ಮಂಗಳೂರು: ʻʻಜಗದೀಶ್ ಶೆಟ್ಟರ್ ಅವರು ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಕೊನೆಯ ತನಕ ಪ್ರಯತ್ನ ಆಗಿದೆ, ರಾಷ್ಟ್ರೀಯ ನಾಯಕರು ಮನೆ ಬಾಗಿಲಿಗೆ ಹೋದರೂ ಗೌರವ ಕೊಡದೇ ಹೋಗಿದ್ದಾರೆ. ಮಾನಸಿಕವಾಗಿ ಯಾವುದೋ ಕಾರಣಕ್ಕೆ ಪಕ್ಷ ಬಿಡೋ ತೀರ್ಮಾನ ತೆಗೆದುಕೊಂಡಿದ್ದಾರೆ. ಇವತ್ತು ಪಾರ್ಟಿಯಿಂದ ಹೊರಗೆ ಹೋಗಿ ಮಾತನಾಡೋದು ಶೋಭೆ ತರುವುದಿಲ್ಲʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಅವರ ವಿರುದ್ಧ ನಯವಾದ ಶಬ್ದಗಳಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಅನ್ನೋದನ್ನು ಕಾದು ನೋಡ್ತೇವೆ ಎಂದಿದ್ದಾರೆ.
ತನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ ಎಂಬ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್ ಅವರು, ʻʻರಾಷ್ಟ್ರದಲ್ಲಿ ನಮ್ಮ ಪಕ್ಷಕ್ಕೆ ಅದರದ್ದೇ ಆದ ನಿಯಮಗಳಿವೆ. ನಮ್ಮ ಪಕ್ಷದಲ್ಲಿ ಬಹಳ ವರ್ಷ ದುಡಿದವರು ಜಗದೀಶ್ ಶೆಟ್ಟರ್. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್, ಎಲೆಕ್ಷನ್ ಕಮಿಟಿ ನಿರ್ವಹಣೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತದೆ. ಯಾರೋ ಒಬ್ಬ ನಮ್ಮಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಿಲ್ಲ. ಎಲ್ಲಾ ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ. ನಾವು ಮತಗಟ್ಟೆ ಕಾರ್ಯಕರ್ತರ ಓಟ್ ನಲ್ಲಿ ಅಭಿಪ್ರಾಯ ಸಂಗ್ರಹಿಸುತ್ತೇವೆʼʼ ಎಂದು ವಿವರಿಸಿದರು.
ʻʻಜಗದೀಶ್ ಶೆಟ್ಟರ್ ಕೂಡಾ ಪಾರ್ಟಿಯ ಅಧ್ಯಕ್ಷರಾಗಿದ್ದವರು. ಇಲ್ಲಿನ ಸಾಮೂಹಿಕ ನಾಯಕತ್ವ ಅವರಿಗೆ ಗೊತ್ತಿದೆ. ಇವತ್ತು ಪಾರ್ಟಿಯಿಂದ ಹೊರಗೆ ಹೋಗಿ ಮಾತನಾಡೋದು ಶೋಭೆ ತರುವುದಿಲ್ಲʼʼ ಎಂದು ಹೇಳಿದರು. ʻʻಸಂತೋಷ್ ಜೀ ನಮ್ಮ ಸಂಘಟನಾ ಕಾರ್ಯದರ್ಶಿ, ಅವರು ಸಂಘಟನೆ ಕಾರ್ಯ ಮಾಡ್ತಾರೆʼʼ ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಲಿಂಗಾಯತ ಸಿಎಂ ಹೇಳಿಕೆ ಪುನರುಚ್ಚಾರ
ರಾಜ್ಯದಲ್ಲಿ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡುತ್ತದೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದ ನಳಿನ್ ಕುಮಾರ್ ಕಟೀಲ್, ʻʻನಾವು ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತಾ ಇದ್ದೇವೆ. ಎಲ್ಲಾ ಸಂದರ್ಭದಲ್ಲಿ ಬಿಜೆಪಿ ಮಾತ್ರ ಲಿಂಗಾಯತರನ್ನ ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಾರ್ಟಿಗೂ ಆ ತಾಕತ್ತಿಲ್ಲʼʼ ಎಂದು ಹೇಳಿದರು. ತಾಕತ್ತಿದ್ದರೆ ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ನಮ್ಮವರಿಗಾಗಿ ಕಾಯುತ್ತಿರುವ ಕಾಂಗ್ರೆಸ್
ʻʻಕಾಂಗ್ರೆಸ್ ಗೆ ಬಹಳ ಕ್ಷೇತ್ರದಲ್ಲಿ ಅಭ್ಯರ್ಥಿಗಲ ಕೊರತೆ ಇದೆ. ಡಿಸೆಂಬರ್ ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೂ ಆಗಿಲ್ಲ. ನಾವು ಹತ್ತು ದಿವಸದಲ್ಲಿ ಅಭ್ಯರ್ಥಿ ಅಯ್ಕೆ ಪ್ರಕ್ರಿಯೆ ಮುಗಿಸಿದ್ದೇವೆ. ಅವರು ಶುರು ಮಾಡಿ ನಾಲ್ಕು ತಿಂಗಳಾಯಿತು. ಅವರಿಗೆ ಅಭ್ಯರ್ಥಿ ಕೊರತೆ ಎಷ್ಟಿದೆ ಎಂದರೆ ನಮ್ಮಲ್ಲಿಂದ ಬಂಡುಕೋರರಾಗಿ ಹೊರ ಬರುವ ಅಭ್ಯರ್ಥಿಗಳಿಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆʼʼ ಎಂದರು ಕಟೀಲ್.
ʻʻಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗೆ ಫೈಟ್ ನಡೀತಾ ಇದೆ. ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಜೊತೆ ಈಗ ಪರಮೇಶ್ವರ್ ರೇಸ್ ನಲ್ಲಿ ಇದ್ದಾರೆʼʼ ಎಂದು ನಳಿನ್ ಹೇಳಿದರು.
ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ
ಕುಟುಂಬ ರಾಜಕಾರಣವನ್ನು ವಿರೋಧಿಸುತ್ತೇವೆ ಎಂದು ಹೇಳುವ ಬಿಜೆಪಿ ಹೆಂಡತಿ ಮಕ್ಕಳಿಗೆ ಟಿಕೆಟ್ ಕೊಡುತ್ತಿರುವ ಬಗ್ಗೆ ಕೇಳಿದಾಗ, ʻʻಕುಟುಂಬ ರಾಜಕಾರಣದಲ್ಲಿ ಎರಡು ವಿಚಾರ ಇದೆ. ಕಾರ್ಯಕರ್ತರಿಗೆ ರಾಷ್ಟ್ರೀಯ ನಾಯಕರು ಸೀಟ್ ಕೊಡೋದು ಇನ್ನೊಂದು. ಮನೆಯ ಒಳಗೆ ಕೂತು ಮನೆಯವರಿಗೇ ಸೀಟ್ ಕೊಡೋದು ಒಂದು. ನಮ್ಮ ಪಕ್ಷದ ಕಾರ್ಯಕರ್ತರಾಗಿ ಕುಟುಂಬದ ಒಳಗೆ ಇದ್ದವರಿಗೆ ಘೋಷಣೆ ಮಾಡೋದು ಇನ್ನೊಂದು. ಎರಡನೆಯದು ತಪ್ಪಲ್ಲ. ಇದು ಕುಟುಂಬ ರಾಜಕಾರಣ ಆಗಲ್ಲ, ಇದು ರಾಷ್ಟ್ರೀಯ ನಾಯಕರ ಯೋಚನೆʼʼ ಎಂದರು.
ʻʻನಾವು ಒಂದೇ ಮನೆಯಲ್ಲಿ ಮಗ, ಮೊಮ್ಮಗ, ಸೊಸೆಗೆ ಕೊಡುವುದಲ್ಲ. ಮನೆಯಲ್ಲಿ ತೀರ್ಮಾನ ಆಗೋದಲ್ಲ, ಇದು ರಾಷ್ಟ್ರೀಯ ನಾಯಕರ ತೀರ್ಮಾನʼʼ ಎಂದರು.
ಬಂಡಾಯಕ್ಕೆಲ್ಲ ಭಯಪಡುವ ಪಕ್ಷ ನಮ್ಮದಲ್ಲ
ʻʻಬಂಡಾಯಕ್ಕೆಲ್ಲ ಭಯ ಪಡುವ ಪಕ್ಷ ಬಿಜೆಪಿ ಅಲ್ಲ. ನಾವು ಕಾರ್ಯಕರ್ತರ ಆಧಾರದಲ್ಲಿ ಗೆಲ್ಲೋ ಪಕ್ಷ. 66-77 ಜನ ಹೊಸ ಮುಖವನ್ನು ಚುನಾವಣೆ ಹೊತ್ತಲ್ಲಿ ತರೋ ಧೈರ್ಯ ಯಾರು ತೋರಿಸ್ತಾರೆ ಹೇಳಿ? ನಾವು ಆ ಧೈರ್ಯ ತೋರಿದ್ದೇವೆ, ಹಾಗಾಗಿ ಇದಕ್ಕೆಲ್ಲಾ ಭಯ ಪಡಲ್ಲʼʼ ಎಂದರು.
ಇದನ್ನೂ ಓದಿ : Karnataka Elections 2023: ನನಗೆ ಟಿಕೆಟ್ ತಪ್ಪಿಸಿದ್ದು ಬಿ.ಎಲ್ ಸಂತೋಷ್, ಇವರಿಂದ್ಲೇ ಬಿಜೆಪಿ ಮುಳುಗೋದು; ಶೆಟ್ಟರ್ ಚಾರ್ಜ್‌ಶೀಟ್