ಬೆಂಗಳೂರು: ಮಹಿಳಾ ಸಬಲೀಕರಣ, ಆರೋಗ್ಯ ಚೈತನ್ಯ, ಸೇರಿದಂತೆ ಮುಂದಿನ ವಿಧಾನಸಭಾ ಚುನಾವಣೆಯ (Karnataka Elections) ಬಳಿಕ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅನುಷ್ಠಾನಗೊಳಿಸುವ 12 ಭರವಸೆಗಳನ್ನು ಪ್ರಕಟಿಸಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಶನಿವಾರ ಪದ್ಮನಾಭ ನಗರದ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಭರವಸೆಗಳನ್ನು ಪ್ರಕಟಿಸಿದರು. ಇದು ಚುನಾವಣಾ ಪ್ರಣಾಳಿಕೆಯಲ್ಲ. ಪ್ರಣಾಳಿಕೆಯನ್ನು ಮುಂದಿನ ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ನಾನು 12 ಭರವಸೆಗಳನ್ನು ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ʻʻಅಲ್ಪಸಂಖ್ಯಾತರಿಗೆ ಏನೇನು ಮಾಡಬೇಕು ಎನ್ನುವ ಬಗ್ಗೆ ಒಂದು ಸಮಿತಿ ನೇಮಕ ಮಾಡಿ ಅದು ಕೊಟ್ಟ ವರದಿ ಜಾರಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಬಗ್ಗೆ ಏನು ಮಾಡಿದ್ದಾರೆ ಅಂತ ವಿವರವಾಗಿ ಹೇಳಿದ್ದಾರೆ. ಪ್ರಣಾಳಿಕೆ ಬಿಡುಗಡೆ ಬೇರೆ ದಿನ ಆಗುತ್ತದೆ. ಇಂದು ಕಾರ್ಯಕ್ರಮಗಳ ಭರವಸೆ ಮಾತ್ರ ಇಂದು ಹಂಚಿಕೊಳ್ಳುತ್ತೇನೆʼʼ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಎಚ್.ಡಿ ಕುಮಾರಸ್ವಾಮಿ ಅವರು, ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬಾಕಿ ಉಳಿದ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದರು.
ಟಿಕೆಟ್ ವಿಚಾರದಲ್ಲಿ ಕೆಲವೊಂದು ಹೈ ಡ್ರಾಮಾಗಳು ನಡೆಯುತ್ತಿವುದು ನನಗೆ ಗೊತ್ತಿದೆ. ಅದರೆ, ಉಳಿದ ಅಭ್ಯರ್ಥಿಗಳ ಆಯ್ಕೆಯಲ್ಲಿ ನನ್ನದು ಯಾವುದೇ ತಕರಾರಿಲ್ಲ. ಬೇರೆ ಯಾವುದಕ್ಕೂ ನಾನು ಕೈ ಹಾಕಲ್ಲ. ಕುಮಾರಸ್ವಾಮಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡ್ತೀನಿ ಎಂದು ಕೇಳಿಕೊಂಡರು ದೇವೇಗೌಡರು.
ದೇವೇಗೌಡರು ಘೋಷಿಸಿದ 12 ಭರವಸೆಗಳು
1. ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ
2.ಕನ್ನಡವೇ ಮೊದಲು
3.ಶಿಕ್ಷಣವೇ ಆಧುನಿಕ ಶಕ್ತಿ
4.ಆರೋಗ್ಯ ಸಂಪತ್ತು
5.ರೈತ ಚೈತನ್ಯ
6. ಹಿರಿಯ ನಾಗರಿಗರಿಕೆ ಸನ್ಮಾನ
7. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
8. ಯುವಜನ ಸಬಲೀಕರಣ
9. ವಿಕಲ ಚೇತನರಿಗೆ ಆಸರೆ
10. ಆರಕ್ಷಕರಿಗೆ ಅಭಯ
11. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
12.ವೃತ್ತಿ ನಿರತ ವಕೀಲರ ಅಭ್ಯುದಯ
ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ
ʻʻನಾನು ಪ್ರಧಾನಿಯಾಗಿದ್ದಾಗ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಿದ್ದೆ. ಹೆಣ್ಣು ಮಕ್ಕಳಿಗೆ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು. ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ. 13ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟು ನಾನು ಪ್ರಧಾನಿಯಾಗಿದ್ದೆ. ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆ ರೀತಿ ಅಲ್ಲ. ನಾನು ಜನರಿಂದಲೇ ಆಯ್ಕೆಯಾದವನು” ಎಂದು ಹೇಳಿದರು ದೇವೇಗೌಡರು.
ʻʻನಾನು ನನ್ನ ಸಮಾಜವಾದ ಒಕ್ಕಲಿಗರಿಗೆ 4% ಕೊಟ್ಟು, ಮುಸ್ಲಿಮರಿಗೆ 4% ಮೀಸಲಾತಿ ನೀಡಿದ್ದೆ. 1% ಉಳಿದ ಸಣ್ಣ ಸಮುದಾಯಗಳಿಗೆ ನೀಡಿದ್ದೆ. ಪ್ರಧಾನಿಗಳಾಗಿದ್ದ ಚಂದ್ರಶೇಖರ್ ಅವರ ಕೈ ಕಾಲು ಹಿಡಿದು ವಾಲ್ಕೀಕಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದೆ. ನಾನು ಯಾರಿಗೂ ಕೇಡು ಬಯಸಿಲ್ಲʼʼ ಎಂದು ದೇವೇಗೌಡರು ಹೇಳಿದರು.