Site icon Vistara News

Karnataka Elections : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ದೇವರ ಮೊರೆ ಹೋದ ಅಭಿಮಾನಿ!

siddaramaiah Ayyappa

#image_title

ಯಾದಗಿರಿ: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (siddaramaiah) ಅವರು ತಾನು ಸ್ಪರ್ಧಿಸಲಿರುವ ವರುಣ ಕ್ಷೇತ್ರದಿಂದ ಪ್ರತಿಸ್ಪರ್ಧಿ ಯಾರು ಇರುತ್ತಾರೋ, ಕೋಲಾರದಿಂದ ಟಿಕೆಟ್‌ ಕೊಡುತ್ತಾರೋ ಇಲ್ಲವೋ, ಅಲ್ಲಿನ ಭಿನ್ನಮತಗಳ ನಡುವೆ ಗೆಲ್ಲೋದು ಹೇಗೆ ಎಂದೆಲ್ಲ ತಲೆಬಿಸಿ ಮಾಡಿಕೊಳ್ಳುತ್ತಿದ್ದರೆ ಇತ್ತ ಅಭಿಮಾನಿಗಳು ಮಾತ್ರ ಅದರ ಬಗ್ಗೆ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಳ್ಳದೆ ಅವರನ್ನು ಮುಖ್ಯಮಂತ್ರಿ ಮಾಡುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ.

ಕಾಂಗ್ರೆಸ್‌ ಬಹುಮತ ಪಡೆದರೂ ಮುಖ್ಯಮಂತ್ರಿ ಯಾರು? ಡಿ.ಕೆ. ಶಿವಕುಮಾರಾ? ಸಿದ್ದರಾಮಯ್ಯನಾ ಎನ್ನುವುದೇ ದೊಡ್ಡ ಸವಾಲಾಗಲಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಿದ್ದರಾಮಯ್ಯ ಅವರೇ ಗೆಲ್ಲಲಿ ಎನ್ನುವ ಹಾರೈಕೆಯೊಂದಿಗೆ ಅಭಿಮಾನಿಯೊಬ್ಬರು ದೇವರ ಮೊರೆ ಹೋಗಿದ್ದಾರೆ.

ಯಾದಗಿರಿಯ ಯುವ ಉದ್ಯಮಿಯೊಬ್ಬರು ಸಿದ್ದರಾಮಯ್ಯನವರ ಫೋಟೊ ಹಿಡಿದುಕೊಂಡು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಂಡು ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡಾ ಗುರುಮಣಿಕಂಠ ಎಂದು. ಅಯ್ಯಪ್ಪನ ಮೇಲೆ ಅಪರಿಮಿತ ನಂಬಿಕೆ ಹೊಂದಿರುವ ಗುರುಮಣಿಕಂಠ ಅವರು ಅಯ್ಯಪ್ಪ ಸ್ವಾಮಿ ತನ್ನ ಆಸೆ ಈಡೇರಿಸಿಬಿಡುತ್ತಾನೆ ಎನ್ನುವ ನಂಬಿಕೆಯಲ್ಲಿದ್ದಾರೆ.

ಸಿದ್ದರಾಮಯ್ಯ ಮತ್ತೆ ಪ್ರಚಂಡ ಬಹುಮತದಿಂದ ಗೆದ್ದು ಮತ್ತೆ ರಾಜ್ಯದಲ್ಲಿ ಸಿಎಂ ಆಗಬೇಕು ಎನ್ನುವುದು ಶಹಾಪುರದ ನಿವಾಸಿಯಾಗಿರುವ ಗುರುಮಣಿಕಂಠ ಅವರ ಪ್ರಮುಖ ಬೇಡಿಕೆ. ಅದರ ಜತೆಗೆ ಶಹಾಪುರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಅವರು ಮತ್ತೆ ಎಂಎಲ್ಎ ಆಗಬೇಕು. ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬಂದು ಶರಣಬಸಪ್ಪ ಅವರು ಮಂತ್ರಿಯಾಗಬೇಕು ಎನ್ನುವುದು ಗುರುಮಣಿಕಂಠ ಅವರ ಬೇಡಿಕೆ.

ಅವರೀಗ ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ಭಾವ ಚಿತ್ರ ಹಿಡಿದು ಕೇರಳದ ಅಯ್ಯಪ್ಪ ಸ್ವಾಮಿಯ ಮೊರೆ ಹೊಕ್ಕು ನಡೆಯುತ್ತಿದ್ದಾರೆ. ಇರುಮುಡಿ ಕಟ್ಟಿ ಹೊರಟಿರುವ ಅವರು ಅಷ್ಟಾಭೀಷಕ, ಪುಷ್ಪ ಅಭಿಷೇಕ ಪೂಜೆ ನಡೆಸಲಿದ್ದಾರೆ.

ಉದ್ಯಮಿ ಗುರು ಮಣಿಕಂಠ ಅವರಂತೆಯೇ ಇನ್ನೂ ಹಲವು ಅಭಿಮಾನಿಗಳು ಬೇರೆ ಬೇರೆ ರೀತಿಯ ಹರಕೆ ಹೊತ್ತು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿಯೇ ತೀರಬೇಕು ಎನ್ನುವ ಹಠದಲ್ಲಿದ್ದಾರೆ. ದೇವರು ಯಾವ ರೀತಿ ವರ ಕೊಡುತ್ತಾನೆ ನೋಡಬೇಕು. ದೇವರು ವರ ಕೊಡುವ ಮೊದಲು ಮತದಾರರ ದೇವರ ವರ ಬೇಕಾಗುತ್ತದೆ!

ಈ ನಡುವೆ ಶಬರಿಮಲೆಯ ಆಡಳಿತ ಮಂಡಳಿಯವರು ಈ ರೀತಿ ತಮ್ಮ ಇಷ್ಟದ ರಾಜಕಾರಣಿಗಳ ಭಾವಚಿತ್ರ ಹಿಡಿದುಕೊಂಡು ಮಲೆಗೆ ಬರಬೇಡಿ ಎಂದು ಆಗಲೇ ಸೂಚನೆಯೊಂದನ್ನು ನೀಡಿದೆ. ಈಗ ಹೀಗೆಲ್ಲ ಹಿಡಿದುಕೊಂಡು ಹೋದ ಫೋಟೊವನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ ಎಂದು ಕಾದು ನೋಡಬೇಕು.

ಇದನ್ನೂ ಓದಿ : IPL 2023: ‘ಕ್ರಿಕೆಟ್ ನನ್ನ ಇಷ್ಟದ ಆಟ’; ಆರ್​ಸಿಬಿ ಪಂದ್ಯ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Exit mobile version