Site icon Vistara News

Karnataka Elections 2023 : ಡಿಕೆಶಿ ಹಲವು ನಾಯಕರಿಗೆ ಗಾಳ ಹಾಕ್ತಿರೋದು ನಿಜ, ನಾವ್ಯಾರೂ ಹೋಗೊಲ್ಲ ಎಂದ ಸಚಿವ ಮುನಿರತ್ನ

munirathna DKS

#image_title

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿ ಶಾಸಕರಿಗೆ (Karnataka Elections 2023) ಟಿಕೆಟ್‌ ಆಫರ್‌ ಮಾಡುತ್ತಿದ್ದಾರೆ, ಅಂದು ಪಕ್ಷ ಬಿಟ್ಟು ಹೋದವರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ತೋಟಗಾರಿಕಾ ಸಚಿವ ಮುನಿರತ್ನ ಅವರು ಸಮರ್ಥಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಹಲವು ನಾಯಕರನ್ನು ಭೇಟಿ ಮಾಡುತ್ತಿರುವುದು ನಿಜ. ಅವರ ಪ್ರಯತ್ನ ನಡೆಯುತ್ತಿದೆ. ಎಲ್ಲರ ಜತೆ ಸಂಪರ್ಕ ಮಾಡುತ್ತಿದ್ದಾರೆ. ಈ ಪ್ರಯತ್ನ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದೆ. ಆದರೆ, ನಾವೆಲ್ಲ ನಿಮ್ಮ ಸಹವಾಸ ಬೇಡ, ಬಿಜೆಪಿ ಬಿಡೊಲ್ಲ ಅಂತ ಅಂತ ಹೇಳಿದ್ದೇವೆ. ಆದರೂ ನಿಮಗಾಗಿ ಕಾಯುತ್ತಿದ್ದೇವೆ ಅಂತ ಹೇಳಿದರು ಎಂದು ಹೇಳಿರುವ ಮುನಿರತ್ನ ಅವರು, ʻʻನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಆಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆʼʼ ಎಂದರು.

ʻʻನಾನು‌ ರಾಜಕೀಯ ಬಿಡುತ್ತೇನೆಯೇ ಹೊರತು ಬಿಜೆಪಿ ಬಿಡುವುದಿಲ್ಲ. ನಾವು ಪಕ್ಷದಲ್ಲಿ ಇದ್ದಾಗ ಕಾಲ ಕಸ ಮಾಡಿದರು. ಅವತ್ತು ಸರಿಯಾಗಿ ನಡೆದುಕೊಂಡಿದ್ದರೆ ಅವರಿಗೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ. ನನಗೆ ಬಿಜೆಪಿ ಎಲ್ಲವನ್ನು ಕೊಟ್ಟಿದೆ. ನಾನು ಖಂಡಿತ ಬಿಜೆಪಿ ಬಿಡೊಲ್ಲʼʼ ಎಂದು ಹೇಳಿದರು. ಅವರು ವಿಕಾಸ ಸೌಧದಲ್ಲಿ ತಮ್ಮ ಖಾತೆಯ ಸಾಧನೆಯ ಬಗ್ಗೆ ಮಾತನಾಡುತ್ತಾ ರಾಜಕೀಯವನ್ನೂ ಪ್ರಸ್ತಾಪಿಸಿದರು.

ಮುನಿರತ್ನ ಮತ್ತು 14 ಮಂದಿ ಕಾಂಗ್ರೆಸ್‌, ಹಾಗೂ ಮೂವರು ಜೆಡಿಎಸ್‌ ಶಾಸಕರು ಈ ಹಿಂದೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಉಪಚುನಾವಣೆಯಲ್ಲಿ ಗೆದ್ದುಬಂದು ಮಂತ್ರಿಗಳಾದ ಇವರಲ್ಲಿ ಕೆಲವರು ಮತ್ತೆ ಕಾಂಗ್ರೆಸ್‌ ಕಡೆಗೆ ಹೊರಟಿದ್ದಾರೆ ಎಂಬ ಸುದ್ದಿ ಇತ್ತು. ಸಿಎಂ ಬೊಮ್ಮಾಯಿ ಅವರು ಕೂಡಾ ಇಂಥ ಶಾಸಕರಿಗೆ ಡಿ.ಕೆ. ಶಿವಕುಮಾರ್‌ ಗಾಳ ಹಾಕುತ್ತಿದ್ದಾರೆ ಎಂದು ಆಪಾದಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌ ಅವರು, ನಾವು ಯಾರನ್ನೂ ಸೆಳೆಯುತ್ತಿಲ್ಲ. ಅವರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‌ ಕೆಲವು ಸ್ಥಾನಗಳನ್ನು ಖಾಲಿ ಬಿಟ್ಟಿರುವುದು ನಿಜ. ಆದರೆ, ಸಚಿವ ಮುನಿರತ್ನ ಅವರು ಪ್ರತಿನಿಧಿಸುತ್ತಿರುವ ರಾಜರಾಜೇಶ್ವರಿ ಕ್ಷೇತ್ರಕ್ಕೆ ಆಗಲೇ ಕಾಂಗ್ರೆಸ್‌ ಕುಸುಮಾ ಅವರಿಗೆ ಟಿಕೆಟ್‌ ನೀಡಿದೆ.

ತೋಟಗಾರಿಕಾ ಇಲಾಖೆಯಿಂದ ಪಾರ್ಕ್‌ ನಿರ್ಮಾಣ

ತೋಟಗಾರಿಕಾ ಇಲಾಖೆಯಿಂದ ಎರಡು ಪಾರ್ಕ್‌ಗಳ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ ಅವರು ಝೂಮ್‌ ಲೈವ್‌ನಲ್ಲಿ ಗುದ್ದಲಿ ಪೂಜೆಯನ್ನೂ ನಡೆಸಲಾಗಿದೆ ಎಂದು ತಿಳಿಸಿದರು.

ʻʻಜಾರಕಬಂಡೆ ಕಾವಲ್‌ನಲ್ಲಿ 300 ಎಕರೆಯಲ್ಲಿ ಪಾರ್ಕ್ ನಿರ್ಮಾಣ ಮಾಡುತ್ತಿದ್ದೇವೆ, ಬೆಟ್ಟಹಲಸೂರಿನಲ್ಲೂ ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ಅತಿ ದೊಡ್ಡ ಉದ್ಯಾನವನ ನಿರ್ಮಾಣ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು. ಲಾಲ್ ಬಾಗ್ ರೀತಿಯ ಎರಡು ದೊಡ್ಡ ಪಾರ್ಕ್ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದರು.

ʻʻತೋಟಗಾರಿಕಾ ಇಲಾಖೆಯಲ್ಲಿ ಕೆಲಸ ಮಾಡಿರುವುದು ತೃಪ್ತಿ ಇದೆ. ರೈತರಿಗಾಗಿ ಕೆಲಸ ಮಾಡುವ ಇಲಾಖೆ ಇದು. ಯಾರೂ ಮಾಡದ ದೊಡ್ಡ ಸಾಧನೆ ತೋಟಗಾರಿಕೆ ಇಲಾಖೆಯಲ್ಲಿ ಮಾಡಿದ್ದೇನೆʼʼ ಎಂದು ಹೇಳಿದರು

ಇದನ್ನೂ ಓದಿ Karnataka Elections 2023 : ಬೊಮ್ಮಾಯಿ Vs ಡಿಕೆಶಿ; ನೀವು ಸಿಎಂ ಆಗಿದ್ದು ಹೇಗೆ ಎಂದು ಕೇಳಿದ DKS

Exit mobile version