Site icon Vistara News

Karnataka Elections : ಮರಾಠಿ ಓಲೈಕೆ ಡ್ಯಾಮೇಜ್‌ ಕಂಟ್ರೋಲ್‌; ಶಿವಾಜಿ ಬಳಿಕ ಈಗ ಬಸವೇಶ್ವರ ಮೂರ್ತಿ ಸ್ಥಾಪನೆ ಪ್ಲ್ಯಾನ್‌

Shivaji statue

#image_title

ಬೆಳಗಾವಿ: ರಾಜಹಂಸಗಢ ಕೋಟೆಯಲ್ಲಿ ಸ್ಥಾಪಿಸಿದ ಶಿವಾಜಿ ಪ್ರತಿಮೆಯನ್ನು (Shivaji statue) ಉದ್ಘಾಟಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಗೆದ್ದು ಬೀಗಿದ ಅನುಭವ ಪಡೆದರು. ಇದರಿಂದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಹಿಮ್ಮೆಟ್ಟಿಸಿದೆವು ಎಂಬ ಖುಷಿ ಅನುಭವಿಸಿದರು. ಆದರೆ, ಇದು ಅವರಿಗೇ ತಿರುಗುಬಾಣವಾಗಿದೆ. ರಾಜ್ಯ ಸರ್ಕಾರ ಮತ್ತು ಬಿಜೆಪಿ ಶಿವಾಜಿ ಪ್ರತಿಮೆ ಹೆಸರಿನಲ್ಲ ಮರಾಠಿ ಓಲೈಕೆಗೆ ಮುಂದಾಗಿದೆ ಎಂಬ ಆಪಾದನೆ ಕೇಳಿಬಂದಿದೆ. ಈ ಹಾನಿಯನ್ನು ತಪ್ಪಿಸಲು ಸರ್ಕಾರ ಇದೀಗ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಸವೇಶ್ವರ ಪ್ರತಿಮೆ ಹಾಗೂ ಬಸವಾದಿ ಶರಣರ ಚರಿತ್ರೆ ಸಾರುವ ಯೋಜನೆಗೆ ಶಂಕುಸ್ಥಾಪನೆ ಮಾಡಲು ಮುಂದಾಗಿದೆ!

ರಾಜಹಂಸಗಡ ಕೋಟೆ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ, ಕೋಟೆ ಅಭಿವೃದ್ಧಿಗೆ ಸಿಎಂ 5 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಬಿಜೆಪಿ ಸರ್ಕಾರಕ್ಕೆ ಕಸಿವಿಸಿಗೊಂಡಿದೆ. ಅದರ ಹಿನ್ನೆಲೆಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲೆಂದು ಹೊಸ ಪ್ಲ್ಯಾನ್‌ ಮಾಡಿದೆ.

ಇದರ ಭಾಗವಾಗಿ ಮಾರ್ಚ್ 15ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿ ‌ನೂತನ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕಲಿದ್ದಾರೆ. ಇಲ್ಲಿ ಈಗಾಗಲೇ ಒಂದು ಮೂರ್ತಿ ಇದೆ. ಅದು ಹಳೆಯದಾಗಿದ್ದು, ಅದನ್ನು ತೆಗೆದು 15 ಅಡಿ ಎತ್ತರದ ನೂತನ ಜಗಜ್ಯೋತಿ ಬಸವೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕಲು ನಿರ್ಧರಿಸಲಾಗಿದೆ.

15 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಮತ್ತು ಅಡಿಗಟ್ಟು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದಲ್ಲದೇ 5 ಕೋಟಿ ವೆಚ್ಚದ ಕಾಮಗಾರಿಗೂ ಸಿಎಂ‌ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಅನುಭವ ಮಂಟಪ, ಬಸವಾದಿ ಶರಣರ ಚರಿತ್ರೆ ಸಾರುವ ಸ್ತಬ್ಧ ಚಿತ್ರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ.

ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಅವರು ಕೋಟೆಯ ಅಭಿವೃದ್ಧಿಗೆ 5 ಕೋಟಿ ಅನುದಾನ ಘೋಷಿಸಿದ್ದರು. ಇದು ಮರಾಠಿ ಮತಗಳ ಓಲೈಕೆಗೆ ಅನುದಾನ ಘೋಷಣೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕರ್ನಾಟಕದ ಮಹನೀಯರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಇದನ್ನೂ ಓದಿ : Shivaji statue : ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಗೈರು

Exit mobile version