ಹುಬ್ಬಳ್ಳಿ: ʻʻಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. ಟಿಕೆಟ್‌ಗಾಗಿ ಪಕ್ಷದಲ್ಲಿ ಬಣಗಳ ಕಿತ್ತಾಟ ನಡೆದಿಲ್ಲʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜತೆಗೆ ಹಾಲಿ ಶಾಸಕರ ಪೈಕಿ ಶೇ. ೯೫ ಮಂದಿ ಟಿಕೆಟ್ ಪಡೆಯಲಿದ್ದಾರೆ (Karnataka Election) ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನೋ ಮ್ಯಾಚ್ ಫಿಕ್ಸಿಂಗ್ʼʼ ಎಂದರು.
ಪಕ್ಷ ಬಿಟ್ಟು ಹೋದ ಯಾರೂ ಅರ್ಜಿ ಸಲ್ಲಿಸಿಲ್ಲ
ಆಪರೇಷನ್ ಕಮಲಕ್ಕೆ ಗುರಿಯಾಗಿ ಬಿಜೆಪಿಗೆ ಹೋದವರ ಮರು ಸೇರ್ಪಡೆ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು. ಆದರೆ, ಅವರು ಯಾರು ಇದುವರೆಗೆ ಅರ್ಜಿ ಸಲ್ಲಿಸಿಲ್ಲ ಎನ್ನೋದೂ ಸತ್ಯ. ಅರ್ಜಿ ಕೊಟ್ಟ ಮೇಲೆ ಹೇಳ್ತೇನೆ ಎಂದು ಹೇಳಿದರು.
ʻʻಮಾಜಿ ಸಚಿವ ಸಂತೋಷ್ ಲಾಡ್ ರಾಷ್ಟ್ರೀಯ ನಾಯಕರಿದ್ದಾರೆ. ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ಸ್ಪರ್ಧಿಸದೆ ರೆಸ್ಟ್ ಮಾಡುವಂತೆ ಹೇಳಿದ್ದಾರೆ. ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆʼʼ ಎಂದು ಕೆಣಕು ಮಾತು ಆಡಿದರು ಡಿ.ಕೆ.ಶಿವಕುಮಾರ್.
ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ ಅವರು, ʻʻಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ. ಮೂರು ವರ್ಷದಿಂದ ಮಹದಾಯಿ ಯೋಜನೆ ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ, ಆದರೂ ಒಂದು ಹೆಜ್ಜೆ ಮುಂದಿಟ್ಟಿಲ್ಲ. ಈಗ- ನಾವು ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆʼʼ ಎಂದರು.
ʻʻಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಕಾಮಗಾರಿ ಪ್ರಾರಂಭಿಸಿ ಎಂದು ಪತ್ರ ಸಿದ್ಧಪಡಿಸಿದ್ದಾರೆ. ಗೋವಾ ಮಂತ್ರಿಯೊಬ್ಬರು ರಾಜೀನಾಮೆ ಕೊಡ್ತಾರಂತೆ, ಕೊಡಲಿ ಬಿಡಿ. ರಾಜ್ಯದಲ್ಲಿ ೨೬ ಸಂಸದರು ಬಿಜೆಪಿಯವರಿದ್ದಾರೆ. ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೇಂಬರ್. ಮಹದಾಯಿಗಾಗಿ ಇವರೆಲ್ಲ ಸೇರಿ ಪ್ರಧಾನ ಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನಮ್ಮ ರಾಜ್ಯದ ಜಾಗದಲ್ಲಿ ಕಾಮಗಾರಿಯನ್ನಾದ್ರೂ ಪೂರ್ಣಗೊಳಿಸಬೇಕಿತ್ತುʼʼ ಎಂದರು. ನಮಗೆ ಅಧಿಕಾರ ಬರ್ಲಿ, ಆರು ತಿಂಗಳಲ್ಲಿ ಬಡಿದು ಹಾಕ್ತೀವಿ ಎಂದರು.
ಇದನ್ನೂ ಓದಿ | Mahadayi Dispute | ಮಹದಾಯಿ ಡಿಪಿಆರ್‌ಗೆ ಕೇಂದ್ರದ ಸಮ್ಮತಿ ವಿರೋಧಿಸಿ ಶೀಘ್ರವೇ ಮೋದಿ ಬಳಿ ನಿಯೋಗ ಎಂದ ಗೋವಾ