ಯಾಂಕ್‌ ಪೂರ್ಣ ಕುಸಿತ

ʻʻನಾನು ನಿನ್ನೆ ಹುಬ್ಬಳ್ಳಿ, ಧಾರವಾಡ, ಹಾವೇರಿಯಲ್ಲಿದ್ದೆ. ಗ್ರೌಂಡ್‌ನಲ್ಲಿ ಬಿಜೆಪಿ ಕಡೆ ಹೆಚ್ಚಿನ ಒಲವು ಇದೆ. ಕಾಂಗ್ರೆಸ್‌ ನವರು ಬಿಜೆಪಿ ನಾಯಕರನ್ನು ಸೇರ್ಪಡೆ ಮಾಡಿಕೊಂಡಿರಬಹುದು. ಆದರೆ ಅವರ ಓಟ್ ಬ್ಯಾಂಕ್ ಸಂಪೂರ್ಣ ಕುಸಿದಿದೆʼʼ ಎಂದು ಬೊಮ್ಮಾಯಿ ಹೇಳಿದರು.

ʻʻಬಿಜೆಪಿ ಜಗದೀಶ್‌ ಶೆಟ್ಟರ್‌ ಅವರಿಗೆ ಉನ್ನತ ಸ್ಥಾನಮಾನ ಕೊಟ್ಟಿತ್ತು. ಈಗ ಪಕ್ಷ ಬಿಡುವಾಗ ಏನಾದರೂ ಕಾರಣ ಹೇಳಬೇಕಲ್ಲ ಹೀಗಾಗಿ ಆ ರೀತಿ ಹೇಳಿದ್ದಾರೆʼʼ ಎಂದು ಹೇಳಿದ ಅವರು, ಜಗದೀಶ್ ಶೆಟ್ಟರ್ ಕೋರ್ ಕಮಿಟಿಯಲ್ಲಿದ್ದವರು ತೀರ್ಮಾನ ತೆಗೆದುಕೊಳ್ಳುವ ಮಟ್ಟದಲ್ಲಿದ್ದವರು. ಅವರು ಹೀಗೆ ಮಾಡಿದ್ದು ಸರಿಯಲ್ಲ ಎಂದರು.

ಒಂದು ವೇಳೆ ಶೆಟ್ಟರ್‌ ಅವರು ಮರಳಿ ಬಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವರ ಬರ್ತಾರೆ ಅನ್ನೋ ನಿರೀಕ್ಷೆ ಮಾಡಲ್ಲ ಎಂದರು.

ಕಾಂಗ್ರೆಸ್‌ನವರಿಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಬಂದಿದೆ!

ʻʻಕಾಂಗ್ರೆಸ್‌ನವರಿಗೆ ಈಗ ಲಿಂಗಾಯತರಿಗೆ ಏಕೆ ಇಷ್ಟು ಪ್ರೀತಿ ಬಂದಿದೆಯೋ ಗೊತ್ತಿಲ್ಲ. ಕಳೆದ 50 ವರ್ಷ ಲಿಂಗಾಯತ ನಾಯಕರನ್ನ ತುಳಿದವರೇ ಕಾಂಗ್ರೆಸ್‌ ನಾಯಕರು. ಲಿಂಗಾಯತ ನಾಯಕರನ್ನು ಅವರು ಬೆಂಗಳೂರಿಗೂ ಕರೆದುಕೊಂಡು ಬಂದಿಲ್ಲ. 50 ವರ್ಷ ಲಿಂಗಾಯತರನ್ನ ದೂರ ಇಟ್ಟವರು ಇವರು. ಇವರಿಂದ ಪಾಠ ಕಲಿಯಬೇಕಾ..?ʼʼ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ʻʻಲಿಂಗಾಯತ ಸಮುದಾಯ ಜಾಗೃತ ಸಮುದಾಯ. ಯಾರು ಅವರನ್ನ ಬೆಂಬಲಿಸಿದ್ದಾರೆ, ಅವರ ಹಿತರಕ್ಷಣೆ ಮಾಡಿದ್ದಾರೆ ಎಂದು ಗೊತ್ತಿದೆ. ಯಡಿಯೂರಪ್ಪ ನವರಂತ ಮೇರು ನಾಯಕತ್ವ, ಬಹಳ ದೊಡ್ಡ ನಾಯಕತ್ವ ಇರುವಾಗ ಲಿಂಗಾಯತ ನಾಯಕರು ನಮ್ಮ ಜೊತೆ ಇರ್ತಾರೆ. ಇತರೆ ಸಮುದಾಯಗಳು ನಮ್ಮ ಜೊತೆ ಇರ್ತಾರೆʼʼ ಎಂದರು ಬೊಮ್ಮಾಯಿ.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದೇಕೆ?

ಜಗದೀಶ್‌ ಶೆಟ್ಟರ್‌ ಅವರು ಸುಮಾರು 40 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಇದೀಗ ಈ ಬಾರಿ ವಿಧಾನಸಭಾ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ಹೈಕಮಾಂಡ್‌ ಸೂಚನೆಯಿಂದ ಬೇಸತ್ತು ಶಾಸಕತ್ವ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಂಮೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ, ಬಿಜೆಪಿಯ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಶನಿವಾರ ರಾತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಪಕ್ಷ ಬಿಡದಂತೆ ಮನವೊಲಿಸಿದ್ದರು. ಬಿಜೆಪಿ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವುದೇ ಸ್ಥಾನಮಾನಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಆದರೆ, ಜಗದೀಶ್‌ ಶೆಟ್ಟರ್‌ ಮಾತ್ರ, ಶಾಸಕ ಸ್ಥಾನದ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವ ಸ್ಥಾನಮಾನವೂ ಬೇಡ ಎಂದು ಹಠ ಮಾಡಿದ್ದರು. ಇದರಿಂದಾಗಿ ಮಾತುಕತೆ ಫಲ ನೀಡದೆ ಶೆಟ್ಟರ್‌ ಅವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದರು.

ಇದನ್ನೂ ಓದಿ : Karnataka Election: ನಾನು ಅಂಬೇಡ್ಕರ್ ವಾದಿ, ಮೀಸಲಾತಿ ಹೆಚ್ಚಳಕ್ಕೆ ದಿಟ್ಟ ನಿರ್ಧಾರ: ಸಿಎಂ ಬೊಮ್ಮಾಯಿ

Exit mobile version