Site icon Vistara News

Karnataka Elections 2023 : ದೇವೇಗೌಡರಿಗಾಗಿ ಹಾಸನ ಟಿಕೆಟ್‌ ತ್ಯಾಗ ಮಾಡಿದ್ದೇವೆ, ಹೊಡೆದಾಡುವ ಪ್ರಶ್ನೆಯೇ ಇಲ್ಲ ಎಂದ ರೇವಣ್ಣ

JDS press meet

#image_title

ಬೆಂಗಳೂರು: ʻʻದೇವೇಗೌಡರಿಗಾಗಿ ಹಾಸನ ಟಿಕೆಟನ್ನು (Hasana JDS Ticket) ತ್ಯಾಗ ಮಾಡಿದ್ದೇವೆ. ನನಗೆ ನಮ್ಮ ತಂದೆ ಮುಖ್ಯ. ಅವರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇವೆʼʼ- ಹೀಗೆಂದು ಹೇಳಿದ್ದಾರೆ ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ.

ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಸಂಬಂಧಿಸಿ 49 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡ ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ವಿಸ್ತಾರ ನ್ಯೂಸ್‌ ಜತೆ ಮಾತನಾಡಿದರು. ಎರಡನೇ ಪಟ್ಟಿಯಲ್ಲಿ ಹಾಸನದ ಟಿಕೆಟನ್ನು ಎಚ್.ಪಿ ಸ್ವರೂಪ್‌ ಅವರಿಗೆ ಘೋಷಿಸಲಾಗಿದೆ. ಈ ಟಿಕೆಟ್‌ಗಾಗಿ ಭವಾನಿ ರೇವಣ್ಣ ಅವರು ತೀವ್ರ ಹೋರಾಟವನ್ನು ನಡೆಸಿದ್ದರು. ಎಚ್.ಡಿ. ರೇವಣ್ಣ ಅವರು ಬೆಂಬಲಿಸಿದ್ದರು.

ಹಾಸನದ ಹಾಲಿ ಶಾಸಕ ಪ್ರೀತಂ ಗೌಡ ಹಾಕಿದ ಸವಾಲನ್ನು ಎದುರಿಸಲು ತಾನೇ ಕಣಕ್ಕಿಳಿಯುತ್ತೇನೆ ಎನ್ನುವ ಹಠವನ್ನು ಭವಾನಿ ಪ್ರದರ್ಶಿಸಿದ್ದರು. ಆದರೆ, ಮಾಜಿ ಸಿಎಂ ಎಚ್.‌ಡಿ ಕುಮಾರಸ್ವಾಮಿ ಅವರು ಎಚ್.ಪಿ ಸ್ವರೂಪ್‌ ಅವರ ಪರವಾಗಿ ಆರಂಭದಿಂದಲೂ ನಿಂತಿದ್ದರು. ಕೊನೆಗೆ ದೇವೇಗೌಡರೇ ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಇತಿಶ್ರೀ ಹಾಡಿದ್ದು ಒಂದು ಹಂತಕ್ಕೆ ವಿವಾದ ತಣ್ಣಗಾದಂತಾಗಿದೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡೇ ಕುಮಾರಸ್ವಾಮಿ ಟಿಕೆಟ್‌ ಘೋಷಣೆ ಮಾಡಿದರು. ಒಂದು ಹಂತದಲ್ಲಿ ಎಚ್.ಡಿ. ರೇವಣ್ಣ ಅವರ ಮೂಲಕವೇ ಎಚ್‌.ಪಿ ಸ್ವರೂಪ್‌ ಹೆಸರು ಪ್ರಕಟಿಸಲು ಕುಮಾರಸ್ವಾಮಿ ಮುಂದಾದರು. ಆದರೆ, ಎಚ್‌.ಡಿ. ರೇವಣ್ಣ ಅವರು ಮಾತ್ರ ಈ ವಿವಾದದ ಹಿಂದಿನ ವಿಚಾರಗಳನ್ನಷ್ಟೆ ಪ್ರಸ್ತಾಪಿಸಿ ಮೈಕ್‌ ದಾಟಿಸಿದರು.

ಇದೆಲ್ಲ ವಿದ್ಯಮಾನಗಳ ಬಳಿಕ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ರೇವಣ್ಣ ಅವರು ತಾನು ಮನಸ್ಸಿದ್ದು ಒಪ್ಪಿದ್ದಲ್ಲ, ದೇವೇಗೌಡರಿಗಾಗಿ ಒಪ್ಪಿದ್ದೇನೆ ಎಂದು ಸ್ಪಷ್ಟಪಡಿಸಿದರು.

ʻʻʻದೇವೇಗೌಡರ ಮಕ್ಕಳು ಹೊಡೆದಾಡ್ತಾರೆ ಅಂದುಕೊಂಡರೆ ಅಂಥವರಿಗೆ ನಿರಾಸೆ ಆಗುತ್ತದೆ. ಹೊಡೆದಾಡುವ ಪ್ರಶ್ನೆಯೇ ಇಲ್ಲ.. ನಮ್ಮ ತಂದೆ ಮುಖ್ಯ ನನಗೆ. ಅವರು ಏನು ಹೇಳ್ತಾರೋ ಅದನ್ನ ಪಾಲಿಸುತ್ತೇನೆʼʼ ಎಂದರು.

ʻʻಭವಾನಿ ಮೇಡಂಗೆ ರಾಜ್ಯದಲ್ಲಿ ತಮ್ಮದೇ ಆದ ಶಕ್ತಿ ಇದೆ. ಹಾಸನದಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಆ ದುಷ್ಟ ಶಕ್ತಿ ವಿರುದ್ಧ ಹೋರಾಡಲು ಎರಡು ವರ್ಷಗಳಿಂದ ಕೆಲಸ ಮಾಡಿದರುʼʼ ಎಂದು ಹೇಳಿದ ಅವರು, ನನಗೆ ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರಿಗೋಸ್ಕರ ನಾವು ತ್ಯಾಗ ಮಾಡಿದ್ದೇವೆ. ದೇವೇಗೌಡರ ನಿರ್ಧಾರವೇ ಅಂತಿಮ ಎಂದರು. ʻʻಪ್ರೀತಂ ಗೌಡ ಅವರು ಸವಾಲನ್ನು ಜನರಿಗೇ ಬಿಟ್ಟಿದ್ದೇವೆʼʼ ಎಂದು ಹೇಳಿದರು.

ʻʻನಾವು ದೇವೇಗೌಡರ ಶಕ್ತಿ ಮೇಲೆ ರಾಜಕಾರಣ ಮಾಡಿದ್ದೇವೆ. ಹಾಸನದಿಂದ ಆರು ಸ್ಥಾನ ಗೆಲ್ಲಲು ದೇವೇಗೌಡರ ಅನುಭವ ಮತ್ತು ಶ್ರಮ ಕಾರಣ. ದೇವೇಗೌಡರ ರಾಜಕಾರಣ ಮುಗೀತು ಅಂತ ಹೇಳಿದಾಗಲೂ ಸಂಸದ ಸ್ಥಾನ ಗೆದ್ದಿದ್ದಾರೆ. ಬಳಿಕ ರಾಜ್ಯದಲ್ಲಿ ಸರ್ಕಾರ ಬರಲು ಕಾರಣವಾಯಿತು. ಮುಸ್ಲಿಮರಿಗೆ ನಾವು ಕೊಟ್ಟ ಮೀಸಲಾತಿಯನ್ನು ಈಗ ಬಿಜೆಪಿ ಕಿತ್ತು ಹಾಕಿದೆʼʼ ಎಂದರು.

ಮನಸ್ಸಿಲ್ಲದ ಮನಸಿನಿಂದ ಒಪ್ಪಿದ ರೇವಣ್ಣ

ಈ ನಡುವೆ, ಎಚ್‌.ಪಿ ಸ್ವರೂಪ್‌ಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ರೇವಣ್ಣ ಕುಟುಂಬ ಪೂರ್ಣ ಮನಸಿನಿಂದ ಒಪ್ಪಿಲ್ಲ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಟಿಕೆಟ್‌ ಘೋಷಣೆ ಮಾಡುವ ವೇಳೆ, ʻʻಭವಾನಿ ರೇವಣ್ಣ ಅವರೇ ನನಗೆ ಫೋನ್‌ ಮಾಡಿ ಹೇಳಿದರು. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಸ್ವರೂಪ್‌ ಅವರನ್ನು ಹಾಸನದ ಅಭ್ಯರ್ಥಿಯಾಗಿ ಘೋಷಿಸುತ್ತಿದ್ದೇನೆʼʼ ಎಂದು ಹೇಳಿದ್ದರು.

ಆದರೆ, ರೇವಣ್ಣ ಮಾತ್ರ ಅಷ್ಟೇನೂ ಖುಷಿಯಿಂದ ಇದ್ದಂತೆ ಕಾಣಲಿಲ್ಲ.‌ ಅವರು ಟಿಕೆಟ್ ಘೋಷಣೆ ಬಳಿಕ ಸಪ್ಪೆಗೆ ಹೊರಟರು. ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ತಾನು ಪಕ್ಷ ಸೇರುವಾಗ ಜತೆಗಿರಿ ಎಂದು ಹೇಳಿದರು ಆಗ ರೇವಣ್ಣ ಅವರು, ಎಂಪಿ ಕುಮಾರಸ್ವಾಮಿ ಕೈಹಿಡಿದುಕೊಂಡ್ರು ಒಳ್ಳೆಯದಾಗ್ಲಿ ಎಂದು ಹೇಳಿ ಹೊರಟರು!

ಇದನ್ನೂ ಓದಿ : Karnataka Elections: ಜೆಡಿಎಸ್‌ 2ನೇ ಪಟ್ಟಿ ಪ್ರಕಟ, ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌, ವೈಎಸ್‌ವಿ ದತ್ತಗೂ ಸಿಕ್ತು ಚಾನ್ಸ್

Exit mobile version