ಚಿಕ್ಕಮಗಳೂರು: ಕೇವಲ ಎರಡು ತಿಂಗಳ ಹಿಂದಷ್ಟೆ ಜೆಡಿಎಸ್ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರಿ ಅಲ್ಲಿ ಟಿಕೆಟ್ (Karnataka Elections) ಸಿಗದೆ ತ್ರಿಶಂಕು ಸ್ಥಿತಿಯಲ್ಲಿ ಅನಾಥ ಪ್ರಜ್ಞೆಯನ್ನು ಅನುಭವಿಸಿದ್ದ ರಾಜ್ಯ ರಾಜಕಾರಣ ಚಿಂತನಶೀಲ ರಾಜಕಾರಣಿ ವೈಎಸ್‌ವಿ ದತ್ತ ಅವರನ್ನು ಮತ್ತೆ ಜಾತ್ಯತೀತ ಜನತಾದಳ ಕೈಹಿಡಿದಿದೆ. ರಾಜಕಾರಣದಲ್ಲಿ ಅಪರೂಪವಾಗಿರುವ ಸಜ್ಜನಿಕೆ, ಸಂವೇದನಾಶೀಲನೆಯನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಮೆರೆದಿದ್ದು ತಮ್ಮ ʻಮಾನಸ ಪುತ್ರʼನನ್ನು ಮತ್ತೆ ಕರೆಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಎರಡು ತಿಂಗಳ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ದೇವೇಗೌಡರಿಗೆ ತೀರಾ ಆತ್ಮೀಯರಾಗಿದ್ದ ಅವರು ಎರಡನೇ ಪೀಳಿಗೆಯ ಜತೆಗೆ ಅಷ್ಟೊಂದು ಸರಿಬರದೆ ಕಾಂಗ್ರೆಸ್ ಕಡೆಗೆ ವಾಲಿದ್ದರು. ಕಾಂಗ್ರೆಸ್ ಅವರನ್ನು ಭಾರಿ ಉತ್ಸುಕತೆಯಿಂದ ಬರಮಾಡಿಕೊಂಡಿತ್ತು. ಅಂದು ವೈಎಸ್‌ವಿ ದತ್ತ ಅವರು ದೇವೇಗೌಡರಿಗೆ ಈ ವಿಚಾರವನ್ನು ಹೇಗೆ ತಿಳಿಸುವುದು ಎಂದು ಅರಿಯದೆ ಸಾಕಷ್ಟು ಸಮಯ ಕಳೆದಿದ್ದರು. ಕೊನೆಗೆ ಅವರಿಗೊಂದು ಮಾತು ಹೇಳಿ ಕಾಂಗ್ರೆಸ್‌ಗೆ ಹೋಗಿದ್ದರು.
ಆದರೆ, ಕಾಂಗ್ರೆಸ್ ಕಡೂರು ಕ್ಷೇತ್ರದ ಟಿಕೆಟ್ ಪ್ರಕಟಿಸಿದಾಗ ಅಲ್ಲಿ ವೈಎಸ್‌ವಿ ದತ್ತ ಅವರ ಹೆಸರಿರಲಿಲ್ಲ. ಬದಲಾಗಿ ಎ.ಎಸ್. ಆನಂದ್ ಅವರು ಅಭ್ಯರ್ಥಿಯಾಗಿದ್ದರು. ಇತ್ತ ಜೆಡಿಎಸ್‌ನಿಂದ ಧನಂಜಯ ಅವರು ಕಣಕ್ಕೆ ಇಳಿದಿದ್ದರು.
ಟಿಕೆಟ್ ನಿರಾಕರಣೆಗೊಂಡು ಯಗಟಿಯ ಮನೆಗೆ ಬಂದ ವೈರಸ್‌ವಿ ದತ್ತ ಅವರನ್ನು ಊರಿನ ಸಾವಿರಾರು ಜನರು ಸ್ವಾಗತಿಸಿ ಧೈರ್ಯ ತುಂಬಿದ್ದರು. ಯಾವುದಾದರೂ ರಾಷ್ಟ್ರೀಯ ಪಕ್ಷ ಇಲ್ಲವೇ ಪಕ್ಷೇತರನಾಗಿ ಕಣಕ್ಕಿಳಿಯುವಂತೆ ಮನವಿ ಮಾಡಿದ್ದರು. ಕಳೆದ ಭಾನುವಾರ ಅಭಿಮಾನಿಗಳ ಸಭೆಯನ್ನು ಕರೆದಿದ್ದ ವೈಎಸ್‌ವಿ ದತ್ತ ಅವರು ಪಕ್ಷೇತರನಾಗಿ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ್ದರು.
ಈ ನಡುವೆ, ವೈಎಸ್‌ವಿ ದತ್ತ ಅವರು ಮರಳಿ ಜೆಡಿಎಸ್‌ಗೆ ಸೇರುವ ಸಾಧ್ಯತೆಗಳ ಚರ್ಚೆಯೂ ನಡೆದಿತ್ತು. ಆದರೆ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ʻʻಅವರು ಇಂಟರ್‌ನ್ಯಾಷನಲ್ ಪಕ್ಷಕ್ಕೆ ಹೋದವರು. ನಾನು ಅವರ ಬಗ್ಗೆ ಮಾತನಾಡುವುದಿಲ್ಲʼʼ ಎಂದಿದ್ದರು. ಹೀಗಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ ಎನ್ನುವುದು ಸ್ಪಷ್ಟವಾಗಿತ್ತು.
ಇದೇವೇಳೆ, ವೈಎಸ್‌ವಿ ದತ್ತ ಅವರು ಬುಧವಾರ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ದೇವೇಗೌಡರು ಕೂಡಾ ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿತ್ತು.
ಮನೆಗೇ ಭೇಟಿ ನೀಡಿದ ರೇವಣ್ಣ, ಪ್ರಜ್ವಲ್
ಇದೆಲ್ಲದರ ನಡುವೆ ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರು ಕಡೂರಿನ ಯಗಟಿಯ ವೈಎಸ್‌ವಿ ದತ್ತ ಅವರ ಮನೆಗೇ ಭೇಟಿ ನೀಡಿದರು. ವೈಎಸ್‌ವಿ ದತ್ತ ಅವರನ್ನು ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದ ಈ ಇಬ್ಬರು ನಾಯಕರು ಮತ್ತೊಮ್ಮೆ ಪಕ್ಷದ ತೆಕ್ಕೆಗೆ ಆಹ್ವಾನಿಸಿದರು.
ದೇವೇಗೌಡರ ಸೂಚನೆಯ ಮೇರೆಗೆ ಮನೆಗೆ ಭೇಟಿ ನೀಡಿದ ರೇವಣ್ಣ ಮತ್ತು ಪ್ರಜ್ವಲ್ ಹಳೆ ನೋವುಗಳನ್ನು ಮರೆತು ಮರಳಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು. ದತ್ತ ಅವರು ಅತ್ಯಂತ ಭಾವುಕರಾಗಿ ಒಪ್ಪಿಕೊಂಡರು.
ಏಪ್ರಿಲ್ 18ರಂದು ವೈಎಸ್‌ವಿ ದತ್ತ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಾರೆ. ಅಂದು ದೇವೇಗೌಡರು ಕೂಡಾ ಉಪಸ್ಥಿತರಿರುತ್ತಾರೆ ಎಂದು ರೇವಣ್ಣ ಘೋಷಿಸಿದರು.
ಈಗಾಗಲೇ ಟಿಕೆಟ್ ಘೋಷಣೆಯಾಗಿರುವ ಧನಂಜಯ ಅವರನ್ನು ಹಿಂಪಡೆದು ದತ್ತ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಿದೆ.
ಇದನ್ನೂ ಓದಿ : JDS Karnataka: ಜೆಡಿಎಸ್‌ಗೆ ಮರಳಲು ವೈಎಸ್‌ವಿ ದತ್ತ ಪ್ರಯತ್ನ: ದೇವೇಗೌಡರಿಂದಲೂ ಸಿಗಲಿಲ್ಲ ಭರವಸೆ