Site icon Vistara News

Karnataka Elections : ಭಯದಿಂದ ನಡುಗುತ್ತಿರುವ ಡಿಕೆಶಿ; ಕನಕಪುರದಲ್ಲಿ ಡಿ.ಕೆ ಸುರೇಶ್‌ ನಾಮಪತ್ರ ಸಲ್ಲಿಕೆಗೆ ಬಿಜೆಪಿ ವ್ಯಾಖ್ಯಾನ

Chalavadi DSU

#image_title

ಬೆಂಗಳೂರು: ಡಿ.ಕೆ. ಶಿವಕುಮಾರ್‌ ಅವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ, ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ. ಕಾಂಗ್ರೆಸ್‌ನವರ ಮೇಲೂ ನಂಬಿಕೆ ಇಲ್ಲ. ಅವರಿಗೆ ತಮ್ಮ ಮೇಲೆಯೇ ನಂಬಿಕೆ ಇಲ್ಲ. ಹೀಗಾಗಿ ಡಿ.ಕೆ ಸುರೇಶ್‌ ಅವರ ಮೂಲಕ ಕನಕಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ (Karnataka Elections) ಎಂದು ಬಿಜೆಪಿ ಲೇವಡಿ ಮಾಡಿದೆ.

ಡಿ.ಕೆ ಸುರೇಶ್‌ ಅವರು ಕನಕಪುರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬೆನ್ನಿಗೇ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ ಅವರು, ಕನಕಪುರದಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.

ʻʻʻಡಿಕೆಶಿಗೆ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ವ್ಯವಸ್ಥೆಗಳು ಯಾವ ರೀತಿ ಇರುತ್ತೆ ಅಂತ ಗೊತ್ತಿಲ್ಲ. ಅವರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ. ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ, ಅದನ್ನು ಸರ್ಕಾರ ನಡೆಸುವುದಿಲ್ಲ, ಅದರ ಮೇಲೆ ಹಿಡಿತ ಸಾಧಿಸಲು ಯಾರಿಗೂ ಆಗುವುದಿಲ್ಲ ಎನ್ನುವುದೂ ಅರ್ಥವಾಗಲ್ಲ. ಹೀಗೆ ನಂಬಿಕೆ ಕಳೆದುಕೊಂಡಿರುವ ಅವರು, ತಮ್ಮ ಸಹೋದರನನ್ನು ಕನಕಪುರದಲ್ಲಿ ಕಣಕ್ಕಿಳಿಸಿದ್ದಾರೆʼʼ ಎಂದು ಹೇಳಿದರು.

ʻʻಡಿ.ಕೆ.ಶಿವಕುಮಾರ್‌ಗೆ ಭಯ ಕಾಡುತ್ತಿದೆ. ಹಲವು ತಪ್ಪು ಮಾಡಿದವರಿಗೆ ಭಯ ಕಾಡುವುದು ಸಹಜ. ಕಾಂಗ್ರೆಸ್ ನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಇದೆ. ಹಾಗಾಗಿಯೇ ಅವರಿಗೆ ಹೆಜ್ಜೆ ಹೆಜ್ಜೆಗೂ ಭಯ ಕಾಡ್ತಿದೆʼʼ ಎಂದು ಚಲವಾದಿ ಹೇಳಿದರು.

ಅಶೋಕ್‌ ಗೆಲ್ಲೋದನ್ನು ಅವರೇ ಒಪ್ಪಿಕೊಂಡಿದ್ದಾರೆ!

ಡಿ.ಕೆ.ಶಿವಕುಮಾರ್‌ ಅವರಿಗೆ ಕನಕಪುರದಲ್ಲಿ ತಾವು ಸೋಲುವ ಸೂಚನೆ ಸಿಕ್ಕಿದೆ. ಜತೆಗೆ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು ಎನ್ನುವ ಭಯ. ಹೀಗಾಗಿ ಅವರು ಯಾವುದಕ್ಕೂ ಇರಲಿ ಎಂದು ತಮ್ಮನ ಕೈಯಲ್ಲಿ ನಾಮಪತ್ರ ಹಾಕಿಸಿದ್ದಾರೆ. ಜೀವನದಲ್ಲಿ ಏನಾದರೂ ತಪ್ಪು ಮಾಡಿದರೆ ಅವರಿಗೆ ರಾಜಕೀಯದಲ್ಲಿ ಭಯ ಇರುತ್ತದೆʼʼ ಎಂದರು. ಡಿ.ಕೆ. ಸುರೇಶ್‌ ಅವರ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದು ಅವರೆಲ್ಲ ಅಶೋಕ್‌ ಅವರು ಗೆಲ್ತಾರೆ ಎನ್ನುವುದನ್ನು ಒಪ್ಪಿಕೊಂಡಿರುವುದರ ದ್ಯೋತಕ ಎಂದರು.

ʻʻಡಿ.ಕೆ. ಶಿವಕುಮಾರ್ ತಪ್ಪು ಮಾಡದೇ ತಿಹಾರ್ ಜೈಲಿಗೆ ಹೋಗಿದ್ರಾ? ಅವರ ಆಸ್ತಿಯ ಪ್ರಮಾಣ ಐದು ವರ್ಷದಲ್ಲಿ 650 ಕೋಟಿ ರೂ. ಜಾಸ್ತಿ ಆಗಿದೆ. ಅವರ ಮನೆಯಲ್ಲಿರುವ ಶಾಲೆಗೆ ಹೋಗುವ ಮಕ್ಕಳ ಆಸ್ತಿ ಕೂಡಾ 300 ಕೋಟಿಗಿಂತ ಜಾಸ್ತಿ ಇದೆ. ಇದು ಜನರ ಹಣ ಲೂಟಿ ಮಾಡಿ ಭ್ರಷ್ಟಾಚಾರ ಮಾಡಿರುವ ಹಣ. ಹೀಗಾಗಿಯೇ ಭ್ರಷ್ಟಾಚಾರದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆʼʼ ಎಂದು ಚಲವಾದಿ ನಾರಾಯಣ ಸ್ವಾಮಿಹೇಳಿದರು.

ಡಿ.ಕೆ. ಸುರೇಶ್‌ ಅವರು ಕನಕಪುರ ಮಾತ್ರವಲ್ಲ, ಪದ್ಮನಾಭ ನಗರದಲ್ಲಿ ಕೂಡಾ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಪಾಪ ಅವರಿಗೆ ಸಮಯ ಸಿಗಲ್ಲ ಅನ್ಸುತ್ತೆ ಎಂದು ಗೇಲಿ ಮಾಡಿದರು.

ಸಿದ್ದರಾಮಯ್ಯರನ್ನು ಗೆಲ್ಲಿಸಲು ಸೊಸೆ, ಮೊಮ್ಮಗ ಬರುವಂತಾಗಿದೆ!

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೂಡಾ ಗೆಲ್ಲುವುದಿಲ್ಲ ಎಂದು ಹೇಳಿದ ಅವರು, ʻʻಸಿದ್ದರಾಮಯ್ಯ ಕ್ಷೇತ್ರ ಹುಡುಕಲು ರಾಜ್ಯ ಸುತ್ತಿದರು. ಎಲ್ಲೂ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ವರುಣಾಗೇ ಬಂದ್ರು. ಎಲ್ಲರನ್ನೂ ಗೆಲ್ಲಿಸ್ತೀನಿ ಅಂತಿದ್ದ ಸಿದ್ದರಾಮಯ್ಯರನ್ನು ಗೆಲ್ಲುಸಲು ಅವರ ಸೊಸೆ, ಮೊಮ್ಮಗ ಸಹಿತ ಬರುವಂತಾಗಿದೆ. ಸಿದ್ದರಾಮಯ್ಯ ಸೋಲಲಿ ಅಂತ ಹಲವರು ಬಯಸುತ್ತಿದ್ದಾರೆʼʼ ಎಂದರು ಚಲವಾದಿ ನಾರಾಯಣ ಸ್ವಾಮಿ.

ಇದನ್ನೂ ಓದಿ : Karnataka Election 2023 : ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ. ಸುರೇಶ್‌; ಕಾರಣವೇನು ಗೊತ್ತೇ?

Exit mobile version