Site icon Vistara News

Karnataka Elections : ಕಾಂಗ್ರೆಸ್‌ನಲ್ಲಿ ನಾವು 60 ಸೀಟು ಗೆದ್ದರೆ ಲಿಂಗಾಯತರೇ ಸಿಎಂ; ಶಾಮನೂರು ಹೊಸ ವರಸೆ

Shamanur Shivashankarappa

#image_title

ದಾವಣಗೆರೆ: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವೆ ನಡೆಯುತ್ತಿರುವ ಮುಖ್ಯಮಂತ್ರಿ ಕಾಳಗಕ್ಕೆ ಈಗ ಹೊಸಬರೊಬ್ಬರು ಪ್ರವೇಶ ಪಡೆದಿದ್ದಾರೆ. ಅವರೇ ದಾವಣಗೆರೆ ದಕ್ಷಿಣದ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ. ಅವರು ತಾವೇ ಸಿಎಂ ಅಂತೇನೂ ಹೇಳಿಲ್ಲ. ಬದಲಾಗಿ, ಚುನಾವಣೆಯಲ್ಲಿ (Karnataka Elections) ಕಾಂಗ್ರೆಸ್‌ ಪಕ್ಷದಿಂದ 60 ಜನ ಲಿಂಗಾಯತರು ಗೆದ್ದರೆ ಲಿಂಗಾಯತರೇ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ 70 ಜನರಿಗೆ ಸೀಟ್ ಕೊಡಲು ಕೇಳಿದ್ದೇವೆ. ರಾಜ್ಯದಲ್ಲಿ 60ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ಶಾಮನೂರು ಶಿವಶಂಕರಪ್ಪ (Shamanur Shivashankarappa).

ʻʻಲಿಂಗಾಯತರು 60ರಿಂದ 70 ಸೀಟ್ ಗೆಲ್ಲುತ್ತಾರೆ. ಅವರಲ್ಲಿ ಯಾರಿಗೆ ಮೆಜಾರಿಟಿ ಬರುತ್ತದೋ ಅವರನ್ನೇ ಸಿಎಂ ಮಾಡುತ್ತಾರೆ. ಅಂತಿಮವಾಗಿ ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆʼʼ ಎನ್ನುವುದು ಶಾಮನೂರು ಶಿವಶಂಕರಪ್ಪ ಅವರ ಮಾತು.

ʻʻನಾನು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ. ಎಲ್ಲ ಲಿಂಗಾಯತರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು‌. ಜಾಸ್ತಿ ಜನ ಗೆದ್ದು ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗುವುದು ಖಚಿತʼʼ ಎಂದಿರುವ ಶಿವಶಂಕರಪ್ಪ, ಲಿಂಗಾಯತರಲ್ಲಿ, ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್ ಕೂಡಾ ರೇಸ್‌ನಲ್ಲಿ ಇದ್ದಾರೆ ಎಂದಿದ್ದಾರೆ.

ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 32 ಮಂದಿ ಲಿಂಗಾಯತರಿಗೆ ಟಿಕೆಟ್‌ ನೀಡಿದೆ. ಎರಡನೇ ಪಟ್ಟಿಯಲ್ಲಿ 33 ವೀರಶೈವ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಈಗಾಗಲೇ ಒತ್ತಾಯ ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಒಬ್ಬರಿಗೂ ಟಿಕೆಟ್‌ ನೀಡಿಲ್ಲ ಎಂದು ಈಗಾಗಲೆ ಸಮುದಾಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ರಾಜಾಜಿನಗರದಲ್ಲಿ ವೀರಶೈವ ಲಿಂಗಾಯತರ ಬದಲಿಗೆ ಒಕ್ಕಲಿಗರಾದ, ಅದರಲ್ಲೂ ಬಿಜೆಪಿಯಿಂದ ಆಗಮಿಸಿದ ಪುಟ್ಟಣ್ಣ ಅವರಿಗೆ ಟಿಕೆಟ್‌ ಘೊಷಣೆ ಮಾಡಲಾಗಿದೆ. ಈ ಹಿಂದಿನ ಕಾರಣಗಳಿಗಾಗಿ ಸಮುದಾಯದವರು ಕಾಂಗ್ರೆಸ್‌ ಕುರಿತು ಮುನಿಸಿಕೊಂಡಿದ್ದು, ಹೀಗೆ ಮಾಡಿದರೆ ಮತ್ತಷ್ಟು ಸಮಸ್ಯೆ ಆಗುತ್ತದೆ ಎಂದು ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಗೆಲ್ಲುವ ವಾತಾವರಣ ಇರುವ ಕಡೆ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಖಂಡ್ರೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ ಜಾತಿ ಸಮೀಕರಣ ಮಾಡಬೇಕಾಗಿರುತ್ತದೆ. ಇದರ ನಡುವೆಯೂ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ನಡುವೆ, ಶಾಮನೂರು ಶಿವಶಂಕರಪ್ಪನವರು ಲಿಂಗಾಯತರೇ ಮುಖ್ಯಮಂತ್ರಿ ಎಂಬ ವಾದವನ್ನು ಮಾಡಿರುವುದು ಹೊಸ ಸಂಗತಿಯಾಗಿದೆ. ಶಾಮನೂರು ಅವರು ಸ್ವತಃ ತಾವೊಬ್ಬ ಸಿಎಂ ಅಭ್ಯರ್ಥಿ ಎಂದು ಪರಿಗಣಿಸಿದಂತೆ ಕಾಣುತ್ತಿದೆ. ಅವರಿಗೆ ಈಗ 90 ವರ್ಷ ದಾಟಿದೆ. ಆದರೂ ಅವರು ಅತ್ಯಂತ ಲವಲವಿಕೆಯಿಂದ ಓಡಾಡುತ್ತಿದ್ದಾರೆ.

ಇದನ್ನೂ ಓದಿ : ವಿಸ್ತಾರ Fact Check: ಡಿ.ಕೆ. ಶಿವಕುಮಾರ್‌ ಸಿಎಂ ಆಗುವುದಿಲ್ಲ ಎಂದರೇ ಸಿದ್ದರಾಮಯ್ಯ? NDTV ಸಂದರ್ಶನದಲ್ಲಿ ಹೇಳಿದ್ದೇನು? ಇಲ್ಲಿದೆ ಸತ್ಯ

Exit mobile version