Site icon Vistara News

Karnataka Elections : ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ; ಈಶ್ವರಪ್ಪ

K S Eshwarappa makes a statement against Siddaramaiah.

ಶಿವಮೊಗ್ಗ: ನಾನು ಹಿಂದೆಯೂ ತುಂಬಾ ಸಾರಿ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ: ಹೀಗೆಂದು ಮತ್ತೆ ಹೇಳಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ʻʻಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ. ಇದನ್ನು ಹಿಂದಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ. ಸಿದ್ದರಾಮಯ್ಯಗೆ ಯಾವುದೇ ಜಾತಿ ಬೆಂಬಲ ಇಲ್ಲ. ಲಿಂಗಾಯತರು ಅವರನ್ನು ಬೆಂಬಲಿಸಲ್ಲ. ಒಕ್ಕಲಿಗರು ಮತ ಹಾಕಲ್ಲ. ಕುರುಬರು ಅವರ ಜೊತೆ ಇಲ್ಲ. ಈಗ ಅವರ ಜತೆ ಇರುವುದು ಕೇವಲ ಅಲ್ಪಸಂಖ್ಯಾತರು ಮಾತ್ರʼʼ ಎಂದು ಹೇಳಿದರು.

ಬಾದಾಮಿ ಅವರಿಗೆ ದೂರ ಆಗುತ್ತದೆ. ವರುಣಾದಲ್ಲಿ ಸ್ಪರ್ಧಿಸಿದರೆ ಮಗನಿಗೆ ತೊಂದರೆ ಆಗುತ್ತದೆ. ಮೂರ್ನಾಲ್ಕು ಬಾರಿ ಗೆದ್ದ ಚಾಮುಂಡೇಶ್ವರಿ ಕ್ಷೇತ್ರ ಹತ್ತಿರವಿದ್ದರೂ ಅವರು ಅಲ್ಲಿಗೆ ಹೋಗಲ್ಲ, ಯಾಕೆಂದರೆ, ಅಲ್ಲಿನ ಜನ ಅವರನ್ನು ಸೋಲಿಸುತ್ತಾರೆ ಎಂಬ ಭಯ ಇದೆ ಎಂದು ಈಶ್ವರಪ್ಪ ವಿಶ್ಲೇಷಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ

ʻʻʻಕಾಂಗ್ರೆಸ್ ನವರು ರಾಷ್ಟ್ರದ್ರೋಹಿ ಸಂಘಟನೆಗಳಾದ ಎಸ್.ಡಿ.ಪಿ.ಐ., ಪಿ.ಎಫ್‌.ಐ. ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಎಸ್‌ಡಿಪಿಐ ನಾಯಕನ ಮಾತಿನಿಂದಲೇ ಸ್ಪಷ್ಟವಾಗಿದೆ. ಇದನ್ನು ರಾಜ್ಯದ ಜನರು ಗಮನಿಸಬೇಕು. ಕಾಂಗ್ರೆಸ್‌ನವರು ನೀಚತನಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲʼʼ ಎಂದು ಹೇಳಿದ ಈಶ್ವರಪ್ಪ, ಬಿಜೆಪಿ ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಲಿದೆ ಎಂದರು.

ʻʻಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಸಾಬೀತಾಗಿದೆ. ಈ ನಡುವೆ ಕೇವಲ ಅಧಿಕಾರ ಹಿಡಿಯಲು ದೇಶದ್ರೋಹಿ ಸಂಘಟನೆಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿದೆ. ಇಂತಹ ಅವಕಾಶವಾದಿ ಕಾಂಗ್ರೆಸ್ ಗೆ ಅಧಿಕಾರದಿಂದ ದೂರವಿಡಬೇಕುʼʼ ಎಂದು ಈಶ್ವರಪ್ಪ ಹೇಳಿದರು.

ʻʻರಾಷ್ಟ್ರದ್ರೋಹಿ ಸಂಘಟನೆಗಳು ಬಾಂಬ್ ಉತ್ಪಾದನೆ ಪ್ರಯತ್ನ ಮಾಡುತ್ತಿವೆ. ಉಗ್ರ ಚಟುವಟಿಕೆಯಲ್ಲಿ ಯುವಕರಿಗೆ ಕುಮ್ಮಕ್ಕು ನೀಡುತ್ತಿವೆ. ಬಿಜೆಪಿ ಸರ್ಕಾರದಡಿ ಗೃಹ ಇಲಾಖೆ ಹಲವರನ್ನು ಬಂಧಿಸಿದೆ. ಶಿವಮೊಗ್ಗದಿಂದ ಹಲವು ಮುಸ್ಲಿಂ ಗೂಂಡಾಗಳನ್ನು ಗಡಿಪಾರು ಮಾಡಿತ್ತು. ಇಷ್ಟರ ನಡುವೆಯೇ ಶಾಂತವಾಗಿದ್ದ ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯಿತು, ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಲಾಯಿತು. ಇದು ಮತ್ತೊಮ್ಮೆ ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆಯ ಸುಳಿವು ನೀಡಿತುʼʼ ಎಂದು ಈಶ್ವರಪ್ಪ ವಿವರಿಸಿದರು.

ಅಸಮಾಧಾನ ಸಹಜ, ಸರಿ ಮಾಡಿಕೊಳ್ಳುತ್ತೇವೆ

ʻʻಬಿಜೆಪಿ ಒಂದು ಅತಿ ದೊಡ್ಡ ಪಕ್ಷ. ಹೀಗಾಗಿ ಅಲ್ಲಲ್ಲಿ ಅಸಮಾಧಾನ ಇರುವುದು ಸಹಜ. ಎಲ್ಲಾ ಗೊಂದಲ ನಿವಾರಣೆ ಆಗುತ್ತದೆʼʼ ಎಂದು ಹೇಳಿದ ಈಶ್ವರಪ್ಪ, ʻʻವಿ. ಸೋಮಣ್ಣ ಅವರ ವಿಚಾರ ಬಗೆಹರಿದಿದೆ, ರಮೇಶ್ ಜಾರಕಿಹೊಳಿ ಸಮಸ್ಯೆಯೂ ನಿವಾರಣೆಯಾಗಿದೆʼʼ ಎಂದರು. ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ಬೃಹತ್‌ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : Karnataka Elections 2023 : ಕೋಲಾರದ ಸ್ಪರ್ಧೆಯಿಂದ ಹಿಂದೆ ಸರಿದರಾ ಸಿದ್ದರಾಮಯ್ಯ? ರಾಹುಲ್‌ ಸಲಹೆ ಏನು?

Exit mobile version