ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ (Karnataka Elections) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ (KGF Babu) ಅವರು ಇದೀಗ ಮೊದಲ ಹಂತದಲ್ಲಿ ತಮ್ಮ ಎರಡನೇ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮೊದಲ ಪತ್ನಿಯೂ ಜತೆಗಿದ್ದರು. ಮತ್ತು ಅವರಿಬ್ಬರೂ ಜತೆಯಾಗಿ ಆಗಲೇ ಪ್ರಚಾರ ಕೂಡಾ ಶುರು ಮಾಡಿದ್ದಾರೆ.
ಶಾಝಿಯಾ ತರನ್ನುಮ್ ಅವರು ಗುರುವಾರ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ಅಫಿಡವಿಟ್ ನೋಡಿದರೆ ಅಚ್ಚರಿಯಾಗುತ್ತದೆ. ನಿಜವೆಂದರೆ ಶಾಝಿಯಾ ಅವರ ಬಳಿ ಅಷ್ಟೇನೂ ಆಸ್ತಿ ಇಲ್ಲ. ಆದರೆ, ಅವರ ಗಂಡನ ಆಸ್ತಿ ಪ್ರಮಾಣ ಕೇಳಿದ್ರೆ ಬಾಯಿಗೆ ಬೆರಳಿಡುವಂತಾಗುತ್ತದೆ.
ಶಾಝಿಯಾ ತರುನ್ನುಮ್ ಅವರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಷೇರು ಹೂಡಿಕೆ, ಆಭರಣ ಎಲ್ಲ ಸೇರಿದರೆ 40.59 ಲಕ್ಷ ರೂ.ಗಳ ಚರಾಸ್ತಿ ಆಗುತ್ತದೆ. ಅದೇ ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ 83.56 ಕೋಟಿ ರೂ.ಗಳ ಚರಾಸ್ತಿ ಮತ್ತು 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಸೇರಿ ಒಟ್ಟು 1,621 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ!
ಐದು ಕಾರುಗಳ ಖರೀದಿಗೆ ಕೊಟ್ಟ ಮುಂಗಡವೇ 2.67 ಕೋಟಿ ರೂ.
ಸಾಮಾನ್ಯ ಜನರು ಕಾರು ಖರೀದಿಸಲು ಮುಂದಾದರೆ ಅದರ ರೇಂಜ್ ಐದರಿಂದ 10 ಲಕ್ಷ ಇರುತ್ತದೆ. ಅದೂ ಬ್ಯಾಂಕ್ ಲೋನ್! ಆದರೆ, ಕೆಜಿಎಫ್ ಬಾಬು ಅವರು ಕಾರು ಖರೀದಿಗೆ ಕೊಟ್ಟಿರುವ ಎಡ್ವಾನ್ಸ್ ಹಣವೇ 2.67 ಕೋಟಿ ರೂ! ಅವರು ಬೇರೆ ಬೇರೆಯವರಿಗೆ ಕೊಟ್ಟಿರುವ ಸಾಲವೇ 46 ಕೋಟಿ ರೂ.!
ಶಾಝಿಯಾ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ. ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಿದ್ದಾರೆ. ಇವುಗಳಲ್ಲಿ ಬೆಂಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್ ರಾಯ್ಸ್, ಟೊಯೋಟಾ ವೆಲ್‌ಫೈರ್ ಕಾರುಗಳು ಸೇರಿವೆ.
ಶಾಜಿಯಾ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ. ಆದರೆ, ಕೆಜಿಎಫ್ ಬಾಬು ಹೆಸರಿನಲ್ಲಿ 3 ಕೃಷಿ ಜಮೀನು, 24 ಕೃಷಿಯೇತರ ಭೂಮಿ ಇದ್ದು ಇದರ ಒಟ್ಟು ಮೌಲ್ಯ 1,538.15 ಕೋಟಿ ರೂ.!
ಜಮೀರ್ ಅಹಮದ್‌ಗೂ ಸಾಲ ಕೊಟ್ಟಿದ್ದಾರೆ
ಪತಿಯು 65.32 ಕೋಟಿ ರೂ. ಸಾಲ ಹೊಂದಿದ್ದಾರೆ ಮತ್ತು 13.43 ಕೋಟಿ ರೂ. ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ. ಕೆಜೆಎಫ್ ಬಾಬು ಅವರು ಕಾಂಗ್ರೆಸ್ ನಾಯಕ ಎಂ.ಆರ್. ಸೀತಾರಾಂ ಅವರಿಗೆ 22.19 ಕೋಟಿ ರೂ. ಸಾಲ ಬಾಕಿ ತೀರಿಸಬೇಕಾಗಿದೆ.
ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಕೆಜಿಎಫ್ ಬಾಬು 3.90 ಕೋಟಿ ರೂ. ಸಾಲ ಕೊಟ್ಟಿದ್ದಾರಂತೆ.