Site icon Vistara News

Karnataka Elections 2023 : ಪದ್ಮನಾಭ ನಗರದಲ್ಲಿ ಆರ್‌. ಅಶೋಕ್‌ ವಿರುದ್ಧ ಡಿಕೆಶಿ ಬ್ರಹ್ಮಾಸ್ತ್ರ; ಡಿ.ಕೆ ಸುರೇಶ್‌ ಇಂದು ನಾಮಪತ್ರ ಸಲ್ಲಿಕೆ

DKS Ashok DKS

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections 2023) ಕಣ ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಈ ನಡುವೆ ರಾಜ್ಯದ ಅತ್ಯಂತ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಪದ್ಮನಾಭ ನಗರ ಕ್ಷೇತ್ರದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರಾ? ರಾಜ್ಯದ ಕಂದಾಯ ಸಚಿವರಾದ ಆರ್‌. ಅಶೋಕ್‌ ಅವರ ವಿರುದ್ಧ ಸ್ವತಃ ಸೋದರ ಡಿ.ಕೆ ಸುರೇಶ್‌ ಅವರನ್ನೇ ಕಣಕ್ಕಿಳಿಸುತ್ತಾರಾ?

ಇಂಥಹುದೊಂದು ಸಾಧ್ಯತೆಯ ಸುಳಿವನ್ನು ಡಿ.ಕೆ ಸುರೇಶ್‌ ನೀಡಿದ್ದಾರೆ. ಡಿ.ಕೆ. ಸುರೇಶ್‌ ಅವರು ಪದ್ಮನಾಭ ನಗರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಬುಧವಾರ ಪ್ರಕಟಿಸಿದರು.

ಆರ್‌. ಅಶೋಕ್‌ ಅವರು ಪದ್ಮನಾಭ ನಗರ ಕ್ಷೇತ್ರದ ಸಾಂಪ್ರದಾಯಿಕ ಬಿಜೆಪಿ ಅಭ್ಯರ್ಥಿಯಾಗಿದ್ದು ಸಲೀಸಾಗಿ ಗೆದ್ದು ಬರುತ್ತಿದ್ದಾರೆ. ಈ ಬಾರಿ ಅಶೋಕ್‌ ಅವರನ್ನು ಪದ್ಮನಾಭ ನಗರದ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕನಕಪುರದಲ್ಲೂ ಸ್ಪರ್ಧೆಗೆ ಇಳಿಸಲಾಗಿದೆ. ಕನಕಪುರದಲ್ಲಿ ತನಗೆ ಠಕ್ಕರ್‌ ಕೊಡಲು ಮುಂದಾಗಿರುವ ಆರ್‌. ಅಶೋಕ್‌ ಅವರನ್ನು ಪದ್ಮನಾಭ ನಗರದಲ್ಲಿ ಮಣಿಸಲು ಡಿ.ಕೆ ಶಿವಕುಮಾರ್‌ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪದ್ಮನಾಭ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ರಘುನಾಥ ನಾಯ್ಡು ಅವರನ್ನು ಈಗಾಗಲೇ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಕೆಲವು ದಿನಗಳಿಂದ ಅವರನ್ನು ನಾಮಪತ್ರ ಸಲ್ಲಿಸದಂತೆ ನಿರ್ದೇಶನ ನೀಡಲಾಗಿತ್ತು. ಹೀಗಾಗಿ ಇಲ್ಲಿಂದ ಡಿ.ಕೆ. ಸುರೇಶ್‌ ಅವರೇ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು.

ಇದೀಗ ಬುಧವಾರ ಡಿ.ಕೆ ಶಿವಕುಮಾರ್‌ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಪದ್ಮನಾಭ ನಗರ ಕ್ಷೇತ್ರದಿಂದ ರಘುನಾಥ ನಾಯ್ಡು ಅವರು ನಾಮಪತ್ರ ಸಲ್ಲಿಸುತ್ತಾರೆ. ಅದರ ಜತೆಗೆ ಸಂಸದರಾಗಿರುವ ಡಿ.ಕೆ. ಸುರೇಶ್‌ ಕೂಡಾ ನಾಮಪತ್ರ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

ಹಾಗಿದ್ದರೆ ಅಂತಿಮ ಕಣದಲ್ಲಿ ಯಾರು?

ಇಬ್ಬರೂ ನಾಮಪತ್ರ ಸಲ್ಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದರೂ ಅಂತಿಮವಾಗಿ ಕಣದಲ್ಲಿ ಯಾರು ಉಳಿಯುತ್ತಾರೆ ಎನ್ನುವ ಕುತೂಹಲವೂ ಇದೆ.

ʻʻರಘುನಾಥ ನಾಯ್ಡು ನಮ್ಮ ಅಭ್ಯರ್ಥಿ ಅವರು ನಾಮ ಪತ್ರ ಸಲ್ಲಿಸುತ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಕೆಗೆ ಹೋಗ್ತೇನೆ. ರಘುನಾಥ ನಾಯ್ಡುಗೆ ಗೆಲ್ಲುವಂತ ವಾತಾವರಣ ಇದೆ. ಅವರೂ ಕೂಡ ಗೆಲ್ಲುವಂತ ಅಭ್ಯರ್ಥಿʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈಗಾಗಲೇ ಹಲವು ಬಿಜೆಪಿ ಕಾರ್ಪೊರೇಟರ್‌ಗಳೂ ಕಾಂಗ್ರೆಸ್‌ ಸೇರಿದ್ದಾರೆ ಎಂದರು.

ಇದೆಲ್ಲವೂ ಚೆಸ್‌ ಆಟಾನಾ?

ಬಿಜೆಪಿ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಖೆಡ್ಡಾಗೆ ಬೀಳಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಆರ್‌ ಅಶೋಕ್‌ ಅವರ ಬೆವರಿಸುವುದು ಡಿಕೆಶಿ ಉದ್ದೇಶ ಎನ್ನುವುದು ಸ್ಪಷ್ಟ. ಆದರೆ, ಈಗ ಕನಕಪುರದ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿ.ಕೆ ಸುರೇಶ್‌ ಅವರನ್ನು ಪದ್ಮನಾಭ ನಗರದಲ್ಲಿ ನಿಜಕ್ಕೂ ಕಣಕ್ಕಿಳಿಸುತ್ತಾರಾ? ಅಥವಾ ಇದು ಸುಮ್ಮನೆ ಬೆದರಿಸುವ ತಂತ್ರವಾ ಎನ್ನುವುದು ಕುತೂಹಲ ಹುಟ್ಟಿಸಿದೆ.

ಬಿಜೆಪಿ ಜೆಡಿಎಸ್ ಅವರು ಚೆಸ್ ಆಟ ಆಡ್ತಿದ್ದಾರೆ, ನಾವೂ ಆಡ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ!

ಇದನ್ನೂ ಓದಿ : Karnataka Election 2023: ನಾನು, ಡಿಕೆಶಿ ಸಿಎಂ ಆಕಾಂಕ್ಷಿಗಳು; ಪೈಪೋಟಿಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

Exit mobile version