Site icon Vistara News

Karnataka Elections : ನಾನು ಬದುಕಿರೋವರೆಗೆ ದತ್ತನ ಕೈಬಿಡಬಾರದು, ಕಷ್ಟ ಕಾಲದಲ್ಲಿ ನೆರವಿಗೆ ನಿಲ್ಬೇಕು ಎಂದು ಹೇಳಿದ್ರಂತೆ ಎಚ್‌ಡಿಡಿ

DD devegowda YSV Datta

#image_title

ಚಿಕ್ಕಮಗಳೂರು: ʻವೈಎಸ್‌ವಿ ದತ್ತ ಅವರ ಕಷ್ಟ ಕಾಲದಲ್ಲಿ ನಾವು ನೆರವಿಗೆ ನಿಲ್ಲಬೇಕು.. ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆʼʼ- ಹೀಗೆಂದು ಹೇಳಿದ್ದು ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್.ಡಿ. ರೇವಣ್ಣ.

ಜೆಡಿಎಸ್ ಬಿಟ್ಟು ಕಾಂಗ್ರೆಸ್‌ ಸೇರಿ ಅಲ್ಲಿ ನಂಬಿಕೆ ಇರಿಸಿದ್ದ ಟಿಕೆಟ್‌ ಸಿಗದೆ ಮುಂದೇನು ಎಂದು ನೋವು ಅನುಭವಿಸುತ್ತಿದ್ದ ವೈಎಸ್‌ವಿ ದತ್ತ ಅವರನ್ನು ಮರಳಿ ಪಕ್ಷದ ತೆಕ್ಕೆಗೆ ಕರೆಸಿಕೊಂಡಿದೆ ಜಾತ್ಯತೀತ ಜನತಾದಳ. ಗುರುವಾರ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಅವರು ದೇವೇಗೌಡರ ಸಂದೇಶ ಹೊತ್ತು ಚಿಕ್ಕಮಗಳೂರು ತಾಲೂಕಿನ ಯಗಟಿಯ ದತ್ತಾ ಮನೆಗೆ ಆಗಮಿಸಿದರು.

ದೇವೇಗೌಡರ ಸಂದೇಶವನ್ನು ದತ್ತ ಅವರಿಗೆ ರವಾನಿಸಿ ಮತ್ತೆ ಜೆಡಿಎಸ್‌ಗೆ ಆಹ್ವಾನಿಸಿದರು. ಈಗಾಗಲೇ ಘೋಷಣೆಯಾಗಿರುವ ಕಡೂರು ಟಿಕೆಟ್‌ (ಧನಂಜಯ ಅವರಿಗೆ ನೀಡಲಾಗಿತ್ತು) ಬದಲಿಸಿ ವೈಎಸ್‌ವಿ ದತ್ತ ಅವರಿಗೆ ನೀಡುವುದಾಗಿ ಹೇಳಿದರು.

ಈ ವೇಳೆ ಮಾತನಾಡಿದ ರೇವಣ್ಣ ಅವರು, ಏಪ್ರಿಲ್‌ 18ರಂದು ವೈಎಸ್‌ವಿ ದತ್ತ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ದೇವೇಗೌಡರೇ ಅವರ ಜತೆಗಿರುತ್ತಾರೆ ಎಂದು ಹೇಳಿದರು.

ʻʻದತ್ತನ ಬಳಿ ಇರೋದು ಎರಡೇ ಎರಡು. ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಮಿನಿಸ್ಟರ್ ಆದಾಗ ಕಾರು ಕೊಡುಸ್ತೀನಿ ಅಂದೆ. ಬೇಡ ಸರ್ ನಂಗೇ ಆಟೋನೆ ಸಾಕು ಅಂದಿದ್ರು. 18ನೇ ತಾರೀಕು ದತ್ತ ನಾಮಪತ್ರ ಸಲ್ಲಿಕೆ ಮಾಡ್ತಾರೆ. ಅಂದು ಎಷ್ಟೇ ಕಷ್ಟ ಆದ್ರು ದೇವೇ ಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ದತ್ತನ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆʼʼ ಎಂದು ಹೇಳಿದರು ಎಚ್‌.ಡಿ. ರೇವಣ್ಣ.

ʻʻನಾನು ಬದುಕಿರುವವರೆಗೇ ದತ್ತನ ಕೈ ಬಿಡಬಾರದು ಎಂದು ದೇವೇಗೌಡರು ಹೇಳಿದ್ದಾರೆ. ನೀವು ಬೇರೆ ಯೋಚನೆ ಮಾಡಬೇಡಿ, ದೇವೇಗೌಡರ ಮಾತನ್ನು ನಾನು, ದತ್ತ, ನೀವು ಎಲ್ಲಾ ಪಾಲಿಸಬೇಕು. ದತ್ತನನ್ನು ಶಾಸಕ ಮಾಡ್ಲೇಬೇಕು ಅಂತ ದೇವೇಗೌಡರು ಹೇಳಿದ್ದಾರೆʼʼ ಎಂದು ಎಚ್.ಡಿ. ರೇವಣ್ಣ ಹೇಳಿದರು.

ʻʻನಮ್ಮ ಮನೆ ಎಲೆಕ್ಷನ್ ಅಂತ ಚುನಾವಣೆ ಮಾಡ್ತೀವಿ. ನಮಗೆ ಹೊಳೆನರಸೀಪುರ-ಕಡೂರು ಬೇರೆ-ಬೇರೆ ಅಲ್ಲʼʼ ಎಂದು ಎಚ್‌.ಡಿ. ರೇವಣ್ಣ ನುಡಿದರು.

ವೈಎಸ್‌ವಿ ದತ್ತ ಅವರು ದೇವೇಗೌಡರ ಜತೆ ಅತ್ಯಂತ ಆತ್ಮೀಯತೆ ಹೊಂದಿದವರು ಮಾತ್ರವಲ್ಲ, ಅವರ ರಾಜಕೀಯ ನಡೆಗಳ ಹಿಂದಿನ ಶಕ್ತಿ ಎಂದೂ ಹೇಳಲಾಗುತ್ತಿದೆ. ದೇವೇಗೌಡರು ಅತಿ ಹೆಚ್ಚು ನಂಬುತ್ತಿದ್ದ ವ್ಯಕ್ತಿಗಳಲ್ಲಿ ದತ್ತ ಒಬ್ಬರಾಗಿದ್ದು, ಅವರನ್ನು ದೇವೇಗೌಡರ ಮಾನಸ ಪುತ್ರ ಎಂದೇ ಕರೆಯಲಾಗುತ್ತಿತ್ತು. ಈಗ ಅತಂತ್ರರಾಗಿರುವ ಅವರಿಗೆ ದೇವೇಗೌಡರು ಮತ್ತೊಮ್ಮೆ ನೆಲೆ ಒದಗಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Karnataka Elections : ಮತ್ತೆ ಜೆಡಿಎಸ್‌ ಮನೆ ಪ್ರವೇಶಿಸಿದ ವೈಎಸ್‌ವಿ ದತ್ತ; ಅಭ್ಯರ್ಥಿಯನ್ನೇ ಬದಲಿಸಿ ಅವಕಾಶ ನೀಡಿದ ದೇವೇಗೌಡ್ರು

Exit mobile version