Site icon Vistara News

Congress politics | ಡಿಕೆಶಿ- ಸಿದ್ದರಾಮಯ್ಯ ಬಣದ ಹೆಸರಲ್ಲಿ ಕಾಂಗ್ರೆಸ್‌ ನಾಯಕಿಯರ ಜಿದ್ದಾಜಿದ್ದಿ, ಕಣ್ಣೀರು!

T Dasarahalli

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress politics) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎರಡು ಬಣವಿದೆ ಎಂಬುದು ಜಗಜ್ಜಾಹೀರು. ಅವರಿಬ್ಬರೂ ಎಷ್ಟರ ಮಟ್ಟಿಗೆ ಹೊಂದಾಣಿಕೆಯಲ್ಲಿದ್ದಾರೋ, ಕಾಲೆಳೆಯುತ್ತಾರೋ ಗೊತ್ತಿಲ್ಲ. ಬಹಿರಂಗವಾಗಿಯಂತೂ ಚೆನ್ನಾಗೇ ಇದ್ದಾರೆ. ಆದರೆ, ಅವರ ಬಣಗಳಲ್ಲಿ ಗುರುತಿಸಿಕೊಂಡಿರುವವರು ಮಾತ್ರ ವಸ್ತುಶಃ ಜಗಳಕ್ಕೇ ಇಳಿಯುತ್ತಿದ್ದಾರೆ. ದಾಸರಹಳ್ಳಿ ಹಳ್ಳಿ ಕ್ಷೇತ್ರದ ಇಬ್ಬರು ಇಬ್ಬರು ಮಹಿಳಾ ನಾಯಕಿಯರ ನಡುವಿನ ಜಿದ್ದಾಜಿದ್ದಿ ಭಾನುವಾರ ಹಲವು ಪ್ರಹಸನ, ಫೈಟ್‌ ಮತ್ತು ಕಣ್ಣೀರಿಗೆ ಸಾಕ್ಷಿಯಾಯಿತು. ಈ ನಡುವೆ ಹಿಂದಿನ ಸಭೆಗಳಿಗೆ ತಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ಕೆಲವರು ವೇದಿಕೆಯಲ್ಲೇ ಆಕ್ರೋಶ ಹೊರಗೆಡಹಿದರು.

ಟಿ. ದಾಸರಹಳ್ಳಿ ಕ್ಷೇತ್ರದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಹಾಗೂ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಇದನ್ನು ಆಯೋಜಿಸಿದ್ದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ನಾಗಲಕ್ಷ್ಮಿ ಚೌಧರಿ. ನಾಗಲಕ್ಷ್ಮಿ ಚೌಧರಿ ಅವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಲ್ಪಟ್ಟವರು. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ವಿಚಾರಕ್ಕೆ ಸಂಬಂಧಿಸಿಯೂ ನಾಗಲಕ್ಷ್ಮಿ ಮತ್ತು ಡಿ.ಕೆ. ಶಿವಕುಮಾರ್‌ ಅವರ ಬಣದಲ್ಲಿ ಗುರುತಿಸಲ್ಪಟ್ಟ ಗೀತಾ ಶಿವರಾಮ್‌ ನಡುವೆ ಪೈಪೋಟಿ ನಡೆದಿತ್ತು.

ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಹಾಕಿದ ಫ್ಲೆಕ್ಸ್‌ ವಿಚಾರದಲ್ಲೂ ಬಣಬಡಿದಾಟ ಎದ್ದು ಕಾಣುತ್ತಿತ್ತು. ರಾಯಣ್ಣ ಪ್ರತಿಮೆ ಬಳಿ ಸ್ವತಃ ತಾವೇ‌ ಮುಂದೆ ನಿಂತು ಗೀತಾ ಶಿವರಾಮ್ ಫ್ಲೆಕ್ಸ್‌ ಹಾಕಿಸಿದ್ದರು. ಇದನ್ನು ಕಂಡ ನಾಗಲಕ್ಷ್ಮೀ ಚೌಧರಿ ಬಣದವರು, ಇಲ್ಲಿ ಯಾರ ಫ್ಲೆಕ್ಸೂ ಹಾಕುವಂತಿಲ್ಲ ಎಂದು ಗೀತಾ ಶಿವರಾಮ್ ಅವರು ಹಾಕಿದ್ದ ಫ್ಲೆಕ್ಸ್‌ನ್ನು ಕಿತ್ತು ಪಕ್ಕಕ್ಕೆ ಇಟ್ಟು ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಸಮಾರಂಭದಲ್ಲೂ ಭಿನ್ನಮತ
ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ಬಳಿಕ ಬೃಹತ್ ಸಮಾವೇಶ ಪ್ರಾರಂಭವಾಗಿತ್ತು‌‌. ಉಭಯ ನಾಯಕಿಯರು ವೇದಿಕೆ ಹೊರಗಡೆ ಭಿನ್ನಮತ ತೋರಿದರೂ ಕಾರ್ಯಕ್ರಮ ಪ್ರಾರಂಭದಲ್ಲೇ ಒಮ್ಮತದಂತೆ ಒಬ್ಬರನ್ನು ಒಬ್ಬರು ಅಪ್ಪಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದರು.

ಈ ನಡುವೆ, ಸಿದ್ದು ಬಣದ ನಾಗಲಕ್ಷ್ಮೀ ಚೌಧರಿ ತಾವೇ ಮುಂದಿನ ಅಭ್ಯರ್ಥಿ ಎಂಬಂತೆ ಅಬ್ಬರದ ಭಾಷಣ ಮಾಡಿದರು. ಭಾಷಣ ಮುಗಿಯುತ್ತಿದ್ದಂತೆಯೇ ಕಾರ್ಯಕರ್ತರ ಒತ್ತಾಯದ ಮೇರೆಗೆ ಗೀತಾ ಶಿವರಾಮ್ ಅವರನ್ನು ಭಾಷಣ ಮಾಡಲು ಆಹ್ವಾನಿಸಲಾಯಿತು. ಗೀತಾ ಶಿವರಾಮ್ ಭಾಷಣ ಮಾಡಲು ಮುಂದಾದಾಗ ನಾಗಲಕ್ಷ್ಮೀ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು‌.‌

ಇದನ್ನು ನೋಡಿದ ಸಿದ್ದರಾಮಯ್ಯ ಅವರಿಗೆ ಸಿಟ್ಟುಬಂತು. ಇದೇನಿದು ಎಂದು ನಾಗಲಕ್ಷ್ಮೀ ಚೌಧರಿ‌ ಎದುರು ತಮ್ಮ ಅಸಮಾಧಾನ ಹೊರಹಾಕಿದರು. ಇದೆಲ್ಲವನ್ನೂ ಗಮನಿಸಿದ ಗೀತಾ ಶಿವರಾಮ್ ಭಾಷಣ ಮೊಟಕುಗೊಳಿಸಿ, ಬೇಸರದಿಂದ ಕಣ್ಣೀರು ಹಾಕುತ್ತ ಹೊರ ನಡೆದರು.

ಕಾರ್ಯಕ್ರಮ ಕೊನೆಯಲ್ಲಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಗೀತಾ ಶಿವರಾಮ್ ಹೆಸರು ಪ್ರಸ್ತಾಪಿದರು. ಈ ವೇಳೆ ಗೀತಾ ಶಿವರಾಮ್ ವೇದಿಕೆ ಮೇಲಿರಲಿಲ್ಲ. ʻʻಅವರು ಇಲ್ವಾ? ಹೊರಟು ಹೋಗಿದ್ದಾರಾʼʼ ಎಂದು ಕೇಳಿ ನಗುತ್ತಾ ತಮ್ಮ ಭಾಷಣ ಮುಂದುವರೆಸಿದರು.

ʻನಾನು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಶಾಸಕ, ಮಂತ್ರಿ, ಡಿಸಿಎಂ, ಸಿಎಂ ಆಗಿದ್ದೇನೆ. ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಸರ್ಕಾರ ಬಂದ್ರೆ ಕನಕ ಭವನ‌ ಕಟ್ಟಿಸಲು ಎಷ್ಟು ಬೇಕೋ ಅಷ್ಟು ಹಣ ಕೊಡ್ತೇನೆʼʼ ಎನ್ನುವ ಮೂಲಕ ಸಿಎಂ‌ ಕನಸು ಬಿಚ್ಚಿಟ್ಟರು

ಒಂದೆಡೆ ಸ್ಥಳೀಯ‌ ಮುಖಂಡರಲ್ಲಿ ಭಿನ್ನಮತ, ಮತ್ತೊಂದೆಡೆ ರಾಜ್ಯ ನಾಯಕರ ಬಣಬಡಿದಾಟ ಮುಂದುವರಿದಿದೆ. ಇದರ ನಡುವೆಯೂ ಒಗ್ಗಟ್ಟು ಮೂಡಿಸಲು ಕಾಂಗ್ರೆಸ್ ಹೈಕಮಾಂಡ್ ಹರಸಾಹಸ ಪಡುತ್ತಿದೆ. ಹಾಗಾಗಿಯೇ ನಾಳೆ‌ ರಾಜ್ಯ ಕೈ‌ ನಾಯಕರ ಸಭೆಯನ್ನ ಹೈಕಮಾಂಡ್ ಕರೆದಿದೆ. ಸಭೆ ಬಳಿಕವಾದರೂ ಕೈ ಪಾಳೆಯದಲ್ಲಿ ಒಗ್ಗಟ್ಟು ಮೂಡುತ್ತಾ, ಅಥಾವ ಮುಂದುವರೆಯುತ್ತಾ ಎಂದು ಕಾದು‌ ನೋಡಬೇಕಿದೆ.

ಇದನ್ನೂ ಓದಿ | Karnataka Elections | ಚುನಾವಣಾ ತಂತ್ರಗಾರಿಕೆ ಶುರು: ಡಿ. 12ರಂದು ದಿಲ್ಲಿಗೆ ಬರುವಂತೆ ಕೈ ನಾಯಕರಿಗೆ ಹೈ ಬುಲಾವ್‌

Exit mobile version