ಚಿಕ್ಕಮಗಳೂರು: ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಸಂಬಂಧಿಸಿ ಚರ್ಚೆಗಾಗಿ ನಡೆದ ಸಭೆ ರಣಾಂಗಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕಪಾಳಮೋಕ್ಷ, ಹಿಗ್ಗಾಮುಗ್ಗ ಥಳಿತದಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಅವರನ್ನು ಎದುರಿಸಲು ಕಾಂಗ್ರೆಸ್ ಇನ್ನೂ ಟಿಕೆಟ್ ಫೈನಲ್ ಮಾಡಿಲ್ಲ. ಆರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಡಾ. ವಿಜಯಕುಮಾರ್, ಎ.ಎನ್. ಮಹೇಶ್, ಗಾಯತ್ರಿ ಶಾಂತೇಗೌಡ, ಮಹಡಿಮನೆ ಸತೀಶ್, ರೇಖಾ ಹುಲಿಯಪ್ಪ ಗೌಡ, ಡಿಎಚ್. ಹರೀಶ್ ಅವರು ಟಿಕೆಟ್‌ಗಾಗಿ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಕಾಂಗ್ರೆಸ್ ಹಿರಿಯ ನಾಯಕರು ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ, ಸಿ.ಟಿ. ರವಿ ಆಪ್ತರಾಗಿರುವ ಎಚ್.ಡಿ. ತಮ್ಮಯ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಎರಡನೇ ಪಟ್ಟಿಯಲ್ಲಿ ಅವರ ಹೆಸರು ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, ಆರೂ ಜನ ಆಕಾಂಕ್ಷಿಗಳು ಇದಕ್ಕೆ ಆಕ್ಷೇಪ ಹೊಂದಿದ್ದಾರೆ. ತಮ್ಮಲ್ಲೇ ಯಾರಿಗಾದರೂ ಟಿಕೆಟ್ ಕೊಡಿ ಎನ್ನುವುದು ಅವರ ಬೇಡಿಕೆ.
ಈ ನಡುವೆ ಚಿಕ್ಕಮಗಳೂರಿನ ಕಾಂಗ್ರೆಸ್ ಆಕಾಂಕ್ಷಿಗಳು ಮತ್ತು ಮುಖಂಡರ ಜತೆ ಮಾತನಾಡುವುದಕ್ಕಾಗಿ ಶನಿವಾರ ಸಭೆಯೊಂದನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕಾರ್ಯಕರ್ತರಿಗೂ ಆಹ್ವಾನವಿತ್ತು. ಸಭೆಗೆ ಕೆಪಿಸಿಸಿ ಸಂಯೋಜಕ ಪವನ್ ಕೂಡಾ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಮಂಜೇಗೌಡ ಅವರು ಮಾತು ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರ ನಡುವೆ ಭಾರಿ ಜಗಳ ಶುರುವಾಯಿತು. ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡಲೇಬಾರದು ಎಂದು ಒತ್ತಾಯಿಸಲಾಯಿತು. ಅದರ ಜತೆಗೆ ಕೆಲವು ಆಕಾಂಕ್ಷಿಗಳ ಬೆಂಬಲಿಗರು ಕೂಡಾ ಹೊಡೆದಾಡಿಕೊಂಡರು. ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿದರು. ಪರ ವಿರೋಧದ ಮಾತುಗಳ ನಡುವೆ ಬಡಿದಾಡುತ್ತಲೇ ಕಾರ್ಯಕರ್ತರು ಹೊರಗೆ ನಡೆದರು.
ಇಲ್ಲಿ ಪ್ರಮುಖವಾಗಿ ಮೂಲ ಮತ್ತು ವಲಸಿಗರ ನಡುವೆ ಅಸಮಾಧಾನ ಸ್ಫೋಟವಾಗಿದೆ. ನಾವೆಲ್ಲರೂ ಒಟ್ಟಾಗಿರೋಣ, ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸೋಣ ಎಂಬ ಸಮಾಧಾನದ ಮಾತು ಅವರ್ಯಾರಿಗೂ ಇಷ್ಟವಾಗಲಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ ಡಿಶುಂ ಶುರುವಾಯಿತು.
ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಹೊಡೆಯುತ್ತಿದ್ದ ದೃಶ್ಯದ ನಡುವೆ, ಕೆಪಿಸಿಸಿ ಸಂಯೋಜಕ ಪವನ್ ಮೇಲೂ ಹಲ್ಲೆ ನಡೆಯಿತು. ಪರೋಕ್ಷವಾಗಿ ಎಚ್.ಡಿ. ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿಕಾರಿದರು.
ʻʻಪಕ್ಷ ಒಗ್ಗಟ್ಟಾಗಿ ಹೋಗಲಿ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡೋಣ ಎಂದು ಮಂಜೇಗೌಡರು ಹೇಳಿದಾಗ ಯಾರಿಗೋ ಕೆಲಸ ಮಾಡಲು ಆಗುವುದಿಲ್ಲ ಎಂದು ಕಾರ್ಯಕರ್ತರು ಹೇಳಿದರು. ಅಂತಿಮವಾಗಿ ಪೊಲೀಸರೇ ಅವರನ್ನು ಬಿಡಿಸಬೇಕಾಯಿತು.
ಆಕಾಂಕ್ಷಿಗಳ ಪೈಕಿ ಗಾಯತ್ರಿ ಶಾಂತೇಗೌಡ ಅವರು ಸಭೆಗೆ ಬಂದಿರಲಿಲ್ಲ. ಉಳಿದಂತೆ ಎಲ್ಲರೂ ಬಂದು ಹೊಡೆದಾಡಿಕೊಂಡರು.
ಇದು ಚಿಕ್ಕಮಗಳೂರು ಕಾಂಗ್ರೆಸ್ ನಲ್ಲಿ ಭಿನ್ನಮತ ಮುಗಿಲುಮುಟ್ಟಿರುವುದನ್ನು ಎತ್ತಿ ತೋರಿಸಿದೆ. ಇಂಥ ಪರಿಸ್ಥಿತಿಯಲ್ಲೂ ಎಚ್.ಡಿ. ತಮ್ಮಯ್ಯ ಅವರನ್ನೇ ಕಾಂಗ್ರೆಸ್ ನೆಚ್ಚಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Karnataka Election 2023: ವರುಣದಲ್ಲಿ ಯತೀಂದ್ರ ಆ್ಯಕ್ಟಿವ್; ಹೋಬಳಿ ಮಟ್ಟದಲ್ಲಿ ರಣತಂತ್ರ, ಸಿಕ್ಕಿದೆ ಲಿಂಗಾಯತರ ಬೆಂಬಲ