ಮೈಸೂರು: ಸಾರ್ವಜನಿಕರಿಗೆ ಉಡುಗೊರೆ, ಊಟ, ಹಣ ಮತ್ತಿತರ ರೀತಿಯಲ್ಲಿ ಆಮಿಷ ಒಡ್ಡಿ ಚುನಾವಣಾ ಅಕ್ರಮಗಳು ನಡೆಯುವ ಸಂಬಂಧ ಚುನಾವಣೆ (Karnataka Elections 2023) ಕೆಲಸಕ್ಕೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನ ಸಭಾ ಚುನಾವಣೆ ಸಂಬಂಧ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವಂತೆ ತಿಳಿಸಿದರು. ಚುನಾವಣೆ ಆಯೋಗದ ನಿರ್ದೇಶನದಂತೆ ಪ್ರಸಕ್ತ ವರ್ಷದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ನೀತಿ ಸಂಹಿತೆ ಪೂರ್ವ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ತಕ್ಷಣದಿಂದಲೇ ಅಧಿಕಾರಿಗಳು ಮುಂದಾಗಬೇಕು.
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,
ನೀತಿಸಂಹಿತೆ ಪೂರ್ವದಲ್ಲೇ ಸಂಭವನೀಯ ಅಕ್ರಮಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಅಂತಾರಾಜ್ಯ ಗಡಿ ಭಾಗಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಿ, ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ನಗದು, ಮದ್ಯ, ಮತ್ತಿತರ ಸಾಮಗ್ರಿಗಳ ಸಾಗಣೆ, ಸೇರಿದಂತೆ ಇಂತಹವುಗಳ ಮೇಲೆ ನಿಗಾ ವಹಿಸಬೇಕು ಎಂದರು.
ಚೆಕ್‍ಪೋಸ್ಟ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಅಧಿಕಾರಿ, ಸಿಬ್ಬಂದಿ ಯಾವುದೇ ಲೋಪದೋಷಗಳಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ, ಅನುಮತಿರಹಿತ ಫಲಕಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಕೂಡಲೇ ತೆರವುಗೊಳಿಸಬೇಕು ಎಂದು ಆದೇಶಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.