ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜ್ಯದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನು ಮುಂಜಾನೆಯೇ ಅಮ್ಮ ಮತ್ತು ದೇವರ ಆಶೀರ್ವಾದ ಪಡೆದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಅವರದೇ ಊರಿನ ಪ್ರದೀಪ್ ಈಶ್ವರ್ ಕಾಂಗ್ರೆಸ್ ಅಭ್ಯರ್ಥಿ. ಇವರಿಬ್ಬರು ಬಾಲ್ಯದಿಂದಲೂ ಜತೆಗಿದ್ದವರು ಮತ್ತು ಪ್ರತಿಸ್ಪರ್ಧಿಗಳಾಗಿ ಬೆಳೆದವರು. ಹೀಗಾಗಿ ಸ್ಪರ್ಧಾಕಣದಲ್ಲಿ ಕುತೂಹಲ ಹೆಚ್ಚಿದೆ.
ತಾಯಿಯಿಂದ ಆಶೀರ್ವಾದ ಪಡೆದ ಸುಧಾಕರ್
ಸುಧಾಕರ್ ಅವರು ಚಿಕ್ಕಬಳ್ಳಾಪುರದ ಸ್ವಗ್ರಾಮವಾಗಿರುವ ಪೆರೇಸಂದ್ರಕ್ಕೆ ಭೇಟಿ ನೀಡಿ ಅಲ್ಲಿನ ತಮ್ಮ ನಿವಾಸದಲ್ಲಿ ತಾಯಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ತಾಯಿ ದಿವಂಗತ ಶಾಂತ ಭಾವಚಿತ್ರಕ್ಕೆ ಆರತಿ ಬೆಳಗಿದ ಅವರು ಆಶೀರ್ವಾದ ಪಡೆದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸಚಿವ ಸುಧಾಕರ್ ಟೆಂಪಲ್ ರನ್ ಕೂಡಾ ನಡೆಸಿದ್ದಾರೆ. ತಮ್ಮ ಮನೆ ದೇವರಾದ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್ ವಿಶೇಷ ಪೂಜೆ ಸಲ್ಲಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೆಯಲಗುರ್ಕಿ ಗ್ರಾಮದಲ್ಲಿರುವ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ಬಿ ಫಾರಂ ಇಟ್ಟು ಅರ್ಚನೆ ಮಾಡಿಸಿದರು.
ಸುಧಾಕರ್‌ಗೆ ಅನುಸೂಯಮ್ಮ ಬಲ
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪರಿಶ್ರಮ ನೀಟ್ ಅಕಾಡೆಮಿಯ ಸ್ಥಾಪಕ ಪ್ರದೀಪ್ ಈಶ್ವರ್ ಗೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಆರ್.ಎಲ್. ಜಾಲಪ್ಪ ಅವರ ಮೊಮ್ಮಗ ವಿನಯ ಶ್ಯಾಂ ಅವರು ಆಗಲೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮಾಜಿ ಕಾಂಗ್ರೆಸ್ ಶಾಸಕಿ ಅನುಸೂಯಮ್ಮ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಭಾನುವಾರ ರಾತ್ರೋ ರಾತ್ರಿ ಸಚಿವ ಸುಧಾಕರ್ ನಿವಾಸದಲ್ಲಿ ಅವರು ತಮ್ಮ ಬೆಂಬಲಿಗರೊಂದಿಗೆ ಕೈ ತೊರೆದು ಕಮಲ ಸೇರಿದರು.
ಪ್ರದೀಪ್ ವರ್ಸಸ್ ಸುಧಾಕರ್ ಸ್ಪರ್ಧೆಗೆ ಇದೆ ದೊಡ್ಡ ಇತಿಹಾಸವೇ
ಕಾಂಗ್ರೆಸ್‌ನಿಂದ ಪ್ರದೀಪ್ ಈಶ್ವರ್ ಅವರು ಡಾ. ಕೆ. ಸುಧಾಕರ್ ಅವರ ವಿರುದ್ಧ ಕಣಕ್ಕಿಳಿಯುವ ಆಸಕ್ತಿ ತೋರಲು ದೊಡ್ಡ ಕಾರಣವೂ ಇದೆ. ಪ್ರದೀಪ್ ಈಶ್ವರ್ ಕೂಡಾ ಡಾ. ಸುಧಾಕರ್ ಅವರ ಸ್ವಗ್ರಾಮ ಪೆರೇಸಂದ್ರವರೇ ಆಗಿದ್ದಾರೆ. ಅವರಿಬ್ಬರ ನಡುವೆ ಏನೋ ವೈಮನಸ್ಸು ಬೆಳೆದು ಸಚಿವ ಸುಧಾಕರ್ ಕಿರುಕುಳದಿಂದ ಪ್ರದೀಪ್ ಈಶ್ವರ್ ಜೈಲು ಸೇರಿದ್ದರು ಎನ್ನಲಾಗಿದೆ. ಸುಧಾಕರ್ ಕಾಟಕ್ಕೆ ಬೇಸತ್ತು ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿ ಸಾಕಷ್ಟು ಹೆಸರು ಸಂಪಾದಿಸಿದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪ್ಲ್ಯಾನ್ ಹಿಂದೆ ಇನ್ನೊಂದು ತಂತ್ರವೂ ಇದೆ. ಪ್ರದೀಪ್ ಅವರು ಬಲಿಜ ಸಮುದಾಯದವರು. ಚಿಕ್ಕಬಳ್ಳಾಪುರದಲ್ಲಿ ಬಲಿಜ ಮತದಾರರ ಸಂಖ್ಯೆಯೂ ದೊಡ್ಡದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Elections 2023: ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್; ಜಾಲಪ್ಪ ಮೊಮ್ಮಗ ಬಂಡಾಯ!