ಚಿತ್ರದುರ್ಗ/ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಕನ್ಫರ್ಮ್ ಆಗಿದೆ. ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಚಿತ್ರದುರ್ಗದ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಕ್ಕಾ ಮಾಡಿಕೊಂಡು ಬಿಜೆಪಿ ತೊರೆಯಲಿದ್ದಾರೆ. ಮೂಲ ಕಾಂಗ್ರೆಸಿಗರಾಗಿರುವ ಎನ್‌ವೈ ಗೋಪಾಲಕೃಷ್ಣ 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾಗಿದ್ದರು.
ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ
ಗೋಪಾಲಕೃಷ್ಣ ಅವರು ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಬಿಜೆಪಿಯನ್ನು ತೊರೆಯಲಿದ್ದಾರೆ. ಅವರು ಶುಕ್ರವಾರ ಶಿರಸಿಗೆ ತೆರಳಿ ಅಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ.
ಎನ್.ವೈ. ಗೋಪಾಲಕೃಷ್ಣ ಅವರು ಮೂಲತಃ ಮೊಳಕಾಲ್ಮುರು ಕ್ಷೇತ್ರದವರು. ಅಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ಈ ಬಾರಿ ಬಿಜೆಪಿ ನಾಯಕ ಶ್ರೀರಾಮುಲು ಅವರು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸದೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬರಲಿದ್ದಾರೆ. ಇದು ಗೋಪಾಲಕೃಷ್ಣ ಅವರಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ, ಕಳೆದ ಬಾರಿ ಮೊಳಕಾಲ್ಮುರುವಿನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಬಿ. ಯೋಗೇಶ್ ಬಾಬುಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಗಳಿವೆ.
ಆರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು
ಎನ್. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್‌ನಿಂದ ಟಿಕೆಟ್ ಪಕ್ಕಾ ಆಗಿದೆ
ಗೋಪಾಲಕೃಷ್ಣ ಅವರು ಎರಡು ದಿನದ ಹಿಂದೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಗುರುವಾರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ನೇತೃತ್ವದಲ್ಲಿ ಜಮೀರ್ ಅಹಮದ್ ಅವರ ಮನೆಯಲ್ಲಿ ನಡೆದು ಟಿಕೆಟ್ ನೀಡಲು ಒಪ್ಪಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಟಿಕೆಟ್ ಸಿಗುವುದು ಪಕ್ಕಾ ಆದ ಮೇಲೆ ಗೋಪಾಲಕೃಷ್ಣ ಅವರು ಬಿಜೆಪಿ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಅವರು ಪ್ರಕಟಿಸಿದರು.
ಇದನ್ನೂ ಓದಿ : Karnataka Election: ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ರಾಜೀನಾಮೆ ಅಂಗೀಕಾರ