Site icon Vistara News

Karnataka Elections : ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ ಬಿಎನ್ ಚಂದ್ರಪ್ಪ ನೇಮಕ, ಮತ್ತೊಂದು ದಲಿತಾಸ್ತ್ರ ಪ್ರಯೋಗ

BN Chandrappa

#image_title

ಬೆಂಗಳೂರು: ಒಂದು ದಿನದ ಹಿಂದಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಲು ಕೂಡಾ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸುವ ಮೂಲಕ ರಾಜ್ಯ ಚುನಾವಣೆಯಲ್ಲಿ ದಲಿತಾಸ್ತ್ರ ಪ್ರಯೋಗ ಮಾಡಲಾಗಿತ್ತು. ಇದೀಗ ಎರಡನೇ ಅಸ್ತ್ರ ಪ್ರಯೋಗಿಸಲಾಗಿದ್ದು, ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ (Congress Working president) ಬಿಎನ್ ಚಂದ್ರಪ್ಪ ನೇಮಕ ಮಾಡಲಾಗಿದೆ.

ಧ್ರುವ ನಾರಾಯಣ ಅವರ ನಿಧನದಿಂದ ತೆರವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ಎಡಗೈ ವರ್ಗಕ್ಕೆ ಸೇರಿದ ಬಿ.ಎನ್ ಚಂದ್ರಪ್ಪ ನೇಮಕ ಮಾಡಲಾಗಿದೆ. ಎಸ್ಸಿ ಲೆಫ್ಟ್‌ಗೆ ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಟ್ ಸ್ಥಾನ ನೀಡಬೇಕು ಎಂದು ನಾಯಕರಿಂದ ಒತ್ತಾಯ ಕೇಳಿಬಂದಿತ್ತು. ಇದೀಗ ಅವರ ಬೇಡಿಕೆಯನ್ನು ಈಡೇರಿಸುವ ಮೂಲಕ ಅವರಿಗೆ ನ್ಯಾಯ ನೀಡಿದಂತಾಗಿದೆ.

ಕಾಂಗ್ರೆಸ್‌ನಲ್ಲಿ ದಲಿತ ನಾಯಕರು ಸಾಕಷ್ಟು ಇದ್ದಾರಾದರೂ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಮುನಿಯಪ್ಪ ಸೇರಿದಂತೆ ಪ್ರಮುಖ ನಾಯಕರೆಲ್ಲ ಪರಿಶಿಷ್ಟ ಬಲಗೈ ಸಮುದಾಯಕ್ಕೆ ಸೇರಿದವರು. ಎಚ್.‌ ಆಂಜನೇಯ ಸೇರಿದಂತೆ ಕೆಲವು ನಾಯಕರು ಮಾತ್ರ ಎಡಗೈ ವರ್ಗಕ್ಕೆ ಸೇರಿದವರು.

ಈ ನಡುವೆ, ಬಿಜೆಪಿ ಪರಿಶಿಷ್ಟರಲ್ಲಿನ ಎಡಗೈ ವರ್ಗವನ್ನು ಸೆಳೆಯಲು ಇತ್ತೀಚೆಗೆ ಒಳಮೀಸಲಾತಿಯನ್ನು ಪ್ರಕಟಿಸಿತ್ತು.

ಎಡಗೈ ವರ್ಗಕ್ಕೆ 6%: ಇದರಡಿ ಬರುವ ಜಾತಿಗಳು: ಆದಿದ್ರಾವಿಡ, ಭಾಂಬಿ, ಮಾದಿಗ, ಸಮಗಾರ
ಬಲಗೈ ವರ್ಗ – 5.5%: ಇದರಡಿ ಬರುವ ಜಾತಿಗಳು; ಆದಿ ಕರ್ನಾಟಕ, ಚಲವಾದಿ, ಚನ್ನದಾಸರ, ಹೊಲೆಯ, ಮಹಾರ್‌
ಸ್ಪರ್ಶ್ಯ ವರ್ಗ – 4.5%: ಬಂಜಾರ ಮತ್ತು ಅವುಗಳಿಗೆ ಸಮನಾದ ಜಾತಿಗಳು, ಭೋವಿ ಮತ್ತು ಸಮನಾದ ಜಾತಿಗಳು, ಕೊರಚ, ಕೊರಮ ಮತ್ತು ಇತರ ನಾಲ್ಕು ಜಾತಿಗಳು
ಗ್ರೂಪ್‌ 4- 1%: ಮೇಲಿನ ಮೂರೂ ಗುಂಪುಗಳಲ್ಲಿ ಬಾರದಿರುವ ಜಾತಿಗಳು, ಅಸ್ಪೃಶ್ಯರು ಮತ್ತು ಇತರ 89 ಜಾತಿಗಳು ಇದರಲ್ಲಿ ಎಡಗೈ ವರ್ಗಕ್ಕೆ ಹೆಚ್ಚು ಮೀಸಲಾತಿ ನೀಡಿದ್ದರಿಂದ ಅವರು ಬಿಜೆಪಿ ಕಡೆಗೆ ವಾಲಬಹುದೇ ಎಂಬ ಆತಂಕ ಕಾಂಗ್ರೆಸ್‌ಗೆ ಇತ್ತು. ಹೀಗಾಗಿ ಬ್ಯಾಲೆನ್ಸಿಂಗ್‌ ಕೆಲಸವನ್ನು ಪಕ್ಷ ಮಾಡಿದೆ.

ಒಂದು ಕಡೆ ಬಲಗೈಯ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಆಫರ್‌ ನೀಡುವ ಮೂಲಕ ಬಲಗೈ ಸೇರಿದಂತೆ ಸಮಸ್ತ ದಲಿತರನ್ನು, ಚಂದ್ರಪ್ಪ ಅವರಿಗೆ ಕಾರ್ಯಾಧ್ಯಕ್ಷ ಹುದ್ದೆ ನೀಡುವ ಮೂಲಕ ಎಡಗೈ ವರ್ಗವನ್ನು ಸಂತೃಪ್ತಿಗೊಳಿಸಿದಂತೆ ಕಾಣುತ್ತಿದೆ. ಚುನಾವಣೆಯಲ್ಲಿ ಸಣ್ಣ ಸಣ್ಣ ನಡೆಗಳು ಕೂಡಾ ಮಹತ್ವದ್ದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಬಿ.ಎನ್‌. ಚಂದ್ರಪ್ಪ ಅವರ ರಾಜಕೀಯ ಹಿನ್ನೆಲೆ

ಬಿ.ಎನ್‌. ಚಂದ್ರಪ್ಪ ಅವರು 2014ರಿಂದ 2019ರವರೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಚಿಕ್ಕಮಗಳೂರಿನ ಲಕ್ಕವಳ್ಳಿಯಲ್ಲಿ ನಾಗಪ್ಪ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾಗಿ 1955ರ ಅಕ್ಟೋಬರ್‌ 1ರಂದು ಹುಟ್ಟಿದ ಅವರು, ಸೋಷಿಯಾಲಜಿಯಲ್ಲಿ ಎಂಎ ಮಾಡಿದ್ದಾರೆ.

1986ರಿಂದ 1991ರವರೆಗೆ ಚಿಕ್ಕಮಗಳೂರು ಜಿಲ್ಲಾಪಂಚಾಯಿತಿ ಸದಸ್ಯರಾಗಿದ್ದ ಅವರು, ಮುಂದಿನ ಹಂತದಲ್ಲಿ ಮರು ಆಯ್ಕೆಯಾಗಿ ಉಪಾಧ್ಯಕ್ಷರಾದರು. 2001-2003ರಲ್ಲಿ ಲಿಡ್ಕರ್‌ ಮಂಡಳಿಯ ಅಧ್ಯಕ್ಷರಾಗಿದ್ದರು. ಸಂಸದರಾಗಿದ್ದಾಗ ಹಲವು ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದರು.

ಇದನ್ನೂ ಓದಿ : Karnataka Elections : ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ

Exit mobile version