Site icon Vistara News

Karnataka Elections : ಕಿತ್ತೂರು ಟಿಕೆಟ್‌ ಸಿಗದ್ದಕ್ಕೆ ಬೇಸರ; ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಪ್ರಕಟಿಸಿದ ಡಿ.ಬಿ. ಇನಾಂದಾರ್‌ ಕುಟುಂಬ

Lakshmi Inamdar DB Inamdar

#image_title

ಬೆಳಗಾವಿ: ರಾಜ್ಯ ವಿಧಾನಸಭೆಯ 42 ಕ್ಷೇತ್ರಗಳಿಗೆ ಸಂಬಂಧಿಸಿ ಕಾಂಗ್ರೆಸ್‌ ಪ್ರಕಟಿಸಿದ ಎರಡನೇ ಪಟ್ಟಿ ರಾಜ್ಯದ ಕೆಲವು ಕಡೆ ಆಕ್ರೋಶದ ಅಲೆಗಳನ್ನು ಸೃಷ್ಟಿಸಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಂತೂ ಭಾರಿ ಅವಾಂತರಗಳಿಗೆ ಕಾರಣವಾಗಿದೆ. ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಡಿ.ಬಿ. ಇನಾಂದಾರ್‌ ಅವರ ಕುಟುಂಬ, ಅದು ಬಾಬಾಸಾಹೇಬ್ ಪಾಟೀಲ್‌ ಪಾಲಾಗುತ್ತಿದ್ದಂತೆಯೇ ಸಿಡಿದೆದ್ದಿದೆ. ಕುಟುಂಬದ ಸದಸ್ಯರೆಲ್ಲ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೀ ಇನಾಮ್ದಾರ್‌.

ಡಿ.ಬಿ. ಇನಾಂದಾರ್‌ ಅವರು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದು ನಾಲ್ಕು ಬಾರಿ ಸಚಿವರಾದವರು. ಎರಡು ಬಾರಿ ಜನತಾ ಪಾರ್ಟಿಯಿಂದ (1983, 1985) ಗೆದ್ದಿದ್ದ ಅವರು ಮೂರು ಬಾರಿ (1994, 1999, 2013) ಕಾಂಗ್ರೆಸ್‌ನಿಂದ ಜಯ ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಇಲ್ಲಿ ಗೆದ್ದಿದ್ದು ಬಿಜೆಪಿಯ ಮಹಾಂತೇಶ್‌ ಬಸವರಾಯ ದೊಡ್ಡಗೌಡರ್‌.

ಡಿ.ಬಿ. ಇನಾಂದಾರ್‌ ಅವರಿಗೆ ಈಗ 78 ವರ್ಷ. ಈ ಬಾರಿ ನಾನು ಸ್ಪರ್ಧಿಸುವುದಿಲ್ಲ. ಹಾಗಾಗಿ ಸೊಸೆ ಲಕ್ಷ್ಮೀ ಇನಾಮ್ದಾರ್‌ಗೆ ಟಿಕೆಟ್‌ ಕೊಡಬೇಕು ಎಂದು ಅವರು ಮನವಿ ಮಾಡಿದ್ದರು. ಕಾಂಗ್ರೆಸ್‌ ಪಕ್ಷ ಅವರಿಗೇ ಟಿಕೆಟ್‌ ನೀಡತ್ತದೆ ಎಂದು ಅವರು ನಂಬಿದ್ದರು. ಅದರೆ, ಎರಡನೇ ಪಟ್ಟಿಯನ್ನು ನೋಡಿದಾಗ ಅವರಿಗೆ ಆಘಾತವಾಗಿದೆ. ಲಕ್ಷ್ಮೀ ಇನಾಂದಾರ್‌ ಅವರಿಗೆ ಟಿಕೆಟ್‌ ಕೊಟ್ಟಿರಲಿಲ್ಲ. ಬದಲಾಗಿ ಬಾಬಾ ಸಾಹೇಬ್ ಪಾಟೀಲ್‌ ಅವರಿಗೆ ಟಿಕೆಟ್ ನೀಡಲಾಗಿತ್ತು.

ನೇಗಿಲಹಾಳ ಗ್ರಾಮದಲ್ಲಿ ಆಕ್ರೋಶ

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿ‌ನ ನೇಗಿನಹಾಳ ಗ್ರಾಮದಲ್ಲಿ ಆಕ್ರೋಶ ಸೃಷ್ಟಿಯಾಯಿತು. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದರು. ಟಯರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಲಾಯಿತು.

ಡಿ ಬಿ ಇನಾಮ್ದಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಸೊಸೆ ಲಕ್ಷ್ಮೀ ಇನಾಂದಾರ್‌ ಅವರಿಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಪಟ್ಟು ಹಿಡಿದಿದ್ದರು.

ಬಳಿಕ ಟಿಕೆಟ್‌ ಆಕಾಂಕ್ಷಿ ಲಕ್ಷ್ಮೀ ಇನಾಂದಾರ್‌ ಅವರು ಮಾತನಾಡಿ ತಮ್ಮ ಇಡೀ ಕುಟುಂಬ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಪ್ರಕಟಿಸಿದರು.

2018ರಲ್ಲೂ ರಾಜೀನಾಮೆ ನೀಡುವುದಾಗಿ ಹೇಳಿದ್ದರು

ಡಿ.ಬಿ. ಇನಾಮ್ದಾರ್‌ ಅವರಿಗೆ 2018ರಲ್ಲೂ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ಆಗಲೂ ಕೊಟ್ಟಿದ್ದು ಅವರ ಸಂಬಂಧಿಯೇ ಅಗಿರುವ ಬಾಬಾ ಸಾಹೇಬ್‌ ಪಾಟೀಲ್‌ ಅವರಿಗೆ. ಆಗಲೂ ಡಿ.ಬಿ. ಇನಾಂದಾರ್‌ ಅವರು ತಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದರು. ಬಳಿಕ ಹಿರಿಯ ನಾಯಕರು ಅವರನ್ನು ಸಮಾಧಾನ ಮಾಡಿದ್ದರು. ಇದೀಗ ಮತ್ತೊಮ್ಮೆ ಅಪಮಾನವಾಗಿದೆ ಎಂದು ಸೊಸೆಯ ಮೂಲಕ ಪ್ರಕಟಿಸಲಾಗಿದೆ. ಇದು ಎಲ್ಲಿ ಹೋಗಿ ನಿಲ್ಲುತ್ತದೆ ನೋಡಬೇಕು.

ಇನಾಂದಾರ್‌ ಮನೆತನ ಕಿತ್ತೂರಿನಲ್ಲಿ ಪ್ರಭಾವಶಾಲಿಯಾಗಿದೆ. ಲಕ್ಷ್ಮೀ ಇನಾಂದಾರ್‌ ಅವರು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು ಬಹುಸಮಯದಿಂದ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದ್ದರು.

ಇದನ್ನೂ ಓದಿ : Karnataka Congress: ಕೆಪಿಸಿಸಿ ಕಚೇರಿಯೆದುರು ವಿಷ ಸೇವಿಸಲು ಮುಂದಾಗ ಕಾರ್ಯಕರ್ತರು: ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ

Exit mobile version