Site icon Vistara News

Karnataka Election : ನಾನು ಎರಡು ಕಡೆ ಸ್ಪರ್ಧೆ ಮಾಡಲ್ಲ, ಒಂದೇ ಕಡೆ ನಿಲ್ಲೋದು: ಸಿದ್ದರಾಮಯ್ಯ ಸ್ಪಷ್ಟನೆ

Former CM Siddaramaiah

Former CM Siddaramaiah

ಹಾಸನ: ಮುಂಬರುವ ಚುನಾವಣೆಯಲ್ಲಿ (Karnataka Election) ನಾನು ಎರಡೆರಡು ಕಡೆ ಸ್ಪರ್ಧೆ ಮಾಡುವುದಿಲ್ಲ, ನಾನು ಒಂದೇ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣದಲ್ಲಿ ಸ್ಪರ್ಧೆ ಮಾಡಲಿ ತಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಂಡ್ಯದ ಚೊಟ್ಟನಹಳ್ಳಿ ಆದಿ ಶಕ್ತಿ ದೇವಿಯು ಅರ್ಚಕರ ಮೈಮೇಲೆ ಬಂದು ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಅರಕಲಗೂಡು ತಾಲೂಕಿನ ಮುದಗನೂರು ಗ್ರಾಮದಲ್ಲಿ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು.

ನಾನು ಎರಡು ಕಡೆ ಸ್ಪರ್ಧೆ ಮಾಡುತ್ತೇನೆ ಎಂಬುದು ವರುಣ ಶಾಸಕ, ಪುತ್ರ ಯತೀಂದ್ರನ ಅಭಿಪ್ರಾಯವಾಗಿದೆ. ಅದು ನನ್ನ ಅಭಿಪ್ರಾಯ ಅಲ್ಲ. ನನ್ನ ಅಭಿಪ್ರಾಯ ಏನೇ ಇದ್ದರೂ ಒಂದೇ ಕಡೆ ಸ್ಪರ್ಧೆ ಮಾಡುವುದಾಗಿದೆ. ಪಾಪ‌ ಅವರು ತಂದೆ ಮೇಲಿನ ಪ್ರೀತಿಯಿಂದ ಕ್ಷೇತ್ರದಲ್ಲಿ ನಿಲ್ಲಲಿ ಎಂದು ಕರೆಯುತ್ತಾ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಸಿಕ್ಕಿಬಿದ್ದಿದ್ದು ಗುಜರಾತ್‌ನಲ್ಲಿ: 1500 ಕಿ.ಮೀ ಚೇಸ್‌ ಮಾಡಿ ಹಿಡಿದ ಪೊಲೀಸರು

ತಮ್ಮನ್ನು ಹರಕೆಯ ಕುರಿ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮ ಪಾರ್ಟಿಯವರಾ? ವಿರೋಧ ಪಕ್ಷದವರು ಏನೇ ಮಾಡಿದರೂ ಹೇಳೇ ಹೇಳುತ್ತಾರೆ. ಅದಕ್ಕೆ ನನ್ನ ಪ್ರತಿಕ್ರಿಯೆ ಇಲ್ಲ. ಯಾರೂ ನನ್ನನ್ನು ಹರಕೆ ಕುರಿ ಮಾಡಲು ಸಾಧ್ಯವಿಲ್ಲ. ಅದನ್ನೆಲ್ಲ ಜನ ತೀರ್ಮಾನ ಮಾಡುತ್ತಾರೆ. ಮತದಾರರು ಯಾರ ಜೇಬಿನಲ್ಲೂ ಇಲ್ಲ. ಕುಮಾರಸ್ವಾಮಿ ಜೇಬಿನಲ್ಲೂ ಇಲ್ಲ, ಇನ್ನೊಬ್ಬರ ಜೇಬಿನಲ್ಲೂ ಇಲ್ಲ. ಅದು ಜನರ ತೀರ್ಮಾನ ಎಂದು ಉತ್ತರಿಸಿದರು.

ಜೆಡಿಎಸ್‌ನವರು ಗೆದ್ದೆತ್ತಿನ ಬಾಲ ಹಿಡಿಯುವವರು
ನಾನು ಜೆಡಿಎಸ್‌ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಏಕೆಂದರೆ ಅವರು ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ. ಅವರು ಗೆದ್ದೆತ್ತಿನ ಬಾಲ‌ವನ್ನು ಹಿಡಿಯುವವರು. ಅವರಿಂದ ರಾಜ್ಯಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಅರಕಲಗೂಡು ತಾಲೂಕಿನ ಬೆಳಗೂಲಿ ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿದೆ. ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ. ಈ ದೇಶಕ್ಕಾಗಿ ಹೋರಾಟ ಮಾಡಿ ಬಲಿದಾನ ಮಾಡಿದವರು ಕಾಂಗ್ರೆಸ್‌ನವರು. ಆರ್‌ಎಸ್‌ಎಸ್‌, ಸಂಘ ಪರಿವಾರದವರು ಯಾರಾದರೂ ಬಲಿದಾನ ಮಾಡಿದ್ದಾರಾ ತೋರಿಸಿ? ಆರ್‌ಎಸ್ಎಸ್ ಅನ್ನು ಕೆ.ಬಿ. ಹೆಡ್ಗೆವಾರ್ ಸ್ಥಾಪಿಸಿದರು. ಆಗ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಾವು ಇತ್ತು. ಆದರೆ, ಯಾರೂ ಕೂಡ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ. ಅವರಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಂತೆ. ಯಾರಾದರೂ ಒಬ್ಬರಾದರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ತೋರಿಸಿ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ | BCCI President | ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ನಿರಾಳ; ಸ್ವಹಿತಾಸಕ್ತಿ ದೂರಿನಿಂದ ಮುಕ್ತಿ

ಇಂಥ ಭ್ರಷ್ಟ ಸರ್ಕಾರ ನೋಡಿಲ್ಲ
ಏಪ್ರಿಲ್, ಮೇನಲ್ಲಿ ಚುನಾವಣೆ ಬರಲಿದೆ. ರಾಜಕಾರಣ ಇವತ್ತು ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಬಿಜೆಪಿ ಜನತೆ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ‌ ಮೂಲಕ ಆಡಳಿತ ನಡೆಸುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ‌ ಸರ್ಕಾರ ಬರೀ ಲೂಟಿ ಹೊಡೆಯುತ್ತಿದೆ. 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಂತಹ ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೊಟ್ಟ ಭರವಸೆ ಈಡೇರಿಸಿದ್ದೇನೆ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಬಿಟ್ಟರೆ ಇಡೀ ಐದು ವರ್ಷ ಮುಖ್ಯಮಂತ್ರಿಯಾಗಿ ಅವಧಿ ಪೂರೈಸಿರುವುದು ನಾನೇ ಆಗಿದ್ದೇನೆ. 165 ಭರವಸೆಗಳನ್ನು ಕೊಟ್ಟಿದ್ದೆ, ಅದರಲ್ಲಿ‌ 158 ಭರವಸೆಗಳನ್ನು ಈಡೇರಿಸಿದ್ದೇನೆ. ಬಿಜೆಪಿಯವರು 600 ಭರವಸೆ ಕೊಟ್ಟರು, ಅದರಲ್ಲಿ ಹತ್ತು ಪರ್ಸೆಂಟ್ ಅನ್ನೂ ಈಡೇರಿಸಿಲ್ಲ. ನಾನು ಒಂದೇ ವೇದಿಕೆಗೆ ಬನ್ನಿ ಚರ್ಚೆ ಮಾಡೋಣ ಎಂದು ಹೇಳಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತೆತ್ತಿದರೆ ಧಮ್, ತಾಕತ್ತು ಎಂದೆಲ್ಲ ಹೇಳುತ್ತಾರೆ. ಬರೀ ಮಾತಲ್ಲಿ ಹೇಳುವುದಲ್ಲ, ಚರ್ಚೆಗೆ ಬರಲಿ. ಚರ್ಚೆ ಮಾಡಲು ಅವರಿಗೆ ಧಮ್, ತಾಕತ್ತು ಇಲ್ಲ. ನಿಮ್ಮ ಧಮ್, ತಾಕತ್ತನ್ನು ಚರ್ಚೆಯಲ್ಲಿ ತೋರಿಸಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ನಾವು ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್, 10 ಕೆಜಿ‌ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Election : ಸಿದ್ದು ಕೋಲಾರದಲ್ಲಿ ನಿಲ್ಲೋದು ಡೌಟು; ಕೊನೆಗೆ ಸಾಬಣ್ಣನ ಕ್ಷೇತ್ರಕ್ಕೆ ಹೋಗಿ ಅಲ್ಲಾಹು ಅಕ್ಬರ್ ಅನ್ನಬೇಕು: ಈಶ್ವರಪ್ಪ

Exit mobile version