ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Elections) ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಿದ ಆರೋಪದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮತದಾರರಿಗೆ ತವಾ ಹಂಚಿಕೆ ಮಾಡಿದ ಆರೋಪದಲ್ಲಿ ಕುಸುಮಾ, ಡಿ.ಕೆ ಸುರೇಶ್ ಹಾಗೂ ಜಗದೀಶ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ.
ಅಭ್ಯರ್ಥಿಯಾದ ಕುಸುಮಾ ಅವರ ಪರವಾಗಿ ಮತದಾರರಿಗೆ ತವಾ ಹಂಚಿಕೆ ಮಾಡುತ್ತಿರುವ ಬಗ್ಗೆ ಚುನಾವಣಾ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಿದ್ದಾರೆ. ಚುನಾವಣಾ ಅಧಿಕಾರಿಗಳನ್ನು ಕಂಡ ಕೂಡಲೇ ತವಾ ಹಂಚುತ್ತಿದ್ದವರು ಪರಾರಿಯಾಗಿದ್ದಾರೆ. ತವಾ ಹಂಚುತ್ತಿದ್ದವರಲ್ಲಿ ಒಬ್ಬ ಅಧಿಕಾರಿಗಳ ಕೈಗೆ ಸಿಕ್ಕಿದ್ದು ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಚುನಾವಣಾ ಅಧಿಕಾರಿಗಳು ಇವರು ಹಂಚಿದ ತವಾಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕುಸುಮಾ ಹಾಗೂ ಡಿ.ಕೆ.ಸುರೇಶ್ ಭಾವ ಚಿತ್ರಗಳಿರುವುದು ಪತ್ತೆಯಾಗಿದೆ.
3 ಕರ್ಟನ್ ಬಾಕ್ಸ್ ಹಾಗೂ 3 ತವಾ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಚುನಾವಣಾ ಅಧಿಕಾರಿಗಳಿಂದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚುನಾವಣಾ ಅಧಿಕಾರಿಗಳ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ಬೆಳಗಾವಿಯಲ್ಲಿ ಜಾರಕಿಹೊಳಿ ಕಾರು ತಡೆದ ಅಧಿಕಾರಿಗಳು
ಬೆಳಗಾವಿ: ಚುನಾವಣಾಧಿಕಾರಿಗಳು ಎಲ್ಲ ಕಡೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದು ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಕಾರನ್ನು ತಡೆದಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ನ ಕೊಣ್ಣೂರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದಾಗ ರಮೇಶ್ ಜಾರಕಿಹೋಳಿ ಕಾರು ಬಂದಿದ್ದು, ಅದನ್ನು ತಡೆದು ತಪಾಸಣೆ ನಡೆಸಲಾಗಿದೆ. ರಮೇಶ್ ಜಾರಕಿಹೊಳಿ ಕಾರು ಬೆಳಗಾವಿಯಿಂದ ಗೋಕಾಕ್ ಕಡೆ ತೆರಳುತ್ತಿತ್ತು. ಸಂಪೂರ್ಣ ತಪಾಸಣೆ ಮಾಡಿದ ಬಳಿಕವೇ ಚೆಕ್ ಪೋಸ್ಟ್ ಸಿಬ್ಬಂದಿ ಕಾರನ್ನು ಬಿಟ್ಟಿದ್ದಾರೆ.